ಬ್ಲೋಮ್‌ಫಾಂಟೀನ್: ” “ಕನ್‌ಕಶನ್ ಸಬ್‌ಸ್ಟಿಟ್ಯೂಟ್ ಆಟಗಾರನಾಗಿ ಬ್ಯಾಟ್ ಹಿಡಿದು ಬಂದ ಮಾರ್ನಸ್ ಲಬುಶೇನ್ ಅವರ ಅಮೋಘ ಆಟದಿಂದ ಆತಿಥೇಯ ದಕ್ಷಿಣ ಆಪ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಇದರೊಂದಿಗೆ ಆಸೀಸ್ ಮತ್ತೆ ಏಕದಿನದ ನಂಬರ್ ವನ್ ತಂಡವಾಗಿ ಮೂಡಿಬಂದಿದೆ. 9 ದಿನಗಳ ಹಿಂದಷ್ಟೇ ಅಗ್ರಸ್ಥಾನ ಅಲಂಕರಿಸಿದ್ದ ಪಾಕಿಸ್ಥಾನ ದ್ವಿತೀಯ ಸ್ಥಾನಕ್ಕೆ ಇಳಿದಿದೆ.
ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ, ನಾಯಕ ಟೆಂಬ ಬವುಮ ಅವರ ಅಜೇಯ ಶತಕದ (114) ಹೊರತಾಗಿಯೂ 49 ಓವರ್‌ಗಳಲ್ಲಿ 222ಕ್ಕೆ ಆಲೌಟ್ ಆಯಿತು. ಆಸ್ಟ್ರೇಲಿಯ 40.2 ಓವರ್‌ಗಳಲ್ಲಿ 7 ವಿಕೆಟಿಗೆ 225 ರನ್ ಬಾರಿಸಿ ಗೆದ್ದು ಬಂದಿತು.
ಚೇಸಿಂಗ್ ವೇಳೆ ವೇಗಿ ಮಾರ್ಕೊ ಜಾನ್ಸೆನ್ ಅವರ 140 ಕಿ.ಮೀ. ವೇಗದ ಬೌನ್ಸರ್ ಒಂದು ಕ್ಯಾಮರಾನ್ ಗ್ರೀನ್ ಅವರ ತಲೆಗೆ ಬಂದು ಅಪ್ಪಳಿಸಿದಾಗ ಅವರು ಕ್ರೀಸ್ ಬಿಡುವುದು ಅನಿವಾರ್ಯವಾಯಿತು. ಅದು ಅವರೆದುರಿಸಿದ ಕೇವಲ 2ನೇ ಎಸೆತವಾಗಿತ್ತು. ಖಾತೆಯನ್ನೂ ತೆರೆದಿರಲಿಲ್ಲ. ಹೀಗಾಗಿ “ಕನ್‌ಕಶನ್ ಸಬ್‌ಸ್ಟಿಟ್ಯೂಟ್’ ಆಟಗಾರನಾಗಿ ಲಬುಶೇನ್ ಅವರನ್ನು ಆಡಿಸಲಾಯಿತು.
17ನೇ ಓವರ್‌ನಲ್ಲಿ ಆಸ್ಟ್ರೇಲಿಯ 113ಕ್ಕೆ 7 ವಿಕೆಟ್ ಕಳೆದುಕೊಂಡು ಸೋಲಿನ ಹಾದಿಯಲ್ಲಿತ್ತು. ಆದರೆ ಕ್ರೀಸ್ ಆಕ್ರಮಿಸಿಕೊಂಡು ನಿಂತ ಲಬುಶೇನ್ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಅವರಿಗೆ ಆ್ಯಸ್ಟನ್ ಅಗರ್ ಅಮೋಘ ಬೆಂಬಲವಿತ್ತರು. ಮುರಿಯದ 8ನೇ ವಿಕೆಟಿಗೆ 112 ರನ್ ಹರಿದು ಬಂತು. ಲಬುಶೇನ್ 93 ಎಸೆತಗಳಿಂದ ಅಜೇಯ 80 ರನ್ (8 ಬೌಂಡರಿ) ಹಾಗೂ ಅಗರ್ 69 ಎಸೆತಗಳಿಂದ ಅಜೇಯ 48 ರನ್ ಬಾರಿಸಿದರು.