Advertisement

ಆಸ್ಟ್ರೇಲಿಯಾ ಓಪನ್‌: ಈ ಬಾರಿಯೂ ಹಳೇ ಹುಲಿಗಳದ್ದೇ ಕಾದಾಟ?

02:22 PM Jan 13, 2018 | |

ಒಂದು ಕಡೆ ದಿಗ್ಗಜರ ಕಾಳಗ, ಮತ್ತೂಂದೆಡೆ ಬಿಟ್ಟ ಕಣ್ಣಿನ ರೆಪ್ಪೆಯನ್ನು ಮುಚ್ಚದಂತೆ ಸೆಳೆಯುವ ಗ್ಲಾಮರ್‌ ದರ್ಶನ, ಇನ್ನೊಂದೆಡೆ ಅಚಾನಕ್‌ ಆಗಿ ದಂತಕಥೆಗೆ ಎಳೆಯ ಪ್ರತಿಭೆಯೊಂದು ಆಘಾತ ನೀಡಿ ಟೆನಿಸ್‌ ಜಗತ್ತನ್ನು ನಿಬ್ಬೆರಗಾಗಿಸುವಿಕೆ… ಇಂತಹ ರೋಚಕ, ಮನಮೋಹಕ ಸಂಗತಿಗಳಿಗೆ ಆಸ್ಟ್ರೇಲಿಯಾ ಓಪನ್‌ನಲ್ಲಿ ಕೊರತೆಯೇ ಇಲ್ಲ.

Advertisement

ಕ್ರಿಕೆಟ್‌, ಫ‌ುಟ್ಬಾಲ್‌ ಅಭಿಮಾನಿಗಳಿಗೆ ವಿಶ್ವಕಪ್‌, ಅಥ್ಲೀಟ್‌ಗಳಿಗೆ ಒಲಿಂಪಿಕ್ಸ್‌ ಹೇಗೊ, ಹಾಗೇ ಟೆನಿಸ್‌ ಅಭಿಮಾನಿಗಳಿಗೆ ಗ್ರ್ಯಾನ್‌ಸ್ಲಾಮ್‌ ಕೂಟ. ಅದರಲ್ಲಿಯೂ ವರ್ಷದ ಪ್ರಥಮ ಗ್ರ್ಯಾನ್‌ಸ್ಲಾಮ್‌ ಆಸ್ಟ್ರೇಲಿಯಾ ಓಪನ್‌ ನಾನಾ ರೀತಿಯಲ್ಲಿ ಟೆನಿಸ್‌ ಅಭಿಮಾನಿಗಳಿಗೆ ಹಬ್ಬದೂಟವಾಗಿರುತ್ತದೆ. ಕಳೆದ ವರ್ಷದ ಫೈನಲ್‌ನಲ್ಲಿ ಹಳೇ ಹುಲಿಗಳೇ ಕಾದಾಟ ನಡೆಸಿದ್ದವು. ನೋ ಡೌಟ್‌, ಈ ವರ್ಷ ಕೂಡ ಅದೇ ಪುನಾರಾವರ್ತನೆಯಾಗುವ ಎಲ್ಲಾ ಸಾಧ್ಯತೆಗಳು ಇವೆ. ಅದು ಹೇಗೆ? ಅನ್ನುವ ಬಗ್ಗೆ ಒಂದು ವಿಶ್ಲೇಷಣೆ ಇಲ್ಲಿದೆ.

ಮತ್ತೆ ಫೆಡರರ್‌, ನಡಾಲ್‌ ಕದನ?

19 ಗ್ರ್ಯಾನ್‌ಸ್ಲಾಮ್‌ಗಳ ವಿಜೇತ ರೋಜರ್‌ ಫೆಡರರ್‌, 16 ಗ್ರ್ಯಾನ್‌ಸ್ಲಾಮ್‌ಗಳ ವಿಜೇತ ರಫಾಯೆಲ್‌ ನಡಾಲ್‌, ಟೆನಿಸ್‌ ಜಗತ್ತು ಕಂಡ ಶ್ರೇಷ್ಠ ಆಟಗಾರರು. 36 ವರ್ಷದ ಫೆಡರರ್‌ ಮತ್ತು 31 ವರ್ಷದ ನಡಾಲ್‌ ಇಂದಿಗೂ ಯುವ ಆಟಗಾರರಿಗೆ ಸವಾಲಾಗಿ ಪ್ರಶಸ್ತಿ ಗೆಲ್ಲುತ್ತಿದ್ದಾರೆ. ಕಳೆದ ಬಾರಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಜೊಕೊವಿಚ್‌, ಆ್ಯಂಡಿ ಮರ್ರೆ, ಸ್ಟಾನ್‌ ವಾವ್ರಿಂಕಾ… ಇಂತಹ ಪ್ರತಿಭೆಗಳನ್ನು ಮಣಿಸಿ ಫೈನಲ್‌ಗೆ ಹೆಜ್ಜೆ ಹಾಕಿದ್ದು, ನಡಾಲ್‌ ಮತ್ತು ಫೆಡರರ್‌. ಈ ಇಬ್ಬರೂ ಅಕ್ಷರಶಃ ಮದಗಜಗಳಂತೆ ಕಾದಾಟ ನಡೆಸಿದ್ದರು. ಟೆನಿಸ್‌ ಅಭಿಮಾನಿಗಳಿಗೆ ಅದು ಎಂದೂ ಮರೆಯಲಾಗದ ಪಂದ್ಯ. ಅಂತಿಮವಾಗಿ ಮ್ಯಾರಥಾನ್‌ ಪಂದ್ಯದಲ್ಲಿ ಫೆಡರರ್‌ ಗೆದ್ದು, 5 ವರ್ಷಗಳ ನಂತರ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಪಡೆದರು. ಈ ಬಾರಿ ಕೂಡ ಇವರೇ ಅಂತಿಮ ಹಂತಕ್ಕೆ ಬಂದು ಕಾದಾಡುವ ಎಲ್ಲಾ ಸಾಧ್ಯತೆಗಳು ಕಾಣುತ್ತಿವೆ.

ಫೆಡರರ್‌, ನಡಾಲ್‌ಗೆ ಸವಾಲು ನೀಡಿ ಚಾಂಪಿಯನ್‌ ಆಗುವ ಸಾಮರ್ಥ್ಯ ಇರುವವರು ಅಂದರೆ ಅದು ಆ್ಯಂಡಿ ಮರ್ರೆ, ಜೊಕೊವಿಚ್‌, ಸ್ಟಾನ್‌ ವಾವ್ರಿಂಕಾಗೆ ಮಾತ್ರ. ಇವರನ್ನು ಬಿಟ್ಟು ಮತ್ತೂಬ್ಬರ ಹೆಸರನ್ನು ಗುರುತಿಸುವುದು ಕಷ್ಟ. ಆದರೆ ಗಾಯಕ್ಕೆ ತುತ್ತಾಗಿರುವ ಮರ್ರೆ, ಕೂಟದಲ್ಲಿ ಪಾಲ್ಗೊಳ್ಳುತ್ತಿಲ್ಲ. ಜೊಕೊ, ಗಾಯದ ಕಾರಣ ದೀರ್ಘ‌ಕಾಲ ವಿಶ್ರಾಂತಿ ಪಡೆದು ವಾಪಸ್‌ ಆಗುತ್ತಿದ್ದಾರೆ. ಹೀಗಾಗಿ ಜೊಕೊ ಮೇಲೆ ನಿರೀಕ್ಷೆ ಇಡುವಂತಿಲ್ಲ. ಇನ್ನು ಮತ್ತೂಬ್ಬ ಬಲಾಡ್ಯ ಪ್ರತಿಭೆ ಸ್ಟಾನ್‌ ವಾವ್ರಿಂಕ್‌ ಫಾರ್ಮ್ನಲಿಲ್ಲ. ಇದು ಸಹಜವಾಗಿ ವಿಶ್ವ ನಂ.1 ಶ್ರೇಯಾಂಕದಲ್ಲಿರುವ ನಡಾಲ್‌ ಮತ್ತು ನಂ.2 ಶ್ರೇಯಾಂಕಿತ ಫೆಡರರ್‌ಗೆ ವರವಾಗಿದೆ.

Advertisement

ಸೆರೆನಾ ಇಲ್ಲದ ನಿರಾಸೆ, ಶರಪೋವಾ ತುಂಬುವರೆ?

ಕಳೆದ ವರ್ಷ ಆಸ್ಟ್ರೇಲಿಯಾ ಓಪನ್‌ನಲ್ಲಿ ಚಾಂಪಿಯನ್‌ ಆಗಿದ್ದ ಸೆರೆನಾ ವಿಲಿಯಮ್ಸ್‌ ಈ ಬಾರಿ ಆಡುವುದಿಲ್ಲ ಅನ್ನುವುದನ್ನು ಖಚಿತಪಡಿಸಿದ್ದಾರೆ. ಈ ಮೂಲಕ ಸೆರೆನಾ ಆಡುತ್ತಾರೋ? ಇಲ್ಲವೋ? ಎಂಬ ಅನುಮಾನಕ್ಕೆ ತೆರೆ ಎಳೆದಿದ್ದಾರೆ. ತಾರಾ ಆಟಗಾರ್ತಿಯಾದ ಸೆರೆನಾ, ಕೋರ್ಟ್‌ನಲ್ಲಿ ರ್ಯಾಕೆಟ್‌ ಹಿಡಿದು ನಿಂತರೆ ಎದುರಾಳಿಗೆ ಗೆಲುವು ಬಿಟ್ಟುಕೊಡುವವರಲ್ಲ. ಮದುವೆ, ಮಗು ಅಂಥ ಒಂದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಟೆನಿಸ್‌ನಿಂದಲೇ ಹೊರಗಿದ್ದಾರೆ. ಹೀಗಾಗಿ ಅಭಿಮಾನಿಗಳ ಕಣ್ಣು ಗ್ಲಾಮರ್‌ ಗೊಂಬೆ ಮಾರಿಯಾ ಶರಪೋವಾ, ಸಿಮೋನಾ ಹಾಲೆಪ್‌, ಕ್ಯಾರೊಲಿನ್‌ ಒಜ್ನಿಯಾಕಿ, ವೀನಸ್‌ ವಿಲಿಯಮ್ಸ್‌ ಮೇಲಿದೆ.

5 ಗ್ರ್ಯಾನ್‌ಸ್ಲಾಮ್‌ ವಿಜೇತೆ, ರಷ್ಯಾದ ಮರಿಯಾ ಶರಪೋವಾ ಅಂಕಣಕ್ಕೆ ಇಳಿಯುವುದು ಖಚಿತವಾಗಿದೆ. ಹೀಗಾಗಿ ಗ್ಲಾಮರ್‌ ಬಯಸಿ ಪಂದ್ಯ ನೋಡುವರಿಗೆ ಖಂಡಿತ ನಿರಾಸೆ ಆಗುವುದಿಲ್ಲ. ಆದರೆ ಉದ್ದೀಪನ ಮದ್ದು ಪ್ರಕರಣ ನಿಷೇಧದ ನಂತರ ಹೊರಬಂದ ಮೇಲೆ ಯಾವುದೇ ಮಹತ್ವದ ಕೂಟ ಗೆಲ್ಲದಿರುವುದರಿಂದ ಈಕೆಯ ಮೇಲೆ ಯಾರಿಗೂ ಹೆಚ್ಚಿನ ನಿರೀಕ್ಷೆಯಿಲ್ಲ.

ಇಷ್ಟಲ್ಲದೆ, ಕೆಲವು ತಾರಾ ಆಟಗಾರರು ಕೂಟದಿಂದ ಹೊರಗುಳಿದಿರುವುದೂ ಟೆನಿಸ್‌ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸುತ್ತಿದೆ. ಆದರೆ ನಡಾಲ್‌, ಫೆಡರರ್‌, ಜೊಕೊ, ಶರಪೋವಾ, ಹಾಲೆಪ್‌, ವೀನಸ್‌….ಈ ನಿರಾಸೆಯನ್ನು ಹೋಗಲಾಡಿಸುವ ಸಾಮರ್ಥ್ಯ ಹೊಂದಿದ್ದಾರೆ.

ಮಂಜು ಮಳಗುಳಿ

Advertisement

Udayavani is now on Telegram. Click here to join our channel and stay updated with the latest news.

Next