ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಯ ದ್ವಿತೀಯ ದಿನದಾಟದಲ್ಲಿ ನೆಚ್ಚಿನ ಆಟಗಾರರಾದ ಡ್ಯಾನಿಲ್ ಮೆಡ್ವೆಡೇವ್, ಸ್ಟೆಫನಸ್ ಸಿಸಿಪಸ್, ಆ್ಯಂಡ್ರೆ ರುಬ್ಲೇವ್, ಸಿಮೋನಾ ಹಾಲೆಪ್ ಮೊದಲಾದವರೆಲ್ಲ ಮೊದಲ ಸುತ್ತನ್ನು ಯಶಸ್ವಿಯಾಗಿ ದಾಟಿದ್ದಾರೆ.
ಆದರೆ ಯುಎಸ್ ಓಪನ್ ವನಿತಾ ಫೈನಲಿಸ್ಟ್ ಲೇಲಾ ಫೆರ್ನಾಂಡಿಸ್ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದಾರೆ.
ದ್ವಿತೀಯ ಗ್ರ್ಯಾನ್‌ಸ್ಲಾಮ್ ಮೇಲೆ ಕಣ್ಣಿಟ್ಟಿರುವ ಮೆಡ್ವೆಡೇವ್ ಸ್ವಿಸ್ ಆಟಗಾರ ಹೆನ್ರಿ ವಿರುದ್ಧ ಸೋಲಿನ ದವಡೆಯಿಂದ ಪಾರಾದರು. ಗೆಲುವಿನ ಅಂತರ 6-1, 6-4 , 7-6 (3). ವನಿತಾ ಸಿಂಗಲ್ಸ್‌ನಲ್ಲಿ ಲೇಲಾ ಫೆರ್ನಾಂಡಿಸ್ ಅವರಿಗೆ ಆತಿಥೇಯ ನಾಡಿನ ವೈಲ್ಡ್‌ಕಾರ್ಡ್ ಆಟಗಾರ್ತಿ ಮ್ಯಾಡಿಸನ್ ಇಂಗ್ಲಿಸ್ 6-4, 6-2ರಿಂದ ಆಘಾತವಿಕ್ಕಿದರು.
5ನೇ ಶ್ರೇಯಾಂಕದ ಆ್ಯಂಡ್ರೆ ರುಬ್ಲೇವ್ 6-3, 6-2, 6-2 ಅಂತರದಿಂದ ಇಟಲಿಯ ಗಿಯಾನುÉಕ ಮೇಜರ್ ಅವರನ್ನು ಮಣಿಸಿದರು. ಸಿಸಿಪಸ್ 6-2, 6-4, 6-3ರಿಂದ ಸ್ವೀಡನ್‌ನ ಮೈಕಲ್ ಮೈಮರ್ ಅವರನ್ನು ಹಿಮ್ಮೆಟ್ಟಿಸಿದರು. ವೈಲ್ಡ್‌ಕಾರ್ಡ್ ಮೂಲಕ ಪ್ರವೇಶ ಪಡೆದ ಆ್ಯಂಡಿ ಮರ್ರೆ 5 ಸೆಟ್‌ಗಳ ಭಾರೀ ಹೋರಾಟದ ಬಳಿಕ ನಿಕೋಲಸ್ ಬಾಸಿಲಸ್ವಿಲಿ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು.
ನಿಕ್ ಕಿರ್ಗಿಯೋಸ್, ಡೀಗೊ ಶಾರ್ಟ್ಸ್ಮನ್, ಮರಿನ್ ಸಿಲಿಕ್ ಕೂಡ ನೇರ ಸೆಟ್‌ಗಳಿಂದ ಜಯ ಒಲಿಸಿಕೊಂಡರು.
ಸ್ವಿಯಾಟೆಕ್ ಸುಲಭ ಜಯ
ವನಿತಾ ವಿಭಾಗದಲ್ಲಿ ಫ್ರೆಂಚ್ ಓಪನ್ ಚಾಂಪಿಯನ್ ಪೋಲೆಂಡ್‌ನ ಐಗಾ ಸ್ವಿಯಾಟೆಕ್ ಯುಕೆಯ ಅರ್ಹತಾ ಆಟಗಾರ್ತಿ ಹ್ಯಾರೀಟ್ ಡಾರ್ಟ್ ವಿರುದ್ಧ 6-3, 6-0 ಅಂತರದ ಜಯ ಸಾಧಿಸಿದರು.
ಸಿಮೋನಾ ಹಾಲೆಪ್ ಪೋಲೆಂಡ್‌ನ ಮ್ಯಾಗ್ಡಲೆನಾ ಫ್ರೆಕ್ ವಿರುದ್ಧ 6-4, 6-3ರಿಂದ; 3ನೇ ಶ್ರೇಯಾಂಕದ ಗಾರ್ಬಿನ್ ಮುಗುರುಜಾ ಫ್ರಾನ್ಸ್‌ನ ಕ್ಲಾರಾ ಬ್ಯುರೆಲ್ ವಿರುದ್ಧ 6-3, 6-4ರಿಂದ ಮೇಲುಗೈ ಸಾಧಿಸಿದರು.
ಮೊದಲ ಸುತ್ತಿನಿಂದ ಮುನ್ನಡೆದ ಇತರರೆಂದರೆ ಅರಿನಾ ಸಬಲೆಂಕಾ, ಎಮ್ಮಾ ರಾಡುಕಾನು, ಸಮಂತಾ ಸ್ಟೋಸರ್ ಮತ್ತು ಅನೆಟ್ ಕೊಂಟವೀಟ್.