ಔರಾದ: ಭಾಲ್ಕಿ ತಾಲೂಕಿನ ಕೋಸಂ ಗ್ರಾಮದ ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಖಂಡಿಸಿ ಲಿಂಗಾಯತ ಸಮಾಜ ಯುವ ಸಂಘ ಹಾಗೂ ಹಿಂದೂಪರ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಔರಾದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಬೆಳಗ್ಗೆಯಿಂದ ಸಂಜೆ ವರೆಗೆ ಜನಜೀವನ ಬಹುತೇಕ ಸ್ತಬ್ಧವಾಗಿತ್ತು. ಶಾಲೆ-ಕಾಲೇಜು, ವ್ಯಾಪಾರ ಮಳಿಗೆಗಳನ್ನು ಸ್ವಯಂ ಪ್ರರಿತವಾಗಿ ಬಂದ ಮಾಡಲಾಗಿತ್ತು. ಖಾಸಗಿ ಶಾಲಾ ಕಾಲೇಜುಗಳಿಗೂ ರಜೆ ನೀಡಲಾಗಿತ್ತು. ಸಾರಿಗೆ ಸಂಸ್ಥೆ ಬಸ್ ಹಾಗೂ ಖಾಸಗಿ ವಾಹನಗಳ ಸಂಚಾರವೂ ಇಲ್ಲದ್ದರಿಂದ ಪ್ರಯಾಣಿಕರು ಕೆಲ ಕಾಲ ಪರದಾಡಿದರು.
ಲಿಂಗಾಯತ ಯುವ ಸಂಘ, ಭಜರಂಗ ದಳ, ಶ್ರೀರಾಮ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ, ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್, ದಲಿತ ಸಂಘರ್ಷ ಸಮಿತಿ ಸೇರಿದಂತೆ 25ಕ್ಕೂ ಹೆಚ್ಚು ಸಂಘಟನೆಯ ಸದಸ್ಯರು, ಶಾಸಕ ಪ್ರಭು ಚವ್ಹಾಣ, ಬಿಜೆಪಿ ಮುಖಂಡರು ಹಾಗೂ ಸಾವಿರಾರು ಜನರು ಕನ್ನಡಾಂಬೆಯ ವೃತ್ತದ ಬಳಿ ಸೇರಿ ಪ್ರತಿಭಟನಾ ರ್ಯಾಲಿ ಮೂಲಕ ಬಸವೇಶ್ವರ ವೃತ್ತಕ್ಕೆ ತೆರಳಿದರು. ಬಳಿಕ ಗೃಹ ಸಚಿವರಿಗೆ ಬರೆದ ಮನವಿಯನ್ನು ತಹಶೀಲ್ದಾರ ಎಂ.ಚಂದ್ರಶೇಖರ ಅವರಿಗೆ ಸಲ್ಲಿಸಿದರು.
ಈ ವೇಳೆ ಶಾಸಕ ಪ್ರಭು ಚವ್ಹಾಣ, ವಿದ್ಯಾರ್ಥಿನಿಯ ಅತ್ಯಾಚಾರ, ಕೊಲೆ ಪ್ರಕರಣವನ್ನು ಸರ್ಕಾರ ಸಿಬಿಐ ತನಿಖೆ ನಡೆಸಬೇಕು. ಸಿಎಂ ಸಿದ್ದರಾಮಯ್ಯ ಅವರು ಮೂರು ದಿನಗಳಲ್ಲಿ ಮೃತ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ 30 ಲಕ್ಷ ರೂ. ಪರಿಹಾರ ನೀಡಬೇಕು ಎಂದರು. ಇಲ್ಲವಾದಲ್ಲಿ ತಾವು ಮೃತ ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ವೈಯಕ್ತಿಕವಾಗಿ ಕೈಲಾದಷ್ಟು ಸಹಾಯ ಮಾಡಲಾಗುವುದು ಎಂದರು. ಅಖೀಲ ಭಾರತ ವಿದ್ಯಾರ್ಥಿ ಪರಿಷತ್ ಪ್ರಮುಖ ಹಾವಪ್ಪ ದ್ಯಾಡೆ, ಇಂಥ ಘಟನೆಗಳನ್ನು ಅಳಿಸಿ ಹಾಕಲು ಸರ್ಕಾರ ವಿಶೇಷ ನ್ಯಾಯಾಲಯ ಸ್ಥಾಪಿಸಿ ಅತ್ಯಾಚಾರ ಆರೋಪಿಗಳಿಗೆ ಜಾಮೀನು ನೀಡದೇ ಕಠಿಣ ಶಿಕ್ಷೆ ನೀಡಬೇಕೆಂದು ಹೇಳಿದರು. ಬಸವರಾಜ ಹಳ್ಳೆ ಮಾತನಾಡಿದರು.
ಪೊಲೀಸ್ ಬಂದೋಬಸ್ತ್: ಔರಾದ ಬಂದ್ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಭಾಲ್ಕಿ ಡಿವೈಎಸ್‌ಪಿ ವೆಂಕನಗೌಡ, ಸಿಪಿಐ ರಮೇಶಕುಮಾರ ಸೇರಿದಂತೆ 200 ಪೊಲೀಸ್ ಸಿಬ್ಬಂದಿ ಬಂದೋಬಸ್ತ್ನಲ್ಲಿ ತೊಡಗಿದ್ದರು.
ಲಿಂಗಾಯತ ಸಮಾಜದ ಆನಂದ ದ್ಯಾಡೆ, ಅನೀಲ ಹೇಡೆ, ಸುದೀಪ, ಮನೋಹರ ಕಾಡೋಡೆ, ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌ನ ಅಶೋಕ ಶೆಂಬೆಳ್ಳಿ, ಅನೀಲ ಮೇತ್ರೆ, ಅಶೋಕ ಅಲ್ಮಾಜೆ, ಜಿಪಂ ಮಾಜಿ ಸದಸ್ಯ ಕಾಶಿನಾಥ ಜಾಧವ, ದೀಪಕ ಪಾಟೀಲ, ಸತೀಶ ಪಾಟೀಲ, ಸಚೀನ ರಾಠೊಡ, ವೀರೇಂದ್ರ ರಾಜಾಪೂರೆ, ಅರಹಂತ, ಶರಣಬಸವ ಸಾವಳೆ, ಬಂಡೆಪ್ಪ ಕಂಟೆ, ಸಂಗಮೇಶ ಪಾಟೀಲ, ಶಿವರಾಜ ಅಲ್ಮಾಜೆ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.