ಲಿಂಕನ್: ಅತ್ತ ಆಸ್ಟ್ರೇಲಿಯದಲ್ಲಿ ಆ್ಯಶಸ್ ಹಣಾಹಣಿಯೊಂದು ಮುಗಿದಿದೆ. ಕಾಂಗರೂ ಪಡೆ 4-0 ಅಂತರದಿಂದ ಗೆದ್ದು ಆ್ಯಶಸ್ ಟ್ರೋಫಿಯನ್ನು ಮರಳಿ ವಶಪಡಿಸಿಕೊಂಡಿದೆ. ಇದಕ್ಕೆ ಸೇಡು ತೀರಿಸಲು ಹೊರಟಿರುವ ಇಂಗ್ಲೆಂಡ್ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ. 5 ಪಂದ್ಯಗಳ ಸರಣಿಯಲ್ಲಿ ಮಾರ್ಗನ್ ಪಡೆಯೀಗ 3-0 ಮುನ್ನಡೆಯಲ್ಲಿದೆ.
ಇದೇ ವೇಳೆ ಪಕ್ಕದ ನ್ಯೂಜಿಲ್ಯಾಂಡಿನಲ್ಲಿ ಮತ್ತೆ ಆಸ್ಟ್ರೇಲಿಯ-ಇಂಗ್ಲೆಂಡ್ ತಂಡಗಳು ಮಂಗಳವಾರ ಮಹತ್ವದ ಪಂದ್ಯವೊಂದರಲ್ಲಿ ಎದುರಾಗುತ್ತಿವೆ. ಆದರೆ ಇದು ಕಿರಿಯರ ವಿಶ್ವಕಪ್ ಕ್ರಿಕೆಟ್. ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖೀಯಾಗುತ್ತಿವೆ. ಸಹಜವಾಗಿಯೇ ಇದು “ಮಿನಿ ಆ್ಯಶಸ್’ ಮಹತ್ವವನ್ನು ಪಡೆದಿದೆ.
ಆಸ್ಟ್ರೇಲಿಯ “ಬಿ’ ಗುಂಪಿನ ದ್ವಿತೀಯ ಸ್ಥಾನಿಯಾದರೆ, ಇಂಗ್ಲೆಂಡ್ “ಸಿ’ ವಿಭಾಗದ ಅಗ್ರಸ್ಥಾನಿಯಾಗಿ ಲೀಗ್ ಹೋರಾಟ ಮುಗಿಸಿವೆ. ಅಂದರೆ ಹ್ಯಾರಿ ಬ್ರೂಕ್ ನಾಯಕತ್ವದ ಇಂಗ್ಲೆಂಡ್ ತಂಡದ್ದು ಅಜೇಯ ಅಭಿಯಾನ. ಲೀಗ್ ಹಂತದಲ್ಲಿ ಅದು ಬಾಂಗ್ಲಾದೇಶ, ನಮೀಬಿಯಾ ಮತ್ತು ಕೆನಡಾವನ್ನು ಕೆಡವಿದೆ. ಆದರೆ ಜಾಸನ್ ಸಂಗ ನೇತೃತ್ವದ ಆಸ್ಟ್ರೇಲಿಯ ಮೊದಲ ಪಂದ್ಯದಲ್ಲೇ ಭಾರತಕ್ಕೆ ಸೋತು ಆಘಾತಕ್ಕೆ ಸಿಲಕಿತು. ಬಳಿಕ ಅಷ್ಟೇನೂ ಬಲಿಷ್ಠವಲ್ಲದ ಜಿಂಬಾಬ್ವೆ, ಪಪುವಾ ನ್ಯೂ ಗಿನಿಯನ್ನು ಮಣಿಸಿ ನಾಕೌಟ್ ಟಿಕೆಟ್ ಪಡೆದಿದೆ. ಇದನ್ನು ಗಮನಿಸಿವಾಗ 3 ಬಾರಿಯ ಚಾಂಪಿಯನ್ ಆಸ್ಟ್ರೇಲಿಯದ ಮುಂದಿರುವ ಸವಾಲು ತುಸು ಕಠಿನವೆಂದೇ ಹೇಳಬೇಕು.
ನಾಯಕ ಬ್ರೂಕ್ ನಿರಾಳ
ಈ ಕೂಟದಲ್ಲಿ ಇಂಗ್ಲೆಂಡ್ ಬಹುತೇಕ ಎಲ್ಲ ಅಂಗಳಗಳಲ್ಲೂ ಆಡಿದ ಹಾಗೂ ಅಭ್ಯಾಸ ನಡೆಸಿದ ಅನುಭವ ಹೊಂದಿದೆ. ಇದು ಆಂಗ್ಲರ ಪಡೆಗೊಂದು ಪ್ಲಸ್ ಪಾಯಿಂಟ್. ಹೀಗಾಗಿ ನಾಯಕ ಬ್ರೂಕ್ ಹೆಚ್ಚು ನಿರಾಳರಾಗಿದ್ದಾರೆ. ಕೋಚ್ ಜೊನಾಥನ್ ಟ್ರಾಟ್ ಕೂಡ ತಂಡದ ಮೇಲೆ ಹೆಚ್ಚಿನ ವಿಶ್ವಾಸ ಇರಿಸಿದ್ದಾರೆ.
“ನನಗೆ ನಾಕೌಟ್ ಎಂದೊಡನೆ ಹೆಚ್ಚಿನ ವ್ಯತ್ಯಾಸವೇನೂ ಕಾಣುತ್ತಿಲ್ಲ. ಇದು ನಮ್ಮ ಪಾಲಿಗೆ ಕೇವಲ ಮತ್ತೂಂದು ಪಂದ್ಯ. ಶ್ರೇಷ್ಠ ಮಟ್ಟದ ಆಟವಾಡುವುದು ಹಾಗೂ ಆಸ್ಟ್ರೇಲಿಯವನ್ನು ಸೋಲಿಸುವುದು ನಮ್ಮ ಗುರಿ’ ಎಂದು ಬ್ರೂಕ್ ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಅಗ್ರ ಕ್ರಮಾಂಕದಲ್ಲಿ ರನ್ ಹರಿದು ಬರುತ್ತಿರುವುದು, ಸ್ಟ್ರೈಕ್ ಬೌಲರ್‌ಗಳು ವಿಕೆಟ್ ಕೀಳುತ್ತಿರುವುದೆಲ್ಲ ಇಂಗ್ಲೆಂಡ್ ಪಾಲಿನ ಹೆಚ್ಚುಗಾರಿಕೆ. ಇಂಗ್ಲೆಂಡಿನ ವಿಲ್ ಜಾಕ್ಸ್, ಆಸ್ಟ್ರೇಲಿಯದ ನಥನ್ ಮೆಕ್‌ಸ್ವೀನಿ ಮೇಲೆ ಭಾರೀ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
ಇತ್ತಂಡಗಳು ಅಂಡರ್-19 ಹಂತದಲ್ಲಿ ಈವರೆಗೆ 36 ಸಲ ಎದುರಾಗಿವೆ. ಆಸ್ಟ್ರೇಲಿಯ 23ರಲ್ಲಿ, ಇಂಗ್ಲೆಂಡ್ 11ರಲ್ಲಿ ಜಯ ಸಾಧಿಸಿವೆ.