Advertisement

ಇಂಗ್ಲೆಂಡಿಗೆ ಹ್ಯಾಟ್ರಿಕ್‌ ಸೋಲು”: ಆ್ಯಶಸ್‌ ಎತ್ತಿದ ಆಸ್ಟ್ರೇಲಿಯ

09:25 AM Dec 19, 2017 | |

ಪರ್ತ್‌: “ವಾಕಾ’ದಲ್ಲಿ ಇಂಗ್ಲೆಂಡಿಗೆ ಇನ್ನಿಂಗ್ಸ್‌ ಸೋಲುಣಿಸಿದ ಆಸ್ಟ್ರೇಲಿಯ ಹ್ಯಾಟ್ರಿಕ್‌ ಜಯದೊಂದಿಗೆ ಪ್ರತಿಷ್ಠಿತ ಆ್ಯಶಸ್‌ ಟ್ರೋಫಿಯನ್ನು ಮರಳಿ ಎತ್ತಿಹಿಡಿದಿದೆ. 2015ರ ಇಂಗ್ಲೆಂಡ್‌ ಪ್ರವಾಸದ ವೇಳೆ 3-2 ಅಂತರದ ಸೋಲುಂಡ ವೇಳೆ ಆಸ್ಟ್ರೇಲಿಯ ಆ್ಯಶಸ್‌ ಒಪ್ಪಿಸಿ ಬಂದಿತ್ತು.

Advertisement

259 ರನ್ನುಗಳ ಹಿನ್ನಡೆಗೆ ಸಿಲುಕಿದ ಬಳಿಕ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ 4ನೇ ದಿನ 132 ರನ್ನಿಗೆ 4 ವಿಕೆಟ್‌ ಉರುಳಿಸಿಕೊಂಡು ಸೋಲಿನತ್ತ ಮುಖ ಮಾಡಿತ್ತು. ಪಂದ್ಯದ ಅಂತಿಮ ದಿನವಾದ ಸೋಮವಾರ ಕುಸಿತ ಮುಂದುವರಿಸಿ 218 ರನ್ನಿಗೆ ಸರ್ವಪತನ ಕಂಡಿತು. 

ಇದು 5 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್‌ ಅನುಭವಿಸಿದ ಸತತ 3ನೇ ಸೋಲು. ಬ್ರಿಸ್ಬೇನ್‌ನಲ್ಲಿ 10 ವಿಕೆಟ್‌ಗಳಿಂದ, ಅಡಿಲೇಡ್‌ನ‌ಲ್ಲಿ 120 ರನ್ನುಗಳಿಂದ ಸ್ಮಿತ್‌ ಪಡೆ ವಿಜಯೋತ್ಸವ ಆಚರಿಸಿತ್ತು. ಮುಂದಿನದು ಬಾಕ್ಸಿಂಗ್‌ ಡೇ ಟೆಸ್ಟ್‌. ಇದು ಡಿ. 26ರಿಂದ ಮೆಲ್ಬರ್ನ್ನಲ್ಲಿ ಆರಂಭವಾಗಲಿದೆ. ಹೊಸ ವರ್ಷದ ಟೆಸ್ಟ್‌ ಜ. 4ರಿಂದ ಸಿಡ್ನಿಯಲ್ಲಿ ನಡೆಯಲಿದೆ.

ಹ್ಯಾಝಲ್‌ವುಡ್‌ಗೆ 5 ವಿಕೆಟ್‌
4ನೇ ದಿನ ಆರಂಭಿಕರಿಬ್ಬರನ್ನೂ ಕೆಡವಿ ಆಸ್ಟ್ರೇಲಿಯಕ್ಕೆ ಮೇಲುಗೈ ಒದಗಿಸಿದ ವೇಗಿ ಜೋಶ್‌ ಹ್ಯಾಝಲ್‌ವುಡ್‌ ಅಂತಿಮ ದಿನ ಮತ್ತೆ ಮೂವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು. ಇದರಲ್ಲಿ ದೊಡ್ಡ ಬೇಟೆಯೆಂದರೆ ನಾಟೌಟ್‌ ಬ್ಯಾಟ್ಸ್‌ಮನ್‌ಗಳಾದ ಡೇವಿಡ್‌ ಮಾಲನ್‌ (54) ಹಾಗೂ ಜಾನಿ ಬೇರ್‌ಸ್ಟೊ (14) ವಿಕೆಟ್‌. ಹ್ಯಾಝಲ್‌ವುಡ್‌ ಸಾಧನೆ 48ಕ್ಕೆ 5. 14ರಲ್ಲಿದ್ದ ಬೇರ್‌ಸ್ಟೊ ಅವರನ್ನು ಅದೇ ಮೊತ್ತಕ್ಕೆ ಬೌಲ್ಡ್‌ ಮಾಡಿದ ಹ್ಯಾಝಲ್‌ವುಡ್‌ ಇಂಗ್ಲೆಂಡಿಗೆ ಮೊದಲ ಓವರಿನಲ್ಲೇ ಆಘಾತವಿಕ್ಕಿದರು. ಬಳಿಕ ಮೊಯಿನ್‌ ಅಲಿ (11) ಲಿಯೋನ್‌ಗೆ ಎಲ್ಬಿ ಆದರು. ವೋಕ್ಸ್‌ (22) ಮತ್ತು ಬ್ರಾಡ್‌ (0) ಅವರನ್ನು ಕಮಿನ್ಸ್‌ ಕೆಡವಿದರು. ದ್ವಿಶತಕದೊಂದಿಗೆ ಮೆರೆದ ನಾಯಕ ಸ್ಟೀವನ್‌ ಸ್ಮಿತ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

5 ಪಂದ್ಯಗಳ ಆ್ಯಶಸ್‌ ಸರಣಿ ಮೊದಲ 3 ಪಂದ್ಯಗಳಲ್ಲೇ ಇತ್ಯರ್ಥವಾದದ್ದು ಇದು 10ನೇ ಸಲ. ಇದರಲ್ಲಿ 9 ಸಲ ಆಸ್ಟ್ರೇಲಿಯವೇ ಗೆದ್ದಿರುವುದು ವಿಶೇಷ. ಇಂಗ್ಲೆಂಡ್‌ ಒಂದೇ ಸಲ ಈ ಸಾಧನೆ ಮಾಡಿತ್ತು, ಆದೂ 1928-29ರಷ್ಟು ಹಿಂದೆ. ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-403 ಮತ್ತು 218 (ಮಾಲನ್‌ 54, ವಿನ್ಸ್‌ 55, ವೋಕ್ಸ್‌ 22, ಹ್ಯಾಝಲ್‌ವುಡ್‌ 48ಕ್ಕೆ 5, ಲಿಯೋನ್‌ 42ಕ್ಕೆ 2, ಕಮಿನ್ಸ್‌ 53ಕ್ಕೆ 2). ಆಸ್ಟ್ರೇಲಿಯ-9 ವಿಕೆಟಿಗೆ 662 ಡಿಕ್ಲೇರ್‌. ಪಂದ್ಯಶ್ರೇಷ್ಠ: ಸ್ಟೀವನ್‌ ಸ್ಮಿತ್‌.

Advertisement

 “ವಾಕಾ’ಕ್ಕೆ  ಗುಡ್‌ಬೈ!
ಇದು ಪರ್ತ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಆಸ್ಟ್ರೇಲಿಯ ಸಾಧಿಸಿದ ಸತತ 8ನೇ ಗೆಲುವು. 1991ರಿಂದ ಈ ಜಯದ ಅಭಿಯಾನ ಆರಂಭವಾಗಿತ್ತು. ಬೇಸರದ ಸಂಗತಿಯೆಂದರೆ, ಇದು “ವಾಕಾ’ದಲ್ಲಿ ಆಡಲಾದ ಕಟ್ಟಕಡೆಯ ಅಂತಾರಾಷ್ಟ್ರೀಯ ಪಂದ್ಯ ಎಂಬುದು. ಪರ್ತ್‌ನ ಬರ್ಸ್‌ವುಡ್‌ನ‌ಲ್ಲಿ ನೂತನವಾಗಿ ತಲೆಯೆತ್ತಿರುವ ಮಲ್ಟಿಪರ್ಪಸ್‌ ಸ್ಟೇಡಿಯಂನಲ್ಲಿ ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳು ನಡೆಯಲಿವೆ. ಇದನ್ನು ಶೀಘ್ರವೇ “ಕ್ರಿಕೆಟ್‌ ಆಸ್ಟ್ರೇಲಿಯ’ಕ್ಕೆ ಹಸ್ತಾಂತರಿಸಲಾಗುವುದು ಎಂದು ವೆಸ್ಟರ್ನ್ ಆಸ್ಟ್ರೇಲಿಯ ಕ್ರಿಕೆಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ರಿಸ್ಟಿನಾ ಮ್ಯಾಥ್ಯೂಸ್‌ ಹೇಳಿದ್ದಾರೆ.  ಆಸ್ಟ್ರೇಲಿಯ-ಇಂಗ್ಲೆಂಡ್‌ ನಡುವಿನ ಇದೇ ಸರಣಿಯ ಅಂತಿಮ ಏಕದಿನ ಪಂದ್ಯ ಪರ್ತ್‌ನ ನೂತನ ಸ್ಟೇಡಿಯಂನಲ್ಲಿ ನಡೆಯಲಿದೆ (ಜ. 28).

Advertisement

Udayavani is now on Telegram. Click here to join our channel and stay updated with the latest news.

Next