ಧಾರವಾಡ: ತಂತ್ರಜ್ಞಾನ ಮತ್ತು ಕಲಿತ ಶಿಕ್ಷಣ ಬಳಸಿಕೊಂಡು ಪೊಲೀಸ್ ಇಲಾಖೆಯಲ್ಲಿ ವೃತ್ತಿಪರತೆಯಿಂದ ಕೆಲಸ ಮಾಡಬೇಕು ಎಂದು ಪೊಲೀಸ್ ಮಹಾನಿರ್ದೇಶಕ, ಕೆಎಸ್‌ಪಿಎಚ್-ಐಡಿಸಿಎಲ್‌ನ ಅಧ್ಯಕ್ಷ ರಾಘವೆಂದ್ರ ಔರಾದ್ಕರ ಹೇಳಿದರು.
ಇಲ್ಲಿನ ಪೊಲೀಸ್ ತರಬೇತಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ಗಳ 5ನೇ ತಂಡದ ಹಾಗೂ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ಗಳ 1ನೇ ತಂಡದ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಹೊಸದಾಗಿ ಸೇವೆಗೆ ಸೇರಿರುವ ಬಹುತೇಕರು ಪದವಿ, ಸ್ನಾತಕೋತ್ತರ ಪದವಿ ಮತ್ತು ವೃತ್ತಿಪರ ಕೋರ್ಸ್ ಗಳನ್ನು ಪಡೆದವರಾಗಿದ್ದಾರೆ. ಯಾವುದೇ ಜೀವಹಾನಿ,ಆಸ್ತಿ ಹಾನಿ ಆಗದಂತೆ ಸಾರ್ವಜನಿಕರನ್ನು ಮತ್ತು ಸಾರ್ವಜನಿಕ ಆಸ್ತಿಯನ್ನು ರಕ್ಷಿಸಿ ರಕ್ಷಕರಾಗಬೇಕು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಇಲಾಖೆಗೆ ಕೀರ್ತಿ ತರಬೇಕು ಎಂದರು.
ಪೊಲೀಸ್ ಮ್ಯಾನುವಲ್ ಇಲಾಖೆಯ ಅಡಿಪಾಯ.ಅದನ್ನು ಸದಾ ಮನನ ಮಾಡಿಕೊಂಡು ಅದರಂತೆ ನಡೆಯುವುದರಿಂದ ಸ್ವಾಭಿಮಾನ, ಆತ್ಮಗೌರವಹೆಚ್ಚುತ್ತದೆ. ಉದಾಸಿನತೆ ತೊರದೇ ಪೊಲೀಸ್ ಮ್ಯಾನುವಲ್ ಓದಿಕೊಳ್ಳಬೇಕು. ಪೊಲೀಸರಿಗೆ ಯಾವಾಗಲೂ ತಮ್ಮ ಸಮವಸ್ತ್ರ ಹಾಗೂ ಇಲಾಖೆ ಬಗ್ಗೆ ಹೆಮ್ಮೆ, ಅಭಿಮಾನವಿರಬೇಕು. ತರಬೇತಿಅಂತ್ಯದಲ್ಲಿ ಪ್ರತಿಯೊಬ್ಬರು ಸ್ವೀಕರಿಸುವ ಪ್ರತಿಜ್ಞೆಯನ್ನು ಜೀವನದುದ್ದಕೂ ಪಾಲಿಸಿಕೊಂಡು ಬರಬೇಕು ಎಂದರು.
ತರಬೇತಿ ವಿಭಾಗದ ಪೊಲೀಸ್ ಮಹಾನಿರೀಕ್ಷಕ ರವಿ ಎಸ್., ಎಸ್‌ಪಿ ವರ್ತಿಕಾ ಕಟಿಯಾರ್, ಉಪಪೊಲೀಸ್ ವರಿಷ್ಠಾಧಿಕಾರಿ ರವಿ ನಾಯ್ಕ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು, ಗಣ್ಯರು ಇದ್ದರು. ಪೊಲೀಸ್ ತರಬೇತಿ ಶಾಲೆ ಪ್ರಾಂಶುಪಾಲರಾಗಿರುವ ಪೊಲೀಸ್ ಅಧಿಧೀಕ್ಷಕ ಎನ್.ಬಿ. ಜಾಧವ ಸ್ವಾಗತಿಸಿ, ಶಾಲೆಯ ಪ್ರಗತಿ ವರದಿ ಮಂಡಿಸಿದರು. ಡಿಎಸ್‌ಪಿಆಗಿರುವ ಉಪಪ್ರಾಂಶುಪಾಲ ಟಿ. ಪೈಜುದ್ದೀನ್ ವಂದಿಸಿದರು. ರಾಜ್ಯದ ವಿವಿಧ ಒಂಭತ್ತು ಘಟಕಗಳಿಂದ 268 ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್‌ಗಳು ಹಾಗೂ 106 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ಗಳು ತರಬೇತಿ ಪೂರ್ಣಗೊಳಿಸಿ, ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.