ಲಾಹೋರ್: ಪಾಕಿಸ್ತಾನ ವಿರುದ್ಧ ನಡೆದ ಏಕೈಕ ಟಿ20 ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯ ತಂಡವು 3 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ.
ಈ ಮೂಲಕ ಆಸ್ಟ್ರೇಲಿಯವು 24 ವರ್ಷಗಳ ಬಳಿಕ ನಡೆಸಿದ ಪಾಕ್ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದೆ.
ನಾಯಕ ಏರಾನ್ ಫಿಂಚ್ ಅವರ 55 ನೆರವಿನಿಂದ ಆಸ್ಟ್ರೇಲಿಯ ತಂಡವು 7 ವಿಕೆಟಿಗೆ 163 ರನ್ ಪೇರಿಸಿ ಜಯ ಸಾಧಿಸಿತು. ಇನ್ನೂ ಐದು ಎಸೆತ ಬಾಕಿ ಇರುವಾಗಲೇ ಆಸ್ಟ್ರೇಲಿಯ ಜಯ ದಾಖಲಿಸಿತು. ಹ್ಯಾರಿಸ್ ರೌಫ್ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ಬೆನ್ ಮೆಕ್‌ಡರ್ಮಟ್ ತಂಡಕ್ಕೆ ಜಯ ದೊರಕಿಸಿಕೊಟ್ಟರು.
ಈ ಮೊದಲು ನಥನ್ ಎಲ್ಲಿಸ್ ದಾಳಿಗೆ ಕುಸಿದ ಪಾಕಿಸ್ತಾನ ತಂಡವು 8 ವಿಕೆಟಿಗೆ 162 ರನ್ ಗಳಿಸಿತ್ತು. ಪ್ರಚಂಡ ಫಾರ್ಮ್ ನಲ್ಲಿರುವ ಬಾಬರ್ ಅಜಂ ಟಿ20ಯಲ್ಲೂ ಉತ್ತಮವಾಗಿ ಆಡಿ ಗಮನ ಸೆಳೆದರು. 46 ಎಸೆತಗಳಿಂದ 66 ರನ್ ಸಿಡಿಸಿ ತಂಡವನ್ನು ಅಲ್ಪ ಮೊತ್ತದಿಂದ ಪಾರು ಮಾಡಿದರು.
1998ರ ಬಳಿಕ ಮೊದಲ ಬಾರಿ ಪಾಕಿಸ್ತಾನ ಪ್ರವಾಸಗೈದಿರುವ ಆಸ್ಟ್ರೇಲಿಯ ತಂಡವು ಈ ಮೊದಲು ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಜಯಿಸಿತ್ತು. ಆದರೆ ಏಕದಿನ ಸರಣಿಯನ್ನು 2-1ರಿಂದ ಸೋತಿತ್ತು.