Advertisement

ಆಸ್ಟ್ರೇಲಿಯಾದ ಸಂಶೋಧನಾ ಕ್ಷೇತ್ರಕ್ಕೆ ಭಾರೀ ನಷ್ಟವುಂಟು ಮಾಡಿದ ಕೋವಿಡ್‌

03:41 PM May 15, 2020 | sudhir |

ಕ್ಯಾನ್‌ಬೆರ: ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಆಸ್ಪತ್ರೆಗಳು, ವೈದ್ಯರು, ದಾದಿಯರು ಮುಂತಾದವರಿಗೆಲ್ಲ ಬೆಂಗಾವಲಾಗಿ ನಿಂತದ್ದು ಸಂಶೋಧನಾ ಕ್ಷೇತ್ರ. ಲಸಿಕೆ ಮತ್ತು ಔಷಧಿ ಶೋಧದ ಜತೆಗೆ ತಕ್ಷಣಕ್ಕೆ ಅಗತ್ಯವಿರುವ ಪರೀಕ್ಷಾ ಕಿಟ್‌ಗಳು, ಶಮನಕಾರಿ ಔಷಧಿ, ಸುರಕ್ಷಾ ಉಡುಗೆಗಳು ಇತ್ಯಾದಿಗಳನ್ನು ಆವಿಷ್ಕರಿಸಿ ಕೊಟ್ಟದ್ದು ಸಂಶೋಧನಾ ಕ್ಷೇತ್ರ. ಆದರೆ ಈಗ ಈ ಸಂಶೋಧನಾ ಕ್ಷೇತ್ರವೇ ಕೋವಿಡ್‌ ಹೊಡೆತದಿಂದ ಭಾರೀ ಸಮಸ್ಯೆಯನ್ನು ಎದುರಿಸುತ್ತಿದೆ.

Advertisement

ಆಸ್ಟ್ರೇಲಿಯದ ರಾಷ್ಟ್ರೀಯ ಸಂಶೋಧನಾ ಕ್ಷೇತ್ರ ಕೋವಿಡ್‌ ದಿಂದ ಅತಿ ಹೆಚ್ಚಿನ ಹಾನಿಯನ್ನು ಅನುಭವಿಸಲಿದೆ. ಉದ್ಯೋಗ ನಷ್ಟದ ಭೀತಿ ಒಂದೆಡೆಯಾದರೆ ಅನುದಾನ ಕಡಿತವಾಗುವ ಸಾಧ್ಯತೆ ಇನ್ನೊಂದೆಡೆ. ಸಂಶೋಧನಾ ಕ್ಷೇತ್ರದ ಮೇಲೆ ಕೋವಿಡ್‌ ಪರಿಣಾಮ ಕನಿಷ್ಠ ಕೆಲವು ವರ್ಷಗಳಾದರೂ ಇರಲಿದೆ ಎನ್ನುತ್ತಿದೆ ಒಂದು ಅಧ್ಯಯನ ವರದಿ. ಸಂಶೋಧನಾ ಕ್ಷೇತ್ರದಲ್ಲಿ ನಿಕಟ ಭವಿಷ್ಯದಲ್ಲೇ ಸುಮಾರು 10,000 ಉದ್ಯೋಗ ನಷ್ಟವಾಗಲಿದೆ. ದೀರ್ಘಾವಧಿಯಲ್ಲಿ ಉದ್ಯೋಗ ಕಡಿತ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.

ವಿಶ್ವವಿದ್ಯಾಲಯಗಳ ವರಮಾನ 2020ರಲ್ಲಿ 3 ರಿಂದ 4.6 ಶತಕೋಟಿ ಡಾಲರ್‌ ಕಡಿತವಾಗುವ ಸಾಧ್ಯತೆಯಿದೆ. ಇದು ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಗಳನ್ನು ತೀವ್ರವಾಗಿ ಬಾಧಿಸಲಿದೆ.

ಸಂಶೋಧನಾ ವೃತ್ತಿ ಶುರು ಮಾಡಿದವರು, ವೃತ್ತಿಯ ಮಧ್ಯ ಭಾಗದಲ್ಲಿರುವವರು, ಪದವೀಧರರು, ಸ್ನಾತಕೋತ್ತರ ಸೇರಿದಂತೆ ಎಲ್ಲರನ್ನೂ ಕೋವಿಡ್‌ ವಿವಿಧ ಸ್ತರಗಳಲ್ಲಿ ಬಾಧಿಸುವುದು ನಿಶ್ಚಿತ. ಮಹಿಳೆಯರ ಮೇಲೆ ವರಮಾನ ಮತ್ತು ಅನುದಾನ ಕಡಿತದ ಪರಿಣಾಮ ತುಸು ಹೆಚ್ಚೇ ಆಗಲಿದೆ. ಕೋವಿಡ್‌ ಹಾವಳಿ ಶುರುವಾದ ಬಳಿಕ ಮಹಿಳೆಯರ ಪ್ರಬಂಧ ಮಂಡನೆ ಬಹಳ ಕಡಿಮೆಯಾಗಿರುವ ಅಂಶ ಗಮನಾರ್ಹವಾಗಿದೆ. ವಿದೇಶಗಳಿಂದ ಸಂಶೋಧನಾರ್ಥಿಗಳಾಗಿ ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗಲಿದೆ.

ಆಸ್ಟ್ರೇಲಿಯದ ಸಂಶೋಧನಾ ಕ್ಷೇತ್ರ ಸಂಪೂರ್ಣವಾಗಿ ಸರಕಾರದ ಅನುದಾನವನ್ನೇ ಅವಲಂಬಿಸಿದೆ. ಅಲ್ಲದೆ ನಿರ್ದಿಷ್ಟ ಪ್ರೊಜೆಕ್ಟ್ ಗಳಿಗಾಗಿ ಸರಕಾರ ವಿಶೇಷ ಹಣಕಾಸಿನ ನೆರವು ನೀಡುತ್ತದೆ. ಕೊರೊನೋತ್ತರ ಕಾಲದಲ್ಲಿ ಇಂಥ ನೆರವುಗಳು ಸಿಗುವುದು ಅಸಂಭವ ಎನ್ನಲಾಗುತ್ತಿದೆ.

Advertisement

2019-20ನೇ ಸಾಲಿನಲ್ಲಿ 9.6 ಶತಕೋಟಿ ಡಾಲರ್‌ ಅನುದಾನವನ್ನು ಸಂಶೋಧನಾ ಕ್ಷೇತ್ರಕ್ಕೆ ಒದಗಿಸಲಾಗಿತ್ತು. ಇದರ ಕ್ಷೇತ್ರವಾರು ಹಂಚಿಕೆಯೂ ನಡೆದಿದೆ. ಆದರೆ ಈಗ ಅನುದಾನ ಬಿಡುಗಡೆಗೊಳಿಸುವ ಸ್ಥಿತಿಯಲ್ಲಿ ಸರಕಾರ ಇಲ್ಲದಿರುವುದರಿಂದ ಅನೇಕ ಸಂಶೋಧನಾ ಕೆಲಸಗಳು ನನೆಗುದಿಗೆ ಬಿದ್ದಿವೆ.

ಆವಿಷ್ಕಾರಗಳು ಕಡಿಮೆಯಾದರೆ ಅದರ ಪರಿಣಾಮ ಅಭಿವೃದ್ಧಿಯ ಮೇಲೂ ಆಗುತ್ತದೆ. ಹೊಸ ತಂತ್ರಜ್ಞಾನಗಳನ್ನು ಕಂಡು ಹಿಡಿಯದಿದ್ದಾರೆ ಕೌಶಲ, ಸಂಪನ್ಮೂಲ ಇತ್ಯಾದಿಗಳು ಉಪಯೋಗವಿಲ್ಲದೆ ವ್ಯರ್ಥವಾಗುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next