ಸಿಡ್ನಿ: ಬಹು ನಿರೀಕ್ಷಿತ ಆಸ್ಟ್ರೇಲಿಯ-ಪಾಕಿಸ್ಥಾನ ನಡುವಿನ ಟಿ20 ಸರಣಿಯ ಆರಂಭದಲ್ಲೇ ಮಳೆ ಆಟವಾಡಿದೆ. ರವಿವಾರ ಸಿಡ್ನಿಯಲ್ಲಿ ನಡೆಯಬೇಕಿದ್ದ ಮೊದಲ ಪಂದ್ಯ ರದ್ದುಗೊಂಡಿದೆ.
ಮಳೆಯಿಂದಾಗಿ ಈ ಪಂದ್ಯವನ್ನು 15 ಓವರ್‌ಗಳಿಗೆ ಸೀಮಿತಗೊಳಿಸ ಲಾಗಿತ್ತು. ಮೊ ದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ 5 ವಿಕೆಟಿಗೆ 107 ರನ್ ಗಳಿಸಿತು. ಡಿ-ಎಲ್ ನಿಯಮದಂತೆ ಆಸ್ಟ್ರೇಲಿಯದ ಗೆಲುವಿಗೆ ನಿಗದಿಯಾದ ಮೊತ್ತ 119 ರನ್. ಬಿರುಸಿನ ಆಟಕ್ಕಿಳಿದ ಫಿಂಚ್ ಪಡೆ 3.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 41 ರನ್ ಮಾಡಿದ ವೇಳೆ ಮತ್ತೆ ಮಳೆ ಸುರಿಯಿತು. ಪಂದ್ಯ ರದ್ದುಗೊಂಡಿತು.
ನುಗ್ಗಿ ಬೀಸತೊಡಗಿದ ಆಸೀಸ್ ನಾಯಕ ಆರನ್ ಫಿಂಚ್ 16 ಎಸೆತಗಳಿಂದ 37 ರನ್ ಸಿಡಿಸಿ ಅಪಾಯಕಾರಿಯಾಗಿ ಗೋಚರಿಸಿದ್ದರು (5 ಬೌಂಡರಿ, 2 ಸಿಕ್ಸರ್). ಡೇವಿಡ್ ವಾರ್ನರ್‌ಗೆ ಎದುರಿಸಲು ಸಿಕ್ಕಿದ್ದು ನಾಲ್ಕೇ ಎಸೆತ. ಇದರಲ್ಲಿ 2 ರನ್ ಮಾಡಿದರು.
ಪಾಕಿಸ್ಥಾನ ಪರ ಆರಂಭಕಾರ, ಬಾಬರ್ ಆಜಂ ನಾಯಕನ ಆಟವಾಡಿ ಔಟಾಗದೆ 59 ರನ್ ಹೊಡೆದರು (38 ಎಸೆತ, 5 ಬೌಂಡರಿ, 2 ಸಿಕ್ಸರ್). ಅನಂತರದ ಹೆಚ್ಚಿನ ಗಳಿಕೆ ಕೀಪರ್ ಮೊಹಮ್ಮದ್ ರಿಜ್ವಾನ್ ಅವರದು (31). ಆಸೀಸ್ ವೇಗಿಗಳಾದ ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್‌ಸನ್ ತಲಾ 2 ವಿಕೆಟ್ ಉರುಳಿಸಿದರು.
2ನೇ ಪಂದ್ಯ ಮಂಗಳವಾರ ಕ್ಯಾನ್‌ಬೆರಾದಲ್ಲಿ ನಡೆಯಲಿದೆ.