ಸಿಡ್ನಿ: ಆಸ್ಟ್ರೇಲಿಯದ ಶ್ರೇಷ್ಠ ಕ್ರಿಕೆಟಿಗರ ಯಾದಿಯಲ್ಲಿ ಕಾಣಿಸಿ ಕೊಳ್ಳುವ ಎಡಗೈ ಆರಂಭಕಾರ ಡೇವಿಡ್ ವಾರ್ನರ್ ಅವರಿಗೆ ಗೆಲುವಿನ ವಿದಾಯ ಲಭಿಸಿದೆ. ಪಾಕಿ ಸ್ಥಾನ ವಿರುದ್ಧದ ತವರಿನಂಗಳದ ಸಿಡ್ನಿ ಟೆಸ್ಟ್ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆಲ್ಲುವ ಮೂಲಕ ಆಸೀಸ್ ತನ್ನ ಕ್ರಿಕೆಟ್ ಹೀರೋಗೆ ಸ್ಮರಣೀಯ ಉಡುಗೊರೆಯನ್ನು ನೀಡಿತು.
ಈ ಪಂದ್ಯದಲ್ಲಿ ಆಸ್ಟ್ರೇಲಿಯದ ಜಯಕ್ಕೆ 130 ರನ್ನುಗಳ ಸುಲಭ ಗುರಿ ಲಭಿಸಿತ್ತು. 2 ವಿಕೆಟ್ ನಷ್ಟದಲ್ಲಿ ಕಮಿನ್ಸ್ ಪಡೆ ಗುರಿ ಮುಟ್ಟಿತು. ಇದರಲ್ಲಿ ವಾರ್ನರ್ ಕೊಡುಗೆ 57 ರನ್. ಜಯಕ್ಕೆ ಇನ್ನೇನು 11 ರನ್ ಬೇಕಿದೆ ಎನ್ನುವಾಗ ವಾರ್ನರ್ ವಿಕೆಟ್ ಉರುಳಿತು. ಇಲ್ಲವಾದರೆ ವಿದಾಯ ಪಂದ್ಯದಲ್ಲೂ ಗೆಲುವಿನ ರನ್ ಬಾರಿಸುವ ಅಪೂರ್ವ ಅವಕಾಶ ವೊಂದು ವಾರ್ನರ್‌ಗೆ ಲಭಿಸುವ ಸಾಧ್ಯತೆ ಇತ್ತು. ವಾರ್ನರ್ ತಮ್ಮ ಪದಾರ್ಪಣ ಟೆಸ್ಟ್‌ನಲ್ಲೂ ಗೆಲುವಿನ ರನ್ ಹೊಡೆದಿದ್ದರು.
ಚೇಸಿಂಗ್ ವೇಳೆ ಆಸೀಸ್ ಉಸ್ಮಾನ್ ಖ್ವಾಜಾ ಅವರನ್ನು ಶೂನ್ಯಕ್ಕೆ ಕಳೆದು ಕೊಂಡಿತು. ವಾರ್ನರ್-ಲಬುಶೇನ್ ಸೇರಿಕೊಂಡು 119 ರನ್ ಜತೆಯಾಟ ನಿಭಾಯಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ವಾರ್ನರ್ ಅವರ 57 ರನ್ 75 ಎಸೆತಗಳಿಂದ ಬಂತು. ಇದರಲ್ಲಿ 7 ಬೌಂಡರಿ ಸೇರಿ ದ್ದವು. ಲಬುಶೇನ್ ಔಟಾಗದೆ 62 ರನ್ ಹೊಡೆದರು (73 ಎಸೆತ, 9 ಬೌಂಡರಿ). ಉರುಳಿದ ಎರಡೂ ವಿಕೆಟ್ ಸಾಜಿದ್ ಖಾನ್ ಪಾಲಾಯಿತು. ಖ್ವಾಜಾ, ವಾರ್ನರ್ ಇಬ್ಬರೂ ಲೆಗ್ ಬಿಫೋರ್ ರೂಪದಲ್ಲಿ ಔಟಾದರು. 7 ವಿಕೆಟಿಗೆ 68 ರನ್ ಗಳಿಸಿ ಪರ ದಾಡುತ್ತಿದ್ದ ಪಾಕಿ ಸ್ಥಾನ, ಶನಿವಾರದ ಆಟ ಮುಂದು ವರಿಸಿ 115ಕ್ಕೆ ಆಲೌಟ್ ಆಯಿತು.
ಆಸ್ಟ್ರೇಲಿಯ ಪರ್ತ್ ಟೆಸ್ಟ್ ಪಂದ್ಯವನ್ನು 360 ರನ್ನುಗಳಿಂದ, ಮೆಲ್ಬರ್ನ್ ಮುಖಾಮುಖೀಯನ್ನು 79 ರನ್ನುಗಳಿಂದ ಜಯಿಸಿತ್ತು.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-313 ಮತ್ತು 115 (ಆಯೂಬ್ 33, ರಿಜ್ವಾನ್ 28, ಬಾಬರ್ 23, ಹೇಝ ಲ್‌ವುಡ್ 16ಕ್ಕೆ 4, ಲಿಯಾನ್ 36ಕ್ಕೆ 3). ಆಸ್ಟ್ರೇಲಿಯ-299 ಮತ್ತು 2 ವಿಕೆಟಿಗೆ 130 (ಲಬುಶೇನ್ ಔಟಾಗದೆ 62, ವಾರ್ನರ್ 57, ಸಾಜಿದ್ ಖಾನ್ 49ಕ್ಕೆ 2).
ಪಂದ್ಯಶ್ರೇಷ್ಠ: ಆಮೀರ್ ಜಮಾಲ್.
ಸರಣಿಶ್ರೇಷ್ಠ: ಪ್ಯಾಟ್ ಕಮಿನ್ಸ್.