Advertisement

ಆಸ್ಟ್ರೇಲಿಯಾ ಕ್ರಿಕೆಟ್‌ ಬಿಕ್ಕಟ್ಟು: ಬಾಂಗ್ಲಾ ಪ್ರವಾಸಕ್ಕೂ ಧಕ್ಕೆ?

03:45 AM Jul 03, 2017 | |

ಸಿಡ್ನಿ: ವೇತನ ಪದ್ಧತಿಗೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ಮತ್ತು ಆಟಗಾರರ ನಡುವಿನ ಬಿಕ್ಕಟ್ಟು ಇನ್ನೂ ಬಗೆಹರಿದಿಲ್ಲ. ಹೀಗಾಗಿ ಇದರ ಕರಿ ನೆರಳು ಆಸ್ಟ್ರೇಲಿಯಾದ ಬಾಂಗ್ಲಾ ಮತ್ತು ಭಾರತ ಪ್ರವಾಸದ ಮೇಲೂ ಬಿದ್ದಿದೆ. ಈ ಹಿಂದಿನ ವೇಳಾ ಪಟ್ಟಿಯಂತೆ ಆಗಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡ ಟೆಸ್ಟ್‌ ಸರಣಿ ಆಡಲು ಬಾಂಗ್ಲಾ ಪ್ರವಾಸ ಕೈಗೊಳ್ಳಬೇಕಿತ್ತು. ಅಕ್ಟೋಬರ್‌ನಲ್ಲಿ ಏಕದಿನ ಸರಣಿಗಾಗಿ ಭಾರತಕ್ಕೆ ಬರುವುದೂ ನಿರ್ಧಾರವಾಗಿದೆ. ಹೊಸ ವೇತನ ಗುತ್ತಿಗೆ ಜಾರಿಯಾಗದ ಪಕ್ಷದಲ್ಲಿ ಈ ಸರಣಿಗಳಲ್ಲಿ ಆಸ್ಟ್ರೇಲಿಯಾ ಭಾಗವಹಿಸುವುದು ಅನುಮಾನವಾಗಿದೆ. ಅದೇ ರೀತಿ ಇಂಗ್ಲೆಂಡ್‌, ನ್ಯೂಜಿಲೆಂಡ್‌ ವಿರುದ್ಧದ ಸರಣಿ ಕೂಡ ತೂಗುಯ್ನಾಲೆಯಲ್ಲಿದೆ.

Advertisement

ದ.ಆಫ್ರಿಕಾ “ಎ’ ತಂಡದ ಪ್ರವಾಸಕ್ಕೆ ಬಹಿಷ್ಕಾರ?: ಬಿಗಡಾಯಿಸಿರುವ ವೇತನ ಪದ್ಧತಿ ಸಮಸ್ಯೆಗೆ ಶೀಘ್ರದಲ್ಲಿಯೇ ಪರಿಹಾರ ಕಂಡುಕೊಳ್ಳದಿದ್ದರೆ ಆಟಗಾರರು ದಕ್ಷಿಣ ಆಫ್ರಿಕಾ ವಿರುದ್ಧ “ಎ’ ತಂಡದ ಪ್ರವಾಸಕ್ಕೆ ಬಹಿಷ್ಕಾರ ಹಾಕಲಿದ್ದಾರೆ. ಹೀಗಾಗಿ ಟೂರ್ನಿ ರದ್ದಾಗುವ ಸಾಧ್ಯತೆ ಇದೆ. ಆದರೆ ಪ್ರವಾಸಕ್ಕೂ ಮುನ್ನ ನಡೆಯಲಿರುವ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಆಟಗಾರರು ಒಪ್ಪಿಕೊಂಡಿದ್ದಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಮಸ್ಯೆ ಏನು?: ಈ ಹಿಂದಿನ ವೇತನ ಪದ್ಧತಿಯ ಗುತ್ತಿಗೆಯ ಅವಧಿ ಜು.1ರಂದು ಅಂತ್ಯವಾಗಿದೆ. ಇದೇ ಸಂದರ್ಭದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ಹೊಸದಾಗಿ ವೇತನ ಪದ್ಧತಿಯನ್ನು ರಚಿಸಿತ್ತು. ಆದರೆ ಈ ಹೊಸ ಪದ್ಧತಿಗೆ ಆಟಗಾರರು ಒಪ್ಪುತ್ತಿಲ್ಲ. ಅದರಲ್ಲಿ ಕೆಲವು ತಿದ್ದುಪಡಿ ಮಾಡುವಂತೆ ಪಟ್ಟುಹಿಡಿದಿದ್ದಾರೆ. ಆದರೆ ಇದಕ್ಕೆ ಕ್ರಿಕೆಟ್‌ ಮಂಡಳಿ ಒಪ್ಪುತ್ತಿಲ್ಲ. ಇದರಿಂದಾಗಿ ಪುರುಷ ಮತ್ತು ಮಹಿಳಾ ಕ್ರಿಕೆಟಿಗರು ಸೇರಿದಂತೆ 230 ಆಟಗಾರರು ವೇತನ ಪದ್ಧತಿಯಲ್ಲಿ ಇಲ್ಲದೇ ನಿರುದ್ಯೋಗಿಗಳಾದ ವಿಚಿತ್ರ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next