Advertisement

ಸಿಡಿದದ್ದು ರೋಹಿತ್‌; ಗೆದ್ದದ್ದು ಆಸೀಸ್‌

12:30 AM Jan 13, 2019 | Team Udayavani |

ಸಿಡ್ನಿ: ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸಿಡಿಯಲು ವಿಫ‌ಲರಾಗುವುದರೊಂದಿಗೆ ಶನಿವಾರದ ಸಿಡ್ನಿ ಏಕದಿನ ಪಂದ್ಯವನ್ನು ಭಾರತ 34 ರನ್ನುಗಳಿಂದ ಕಳೆದುಕೊಂಡಿದೆ. 

Advertisement

ಆಸ್ಟ್ರೇಲಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾವಿರ ಗೆಲುವು ಕಂಡ ವಿಶ್ವದ ಮೊದಲ ರಾಷ್ಟವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತಕ್ಕೆ ಸೋಲಿನಲ್ಲೂ ಗೌರವ ತಂದಿತ್ತ ಸಾಧಕನೆಂದರೆ ಆರಂಭಕಾರ ರೋಹಿತ್‌ ಶರ್ಮ. 3.5 ಓವರ್‌ಗಳಲ್ಲಿ 4 ರನ್‌ ಆಗುವಷ್ಟರಲ್ಲಿ ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ ಮತ್ತು ಅಂಬಾಟಿ ರಾಯುಡು ವಿಕೆಟ್‌ ಕಳೆದುಕೊಂಡ ಭಾರತ ಆಗಲೇ ಸೋಲನ್ನು ಖಚಿತಗೊಳಿಸಿತ್ತು. ಆದರೆ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು ಕಾಂಗರೂ ದಾಳಿಯನ್ನು ದಂಡಿಸುತ್ತಲೇ ಸಾಗಿದ ರೋಹಿತ್‌ ಶರ್ಮ ಅಮೋಘ ಶತಕವೊಂದನ್ನು ಬಾರಿಸಿ ಹೋರಾಟವನ್ನು ಜಾರಿಯಲ್ಲಿರಿಸಿದರು. ಧೋನಿ 51 ರನ್‌ ಹೊಡೆದರು. ಅಂತಿಮವಾಗಿ ಭಾರತ 9 ವಿಕೆಟಿಗೆ 254ರ ತನಕ ಸಾಗುವಲ್ಲಿ ಯಶಸ್ವಿಯಾಯಿತು. ಆಸ್ಟ್ರೇಲಿಯ 5 ವಿಕೆಟಿಗೆ 288 ರನ್‌ ಪೇರಿಸಿ ಸವಾಲೊಡ್ಡಿತ್ತು.

ಸಿಡ್ನಿ ಅಂಗಳ ಅಪ್ಪಟ ಬ್ಯಾಟಿಂಗ್‌ ಟ್ರ್ಯಾಕ್‌ ಆಗಿ ಗೋಚರಿಸಿತ್ತು. ಭಾರತದ ಆರಂಭಿಕರು ತುಸು ಎಚ್ಚರಿಕೆಯಿಂದ ಆಡಿದ್ದರೆ 289 ರನ್ನುಗಳ ಗುರಿಯನ್ನು ಬೆನ್ನಟ್ಟುವುದು ಅಸಾಧ್ಯವೇನೂ ಆಗಿರಲಿಲ್ಲ. ರೋಹಿತ್‌-ಧೋನಿ ಸೇರಿಕೊಂಡು ಜವಾಬ್ದಾರಿಯುತ ಜತೆಯಾಟ ನಡೆಸಿದ್ದೇ ಇದಕ್ಕೆ ಸಾಕ್ಷಿ.

ರೋಹಿತ್‌ ಶರ್ಮ ಕ್ರೀಸಿನಲ್ಲಿರುವಷ್ಟು ಹೊತ್ತು ಭಾರತ ಗೆಲುವಿನ ಭರವಸೆಯಲ್ಲೇ ಇತ್ತು. ಅವರ ಹೋರಾಟ 46ನೇ ಓವರ್‌ ತನಕ ಮುಂದುವರಿಯಿತು. 110 ಎಸೆತಗಳಿಂದ 22ನೇ ಶತಕ ಪೂರ್ತಿಗೊಳಿಸಿದ ರೋಹಿತ್‌, ಒಟ್ಟು 129 ಎಸೆತಗಳಿಗೆ ಜವಾಬಿತ್ತು 133 ರನ್‌ ಬಾರಿಸಿದರು. ಈ ಅಮೋಘ ಆಟಕ್ಕೆ 10 ಬೌಂಡರಿ, 6 ಸಿಕ್ಸರ್‌ ಸಾಕ್ಷಿಯಾದವು.

ರೋಹಿತ್‌-ಧೋನಿ ಶತಕದ ಜತೆಯಾಟ
ಧೋನಿ ನಿಧಾನ ಗತಿಯಲ್ಲಿ ಆಡಿ 51 ರನ್‌ ಹೊಡೆದರು. ಎದುರಿಸಿದ್ದು 96 ಎಸೆತ. ಹೊಡೆದದ್ದು 3 ಬೌಂಡರಿ ಹಾಗೂ ಒಂದು ಸಿಕ್ಸರ್‌. ಈ ಸಂದರ್ಭದಲ್ಲಿ ಅವರು ಏಕದಿನದಲ್ಲಿ 10 ಸಾವಿರ ರನ್‌ ಪೂರ್ತಿಗೊಳಿಸಿದರು. ಈ ಮೈಲುಗಲ್ಲು ನೆಡಲು ಅವರಿಗೆ ಒಂದೇ ರನ್‌ ಅಗತ್ಯವಿತ್ತು. ರೋಹಿತ್‌ ಜತೆಗೂಡಿ 4ನೇ ವಿಕೆಟಿಗೆ 137 ರನ್‌ ಸೇರಿಸಿದ್ದು ಧೋನಿ ಹೆಗ್ಗಳಿಕೆ. ಕೊನೆಯಲ್ಲಿ ಆಕ್ರಮಣಕಾರಿಯಾಗಿ ಆಡಿದ ಭುವನೇಶ್ವರ್‌ 23 ಎಸೆತಗಳಿಂದ ಅಜೇಯ 29 ರನ್‌ ಹೊಡೆದರು (4 ಬೌಂಡರಿ).

Advertisement

ಕೊಹ್ಲಿ ಮತ್ತು ರಾಯುಡು ಅವರನ್ನು ಒಂದೇ ಓವರಿನಲ್ಲಿ ಉದುರಿಸಿ, 26 ರನ್ನಿಗೆ 4 ವಿಕೆಟ್‌ ಕೆಡವಿದ ಜೇ ರಿಚರ್ಡ್‌ಸನ್‌ ಪಂದ್ಯಶ್ರೇಷ್ಠರಾಗಿ ಮೂಡಿಬಂದರು.

ಮಧ್ಯಮ ಕ್ರಮಾಂಕದ ನೆರವು
ಆಸ್ಟ್ರೇಲಿಯದ ಆರಂಭ ಕೂಡ ಭರವಸೆಯದ್ದಾಗಿರಲಿಲ್ಲ. ಆರನ್‌ ಫಿಂಚ್‌ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡರೂ ಟೆಸ್ಟ್‌ ಕ್ರಿಕೆಟಿನ ಕಳಪೆ ಫಾರ್ಮನ್ನು ಇಲ್ಲಿಯೂ ಮುಂದುವರಿಸಿದರು (6). ಅಲೆಕ್ಸ್‌ ಕ್ಯಾರಿ 10ನೇ ಓವರ್‌ ತನಕ ನಿಂತರೂ ಗಳಿಸಿದ್ದು 24 ರನ್‌ ಮಾತ್ರ (31 ಎಸೆತ, 5 ಬೌಂಡರಿ). ಹೀಗೆ ಆರಂಭಿಕರಿಬ್ಬರೂ 41 ರನ್‌ ಆಗುವಷ್ಟರಲ್ಲಿ ವಾಪಸಾಗಿದ್ದರು.

ಇಲ್ಲಿಂದ ಮುಂದೆ ಆಸೀಸ್‌ ಕ್ರಿಕೆಟಿಗರ ನಿಜವಾದ ಬ್ಯಾಟಿಂಗ್‌ ಹೋರಾಟ ಆರಂಭಗೊಂಡಿತು. ಮೇಲುಗೈ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಖ್ವಾಜಾ, ಶಾನ್‌ ಮಾರ್ಷ್‌, ಹ್ಯಾಂಡ್ಸ್‌ಕಾಂಬ್‌ ಮತ್ತು ಸ್ಟೋಯಿನಿಸ್‌ ಸೇರಿಕೊಂಡು ಬೆವರಿಳಿಸಿದರು. ಇವರಲ್ಲಿ ಸ್ಟೋಯಿನಿಸ್‌ ಹೊರತುಪಡಿಸಿ ಉಳಿದ ಮೂವರೂ ಅರ್ಧ ಶತಕ ಬಾರಿಸಿ ಮಿಂಚಿದರು. ಟೆಸ್ಟ್‌ ಸರಣಿಯಲ್ಲಿ ಇವರೆಲ್ಲರೂ ವಿಫ‌ಲರಾಗಿದ್ದರು. ಸ್ಟೋಯಿನಿಸ್‌ ಔಟಾಗದೆ 47 ರನ್‌ ಬಾರಿಸಿದರು.

ಹ್ಯಾಂಡ್ಸ್‌ಕಾಂಬ್‌ ಬ್ಯಾಟಿಂಗ್‌ ಅಬ್ಬರ
61 ಎಸೆತಗಳಿಂದ 73 ರನ್‌ ಬಾರಿಸಿ ಹ್ಯಾಂಡ್ಸ್‌ಕಾಂಬ್‌ ಆಸೀಸ್‌ ಸರದಿಯ ಟಾಪ್‌ ಸ್ಕೋರರ್‌. ಇದರಲ್ಲಿ 6 ಫೋರ್‌, 2 ಸಿಕ್ಸರ್‌ ಒಳಗೊಂಡಿತ್ತು. ಖ್ವಾಜಾ ಗಳಿಕೆ 59 ರನ್‌. 81 ಎಸೆತಗಳ ಈ ಆಟದಲ್ಲಿ 6 ಬೌಂಡರಿಗಳು ಸೇರಿದ್ದವು. ಶಾನ್‌ ಮಾರ್ಷ್‌ 70 ಎಸೆತ ನಿಭಾಯಿಸಿ 54 ರನ್‌ ಹೊಡೆದರು (4 ಬೌಂಡರಿ). ಕೊನೆಯಲ್ಲಿ ಅಬ್ಬರಿಸಿದ ಸ್ಟೋಯಿನಿಸ್‌ 2 ಬೌಂಡರಿ, 2 ಸಿಕ್ಸರ್‌ ಸಹಿತ 43 ಎಸೆತಗಳಿಂದ 47 ರನ್‌ ಬಾರಿಸಿದರು.

ಖ್ವಾಜಾ-ಮಾರ್ಷ್‌ 3ನೇ ವಿಕೆಟಿಗೆ 111 ಎಸೆತಗಳಿಂದ 92 ರನ್‌ ಒಟ್ಟುಗೂಡಿಸಿ ಕುಸಿತಕ್ಕೆ ತಡೆಯೊಡ್ಡಿದರು. ಬಳಿಕ ಮಾರ್ಷ್‌-ಹ್ಯಾಂಡ್ಸ್‌ಕಾಂಬ್‌ 53 ರನ್‌ ಜತೆಯಾಟ ನಿಭಾಯಿಸಿದರು. ಹ್ಯಾಂಡ್ಸ್‌ಕಾಂಬ್‌-ಸ್ಟೋಯಿನಿಸ್‌ ಸಾಹಸದಿಂದ ಅಂತಿಮ 10 ಓವರ್‌ಗಳಲ್ಲಿ 93 ರನ್‌ ಹರಿದು ಬಂದದ್ದು ತಂಡದ ಸವಾಲಿನ ಮೊತ್ತಕ್ಕೆ ಕಾರಣವಾಯಿತು. ಕೊನೆಯ 5 ಓವರ್‌ಗಳಲ್ಲಿ 59 ರನ್‌ ಸಿಡಿದವು. ಭಾರತದ ಕಳಪೆ ಕ್ಷೇತ್ರರಕ್ಷಣೆ ಕೂಡ ಕಾಂಗರೂಗಳಿಗೆ ಲಾಭವಾಗಿ ಪರಿಣಮಿಸಿತು. ಭಾರತದ ಬೌಲಿಂಗ್‌ ಸರದಿಯಲ್ಲಿ ಯಾರೂ ಆಘಾತಕಾರಿಯಾಗಿ ಗೋಚರಿಸಲಿಲ್ಲ.

ಸ್ಕೋರ್‌ಪಟ್ಟಿ
ಆಸ್ಟ್ರೇಲಿಯ

ಅಲೆಕ್ಸ್‌ ಕ್ಯಾರಿ    ಸಿ ರೋಹಿತ್‌ ಬಿ ಕುಲದೀಪ್‌    24
ಆರನ್‌ ಫಿಂಚ್‌    ಬಿ ಭುವನೇಶ್ವರ್‌    6
ಉಸ್ಮಾನ್‌ ಖ್ವಾಜಾ    ಎಲ್‌ಬಿಡಬ್ಲ್ಯು ಜಡೇಜ    59
ಶಾನ್‌ ಮಾರ್ಷ್‌    ಸಿ ಶಮಿ ಬಿ ಕುಲದೀಪ್‌    54
ಪೀಟರ್‌ ಹ್ಯಾಂಡ್ಸ್‌ಕಾಂಬ್‌    ಸಿ ಧವನ್‌ ಬಿ ಭುವನೇಶ್ವರ್‌    73
ಮಾರ್ಕಸ್‌ ಸ್ಟೋಯಿನಿಸ್‌    ಔಟಾಗದೆ    47
ಗ್ಲೆನ್‌ ಮ್ಯಾಕ್ಸ್‌ವೆಲ್‌    ಔಟಾಗದೆ    11
ಇತರ        14
ಒಟ್ಟು  (50 ಓವರ್‌ಗಳಲ್ಲಿ 5 ವಿಕೆಟಿಗೆ)    288
ವಿಕೆಟ್‌ ಪತನ: 1-8, 2-41, 3-133, 4-186, 5-254.
ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        10-0-66-2
ಖಲೀಲ್‌ ಅಹ್ಮದ್‌        8-0-55-0
ಮೊಹಮ್ಮದ್‌ ಶಮಿ        10-0-46-0
ಕುಲದೀಪ್‌ ಯಾದವ್‌        10-0-54-2
ರವೀಂದ್ರ ಜಡೇಜ        10-0-48-1
ಅಂಬಾಟಿ ರಾಯುಡು        2-0-13-0

ಭಾರತ
ರೋಹಿತ್‌ ಶರ್ಮ    ಸಿ ಮ್ಯಾಕ್ಸ್‌ವೆಲ್‌ ಬಿ ಸ್ಟೋಯಿನಿಸ್‌    133
ಶಿಖರ್‌ ಧವನ್‌    ಎಲ್‌ಬಿಡಬ್ಲ್ಯು ಬೆಹೆÅಂಡಾಫ್ì    0
ವಿರಾಟ್‌ ಕೊಹ್ಲಿ    ಸಿ ಸ್ಟೋಯಿನಿಸ್‌ ಬಿ ರಿಚರ್ಡ್‌ಸನ್‌    3
ಅಂಬಾಟಿ ರಾಯುಡು    ಎಲ್‌ಬಿಡಬ್ಲ್ಯು ರಿಚರ್ಡ್‌ಸನ್‌    0
ಎಂ.ಎಸ್‌. ಧೋನಿ    ಎಲ್‌ಬಿಡಬ್ಲ್ಯು ಬೆಹೆÅಂಡಾಫ್ì    51
ದಿನೇಶ್‌ ಕಾರ್ತಿಕ್‌    ಬಿ ರಿಚರ್ಡ್‌ಸನ್‌    12
ರವೀಂದ್ರ ಜಡೇಜ    ಸಿ ಮಾರ್ಷ್‌ ಬಿ ರಿಚರ್ಡ್‌ಸನ್‌    8
ಭುವನೇಶ್ವರ್‌ ಕುಮಾರ್‌    ಔಟಾಗದೆ    29
ಕುಲದೀಪ್‌ ಯಾದವ್‌    ಸಿ ಖ್ವಾಜಾ ಬಿ ಸಿಡ್ಲ್    3
ಮೊಹಮ್ಮದ್‌ ಶಮಿ    ಸಿ ಮ್ಯಾಕ್ಸ್‌ವೆಲ್‌ ಬಿ ಸ್ಟೋಯಿನಿಸ್‌    1
ಇತರ        14
ಒಟ್ಟು  (50 ಓವರ್‌ಗಳಲ್ಲಿ 9 ವಿಕೆಟಿಗೆ)        254
ವಿಕೆಟ್‌ ಪತನ: 1-1, 2-4, 3-4, 4-141, 5-176, 6-213, 7-221, 8-247, 9-254.
ಬೌಲಿಂಗ್‌:
ಜಾಸನ್‌ ಬೆಹೆÅಂಡಾಫ್ì        10-2-39-2
ಜೇ ರಿಚರ್ಡ್‌ಸನ್‌        10-2-26-4
ಪೀಟರ್‌ ಸಿಡ್ಲ್        8-0-48-1
ನಥನ್‌ ಲಿಯೋನ್‌        10-1-50-0
ಮಾರ್ಕಸ್‌ ಸ್ಟೋಯಿನಿಸ್‌        10-0-66-2
ಗ್ಲೆನ್‌ ಮ್ಯಾಕ್ಸ್‌ವೆಲ್‌        2-0-18-0

ಪಂದ್ಯಶ್ರೇಷ್ಠ: ಜೇ ರಿಚರ್ಡ್‌ಸನ್‌
2ನೇ ಪಂದ್ಯ: ಮಂಗಳವಾರ (ಅಡಿಲೇಡ್‌)

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಆಸ್ಟ್ರೇಲಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ ಇತಿಹಾಸಲ್ಲಿ ಸಾವಿರ ಗೆಲುವು ದಾಖಲಿಸಿದ ವಿಶ್ವದ ಮೊದಲ ತಂಡವೆನಿಸಿತು. ಟೆಸ್ಟ್‌ನಲ್ಲಿ 384, ಏಕದಿನದಲ್ಲಿ 558 ಹಾಗೂ ಟಿ20 ಪಂದ್ಯಗಳಲ್ಲಿ 58 ಜಯ ಗಳಿಸಿದ್ದು ಆಸ್ಟ್ರೇಲಿಯದ ಸಾಧನೆಯಾಗಿದೆ. ಆಸ್ಟ್ರೇಲಿಯ ತನ್ನ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು 1877ರಲ್ಲಿ ಇಂಗ್ಲೆಂಡ್‌ ವಿರುದ್ಧ ಜಯಿಸಿತ್ತು. ಅದು ಮೆಲ್ಬರ್ನ್ನಲ್ಲಿ ನಡೆದ ಟೆಸ್ಟ್‌ ಇತಿಹಾಸದ ಪ್ರಪ್ರಥಮ ಪಂದ್ಯವಾಗಿತ್ತು. ಅಂತರ 45 ರನ್‌.
* ರೋಹಿತ್‌ ಶರ್ಮ ಆಸ್ಟ್ರೇಲಿಯ ವಿರುದ್ಧ ಅವರದೇ ನೆಲದಲ್ಲಿ ಅತ್ಯಧಿಕ 5 ಏಕದಿನ ಶತಕ ಬಾರಿಸಿದ ಕುಮಾರ ಸಂಗಕ್ಕರ ಅವರ ದಾಖಲೆಯನ್ನು ಸರಿದೂಗಿಸಿದರು. ದಿಲ್ಶನ್‌, ಗೋವರ್‌, ಹೇನ್ಸ್‌, ಕೊಹ್ಲಿ ಮತ್ತು ಲಾರಾ ತಲಾ 4 ಶತಕ ಹೊಡೆದಿದ್ದಾರೆ.
* ಭಾರತ ಏಕದಿನದಲ್ಲಿ 2ನೇ ಸಲ 4 ರನ್ನಿಗೆ 3 ವಿಕೆಟ್‌ ಉದುರಿಸಿಕೊಂಡಿತು. ಇದಕ್ಕೂ ಮುನ್ನ 2004ರ ಜಿಂಬಾಬ್ವೆ ವಿರುದ್ಧದ ಅಡಿಲೇಡ್‌ ಪಂದ್ಯದಲ್ಲೂ ಭಾರತ ಇಂಥದೇ ಕುಸಿತ ಕಂಡಿತ್ತು.
* ಭಾರತ 21ನೇ ಓವರಿನಲ್ಲಿ ಮೊದಲ ಬೌಂಡರಿ ಹೊಡೆಯಿತು. ಇದು ಧೋನಿ ಬ್ಯಾಟಿನಿಂದ ಸಿಡಿಯಿತು. ಆದರೆ ಇದಕ್ಕೂ ಮುನ್ನ ರೋಹಿತ್‌ ಸಿಕ್ಸರ್‌ ಬಾರಿಸಿದ್ದರು. 2001ರ ಬಳಿಕ ಭಾರತ ಇಷ್ಟೊಂದು ವಿಳಂಬವಾಗಿ ಬೌಂಡರಿ ಖಾತೆ ತೆರೆದದ್ದು ಇದೇ ಮೊದಲು.
* ಭಾರತ ಮೊದಲ 10 ಓವರ್‌ಗಳಲ್ಲಿ 5ನೇ ಕನಿಷ್ಠ ಸ್ಕೋರ್‌ ದಾಖಲಿಸಿತು (3ಕ್ಕೆ 21 ರನ್‌). 2017ರಲ್ಲಿ ಶ್ರೀಲಂಕಾ ಎದುರು 3 ವಿಕೆಟಿಗೆ 9 ರನ್‌ ಗಳಿಸಿದ್ದು ಕನಿಷ್ಠ ಗಳಿಕೆಯಾಗಿದೆ.
* ಜೇ ರಿಚರ್ಡ್‌ಸನ್‌ ಜೀವನಶ್ರೇಷ್ಠ ಬೌಲಿಂಗ್‌ ಪ್ರದರ್ಶನವಿತ್ತರು (26ಕ್ಕೆ 4).
* ಧೋನಿ 68ನೇ ಅರ್ಧ ಶತಕ ಹೊಡೆದರು.
* ಶಾನ್‌ ಮಾರ್ಷ್‌ 13ನೇ, ಹ್ಯಾಂಡ್ಸ್‌ಕಾಂಬ್‌ 2ನೇ ಅರ್ಧ ಶತಕ ಬಾರಿಸಿದರು.

ಧೋನಿ: 10 ಸಾವಿರ ರನ್‌ ಸರದಾರ
ಮಹೇಂದ್ರ ಸಿಂಗ್‌ ಧೋನಿ ಏಕದಿನದಲ್ಲಿ 10 ಸಾವಿರ ರನ್‌ ಗಳಿಸಿದ ವಿಶ್ವದ 13ನೇ ಹಾಗೂ ಭಾರತದ 5ನೇ ಕ್ರಿಕೆಟಿಗನಾಗಿ ಮೂಡಿಬಂದರು. ಈ ಮೈಲುಗಲ್ಲು ನೆಡಲು ಅವರಿಗೆ ಕೇವಲ ಒಂದು ರನ್‌ ಬೇಕಿತ್ತು. ಧೋನಿ ಈ ಸಾಧನೆಗೈದ ವಿಶ್ವದ ಕೇವಲ 2ನೇ ಕೀಪರ್‌. ಕುಮಾರ ಸಂಗಕ್ಕರ ಮೊದಲಿಗ.ಸಿಡ್ನಿ ಬ್ಯಾಟಿಂಗ್‌ ಸಾಧನೆಯೊಂದಿಗೆ ಧೋನಿ ಅವರ ಒಟ್ಟು ರನ್‌ ಗಳಿಕೆ 10,224ಕ್ಕೆ ಏರಿತು. ಇದು ಅವರ 333ನೇ ಪಂದ್ಯ. 18,426 ರನ್‌ ಗಳಿಸಿರುವ ಸಚಿನ್‌ ತೆಂಡುಲ್ಕರ್‌ ಅವರದು ವಿಶ್ವದಾಖಲೆಯಾಗಿದೆ. “10 ಸಾವಿರ ರನ್‌ ಕ್ಲಬ್‌’ನಲ್ಲಿರುವ ಭಾರತದ ಇತರ ಸಾಧಕರೆಂದರೆ ಸೌರವ್‌ ಗಂಗೂಲಿ, ರಾಹುಲ್‌ ದ್ರಾವಿಡ್‌ ಮತ್ತು ವಿರಾಟ್‌ ಕೊಹ್ಲಿ.

10 ಸಾವಿರ ರನ್‌ ಸಾಧಕರು
ಬ್ಯಾಟ್ಸ್‌ಮನ್‌    ರನ್‌
1. ಸಚಿನ್‌ ತೆಂಡುಲ್ಕರ್‌ (ಭಾ)    18,426
2. ಕುಮಾರ ಸಂಗಕ್ಕರ (ಶ್ರೀ)    14,234
3. ರಿಕಿ ಪಾಂಟಿಂಗ್‌ (ಆ)    13,704
4. ಸನತ್‌ ಜಯಸೂರ್ಯ (ಶ್ರೀ)    13,430
5. ಮಾಹೇಲ ಜಯವರ್ಧನ (ಶ್ರೀ)    12,650
6. ಇಂಝಮಾಮ್‌ ಉಲ್‌ ಹಕ್‌ (ಪಾ)    11,739
7. ಜಾಕ್‌ ಕ್ಯಾಲಿಸ್‌ (ದ.ಆ.)    11,579
8. ಸೌರವ್‌ ಗಂಗೂಲಿ (ಭಾ)    11,363
9. ರಾಹುಲ್‌ ದ್ರಾವಿಡ್‌ (ಭಾ)    10,889
10. ಬ್ರಿಯಾನ್‌ ಲಾರಾ (ವೆ)    10,405
11. ತಿಲಕರತ್ನ ದಿಲ್ಶನ್‌ (ಶ್ರೀ)    10,290
12. ವಿರಾಟ್‌ ಕೊಹ್ಲಿ (ಭಾ)    10,235
13. ಎಂ.ಎಸ್‌. ಧೋನಿ (ಭಾ)    10,224

“ರೋಹಿತ್‌-ಧೋನಿ ಕ್ರೀಸ್‌ ಆಕ್ರಮಿಸಿಕೊಂಡಾಗ ಪಂದ್ಯ ನಮ್ಮ ಕೈಜಾರುವ ಭೀತಿ ಇತ್ತು. ಅದೃಷ್ಟವಶಾತ್‌ ನಾವು ಧೋನಿ ವಿಕೆಟ್‌ ಉರುಳಿಸಿದೆವು. ಇದು ಪಂದ್ಯದ ಟರ್ನಿಂಗ್‌ ಪಾಯಿಂಟ್‌. ಇಲ್ಲಿಂದ ಮುಂದೆ ವಿಕೆಟ್‌ಗಳು ಉರುಳುತ್ತ ಹೋದವು. ರೋಹಿತ್‌ ಒತ್ತಡದಲ್ಲೂ ಅಮೋಘ ಬ್ಯಾಟಿಂಗ್‌ ಪ್ರದರ್ಶನವಿತ್ತರು. ಅವರೋರ್ವ ಅಪಾಯಕಾರಿ ಬ್ಯಾಟ್ಸ್‌ಮನ್‌ ಎಂಬ ಅರಿವಿತ್ತು’
– ಜೇ ರಿಚರ್ಡ್‌ಸನ್‌, ಪಂದ್ಯಶ್ರೇಷ್ಠ ಕ್ರಿಕೆಟಿಗ

Advertisement

Udayavani is now on Telegram. Click here to join our channel and stay updated with the latest news.

Next