ಔರಂಗಾಬಾದ್, ಮೇ 29 : ಮಹಾರಾಷ್ಟ್ರ ಮತ್ತು ದೇಶದ ಇತರ ರಾಜ್ಯಗಳಲ್ಲಿ ಬೆಳೆಗಳು ಮತ್ತು ಸಸ್ಯವರ್ಗವನ್ನು ನಾಶಮಾಡುವ ಅಪಾಯಕಾರಿ ಮಿಡತೆಗಳ ಹರಡುವಿಕೆಯ ಮಧ್ಯೆ ಇಲ್ಲಿನ ಕೃಷಿ ವಿಶ್ವವಿದ್ಯಾಲಯವು ಮಿಡತೆ ಮೊಟ್ಟೆಗಳನ್ನು ನಾಶಮಾಡಲು ಮತ್ತು ಅವುಗಳಿಂದ ಬೆಳೆಗಳನ್ನು ರಕ್ಷಿಸಲು ಬೇವಿನ ಎಣ್ಣೆಯನ್ನು ಸಿಂಪಡಿಸುವಂತಹ ಕೆಲವು ಪರಿಣಾಮಕಾರಿ ಕ್ರಮಗಳ ಸಲಹೆಯನ್ನು ನೀಡಿದೆ.
ಈ ಬೆಳೆ ತಿನ್ನುವ ಮಿಡತೆಗಳ ಹಿಂಡುಗಳು ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಾದ್ಯಂತ ಹರಡಿವೆ. ವೇಗವಾಗಿ ಚಲಿಸುವ ಈ ಕೀಟಗಳು ಪ್ರಸಕ್ತ ವಾರದ ಆರಂಭದಲ್ಲಿ ಪೂರ್ವ ಮಹಾರಾಷ್ಟ್ರದ ವಿದರ್ಭದ ಭಾಗಗಳನ್ನು ಪ್ರವೇಶಿಸಿವೆ. ಪೂರ್ವ ಮಹಾರಾಷ್ಟ್ರದಿಂದ ಈ ಮಿಡತೆಗಳು ಗುರುವಾರ ಮಧ್ಯಾಹ್ನ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಗೆ ದಾಟಿವೆ ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬುಧವಾರ ನಾಗಪುರ ಜಿಲ್ಲೆಯಿಂದ ಭಂಡಾರವನ್ನು ಪ್ರವೇಶಿಸಿದ ಅನಂತರ ಮಿಡತೆ ಹಿಂಡುಗಳು ಪೂರ್ವಕ್ಕೆ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯತ್ತ ಸಾಗುತ್ತಿವೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದರು.
ಬೆಳೆಗಳನ್ನು ನಾಶಪಡಿಸುವ ಮತ್ತು ಆಹಾರವನ್ನು ಹುಡುಕುತ್ತಾ ದೂರದ ಪ್ರಯಾಣ ಮಾಡುವ ಈ ಮಿಡತೆಗಳ ಹಿಂಡಿನ ಅಪಾಯವನ್ನು ಕೆಲವು ಕ್ರಮಗಳನ್ನು ಕೈಗೊಳ್ಳುವ ಮೂಲಕ ನಿಭಾಯಿಸಬಹುದಾಗಿದೆ ಎಂದು ಮರಾಠವಾಡದ ಪರ್ಭಾಣಿಯಲ್ಲಿರುವ ವಸಂತರಾವ್ ನಾಯ್ಕ್ ಕೃಷಿ ವಿಶ್ವವಿದ್ಯಾಲಯ ಹೇಳಿದೆ. ಅವುಗಳ ಮೊಟ್ಟೆಗಳನ್ನು ನಾಶಪಡಿಸುವುದು, ನಿರ್ದಿಷ್ಟ ಗಾತ್ರದ ಕಂದಕಗಳನ್ನು ಅಗೆಯುವುದು ಮತ್ತು ನಿಂತಿರುವ ಬೆಳೆಗಳ ಮೇಲೆ ಬೇವಿನ ಎಣ್ಣೆಯನ್ನು ಸಿಂಪಡಿಸುವುದು ಈ ಮಿಡತೆಯಿಂದ (ಸ್ಕಿಸ್ಟೊಕೆರ್ಕಾ ಗ್ರೆಗೇರಿಯಾ) ಉಂಟಾಗುವ ಭೀತಿಯನ್ನು ನಿಭಾಯಿಸಲು ಕೆಲವು ಪರಿಣಾಮಕಾರಿ ವಿಧಾನಗಳಾಗಿವೆ ಎಂದು ಕೃಷಿ ವಿವಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಈ ನಿಟ್ಟಿನಲ್ಲಿ ರೈತರಿಗೆ ವಿಶ್ವವಿದ್ಯಾಲಯದ ಕೃಷಿ ಕೀಟಶಾಸ್ತ್ರ ವಿಭಾಗವು ಗುರುವಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಹೆಣ್ಣು ಮಿಡತೆಗಳು ತೇವಾಂಶವುಳ್ಳ ಮರಳು ಭೂಮಿಯಲ್ಲಿ 50 ರಿಂದ 100 ಮೊಟ್ಟೆಗಳನ್ನು ಇಡುತ್ತವೆ. ಈ ಮೊಟ್ಟೆಗಳು ಒಡೆಯುವ ಅವಧಿಯು ಪರಿಸರದ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಇದು ಎರಡರಿಂದ ನಾಲ್ಕು ವಾರಗಳಿಗೆ ವಿಸ್ತರಿಸಬಹುದು. ಲಾರ್ವಾಗಳು ಹೊರಬಂದ ತತ್ ಕ್ಷಣ ಅವುಗಳಿಗೆ ಹಾರಲು ಸಾಧ್ಯವಿಲ್ಲ. ಹಾಗಾಗಿ, ಈ ಮೊಟ್ಟೆಗಳನ್ನು ಗುಂಪುಗಳಾಗಿ ನಾಶಮಾಡಬೇಕು ಎಂದು ವಿವಿ ಹೇಳಿದೆ.
ರೈತರು 60 ಸೆಂಟಿಮೀಟರ್ ಅಗಲ ಮತ್ತು 75 ಸೆಂಟಿಮೀಟರ್ ಆಳದ ಕಂದಕಗಳನ್ನು ಅಗೆಯುವ ಮೂಲಕ ಹಿಂಡಿನಿಂದ ಸಣ್ಣ ಮಿಡತೆಗಳನ್ನು ಹಿಡಿಯಬಹುದಾಗಿದೆ ಎಂದು ಅದು ತಿಳಿಸಿದೆ. ವಿಶ್ವವಿದ್ಯಾಲಯದ ತಜ್ಞರ ಪ್ರಕಾರ, ಲಾರ್ವಾಗಳು ಬೆಳೆದು ಗುಂಪುಗಳಾಗಿ ಹಾರಲು ಪ್ರಾರಂಭಿಸಿದಾಗ ಅವು ಎಲೆಗಳು, ಕೊಂಬೆಗಳು, ಹೂವುಗಳು ಮತ್ತು ಬೀಜಗಳನ್ನು ನಾಶಮಾಡುತ್ತವೆ. ವಯಸ್ಕ ಮಿಡತೆಗಳು ತಮ್ಮ ತೂಕಕ್ಕೆ ಸಮನಾದ ಆಹಾರವನ್ನು ಸೇವಿಸಬಲ್ಲವು ಮತ್ತು ಗಂಟೆಗೆ 12 ರಿಂದ 16 ಕಿ.ಮೀ ವೇಗದಲ್ಲಿ ಹಾರಬಲ್ಲವು ಎಂದವರು ಹೇಳಿದ್ದಾರೆ.
ಮಿಡತೆಗಳ ಸಮೂಹವು ಒಂದು ಚದರ ಕಿ.ಮೀ ಪ್ರದೇಶದಲ್ಲಿ ಹರಡಿದ್ದರೆ, ಅವುಗಳ ತೂಕ 3,000 ಕ್ವಿಂಟಾಲ್ ವರೆಗೆ ಇರಬಹುದು. ಹೊಗೆಯ ಸಹಾ ಯದಿಂದ ರಾತ್ರಿಯ ಸಮಯದಲ್ಲಿ (ಮಿಡತೆಗಳು ವಿಶ್ರಾಂತಿ ಸಮಯ) ಅವುಗಳ ಹಿಂಡುಗಳನ್ನು ತಟಸ್ಥಗೊಳಿಸಬಹುದಾಗಿದೆ. ಆದರೆ ರೈತರು ಬಹಳ ಜಾಗರೂಕರಾಗಿರಬೇಕು ಮತ್ತು ತಮ್ಮ ಬೆಳೆಗಳಿಗೆ ಬೆಂಕಿ ಹತ್ತಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ವಿಶ್ವವಿದ್ಯಾಲಯ ಹೇಳಿದೆ. ಹೆಕ್ಟೇರ್‌ಗೆ 2.5 ಲೀಟರ್ ಬೇವಿನ ಎಣ್ಣೆಯನ್ನು ಸಿಂಪಡಿಸುವುದು ಮಿಡತೆಗಳ ಹಿಂಡುಗಳನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ವಿವಿ ತಿಳಿಸಿದೆ.