Advertisement

ನೀರಿನ ಸಮಸ್ಯೆಗೆ ಸಿಗುವುದೇ ಮುಕ್ತಿ?

02:48 PM Sep 12, 2019 | Naveen |

ರವೀಂದ್ರ ಮುಕ್ತೇದಾರ
ಔರಾದ:
ಪಟ್ಟಣದ ಜನರಿಗೆ ದಶಕಗಳಿಂದ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆಗೆ ಸಚಿವ ಪ್ರಭು ಚವ್ಹಾಣ ತಮ್ಮ ಆಡಳಿತಾವಧಿಯಲ್ಲಿ ಶಾಶ್ವತ ಮುಕ್ತಿ ನೀಡುತ್ತಾರೆಯೇ?

Advertisement

ಇಪ್ಪತ್ತು ವಾರ್ಡ್‌ಗಳಿರುವ ಪಟ್ಟಣದಲ್ಲಿ ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿಯೇ ಕಾಡುತ್ತಿದೆ. ಶಾಶ್ವತ ಸಮಸ್ಯೆಗೆ ಇಂದಿಗೂ ಮುಕ್ತಿಯೇ ಸಿಕ್ಕಿಲ್ಲ. ಬೇಸಿಗೆ ಕಾಲದಲ್ಲಿ ಮೈಲುಗಟ್ಟಲೆ ದೂರ ಹೋಗಿ ನಿವಾಸಿಗಳು ನೀರು ತರುವ ಅನಿವಾರ್ಯತೆ ಎದುರಾಗುತ್ತದೆ. ಅಲ್ಲದೇ ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ನೀರು ಪೂರೈಸುವ ತೇಗಂಪುರ ಹಾಗೂ ಬೋರಾಳ ಗ್ರಾಮದಲ್ಲಿ ಅಂತರ್ಜಲಮಟ್ಟ ಸಂಪೂರ್ಣ ಕುಸಿದಿದೆ. ಇದರಿಂದ ಪಟ್ಟಣ ಪಂಚಾಯತ ಅಧಿಕಾರಿಗಳು ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಕ್ರಮ ತೆಗೆದುಕೊಂಡಿದ್ದಾರೆ.

ತಾಲೂಕು ಕೇಂದ್ರ ಸ್ಥಾನ ಔರಾದಗೆ ಬೊರಾಳ ಗ್ರಾಮದಿಂದ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಜನಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ನೀರು ಕೊರತೆತಯಾದಾಗ ಅಂದಿನ ಶಾಸಕ ಗುಂಡಪ್ಪ ವಕೀಲ ಅವರು ತೇಗಂಪುರ ಗ್ರಾಮದಿಂದ ನೀರು ಪೂರೈಕೆಗೆ ಅನುದಾನ ತಂದ ಬಳಿಕ ಸಮಸ್ಯೆಗೆ ನಾಲ್ಕು ವರ್ಷಗಳ ಕಾಲ ಮುಕ್ತಿ ಸಿಕ್ಕಿತ್ತು. ತದ ನಂತರ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಹಾಲಿ ಸಚಿವ ಪ್ರಭು ಚವ್ಹಾಣ ಔರಾದ ಪಟ್ಟಣ ಸೇರಿದಂತೆ ಆರು ಗ್ರಾಮಕ್ಕೆ ಶಾಶ್ವತ ಹಾಗೂ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಿದರು. ಕಾಮಗಾರಿ ಸಹ ಪೂರ್ಣಗೊಂಡಿದೆ. ಆದರೂ ನೀರು ಸಾಕಾಗುತ್ತಿಲ್ಲ. ಹಲ್ಲಳ್ಳಿಯಿಂದ ಪಟ್ಟಣಕ್ಕೆ ಸರಬರಾಜು ಮಾಡುವ ಕುಡಿಯುವ ನೀರಿನ ಯೋಜನೆ ಸಂಪೂರ್ಣ ವಿಫಲವಾಗಿದೆ.

ಕಾರಂಜಾ ಜಲಾಶಯದಿಂದ ಈಗಾಗಲೇ ಬೀದರ ಜಿಲ್ಲಾ ಕೇಂದ್ರ ಸ್ಥಾನ, ಹುಮನಬಾದ ತಾಲೂಕು ಮತ್ತು ಭಾಲ್ಕಿ ತಾಲೂಕಿಗೂ ನಿರಂತರವಾಗಿ ಕುಡಿಯುವ ನೀರು ಪೂರೈಕೆಸಲಾಗುತ್ತಿದೆ.ಅದರಂತೆ ಜಿಲ್ಲೆಯ ಕಾರಂಜಾ ಜಲಾಶಯದಿಂದ ಔರಾದ ತಾಲೂಕಿಗೆ ನೀರು ಪೂರೈಕೆಗೆ ಸರ್ಕಾರ ಹಾಗೂ ಸಚಿವರು ಮುಂದಾಗಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಪಟ್ಟಣದ ಜನರು ನೀರಿಗಾಗಿ ಅಲೆದಾಡುವ ಪರಿಸ್ಥಿತಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ಅದರಂತೆ ತೇಗಂಪುರ ಮತ್ತು ಬೋರಾಳ ಗ್ರಾಮದ ನೀರು ಸಹ ಜನರಿಗೆ ಬರುತ್ತಿಲ್ಲ. ಪಪಂ ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಕೊಳವೆ ಮತ್ತು ತೆರದ ಬಾವಿ ನೀರು ಖರೀದಿಸಿ ಜನರಿಗೆ ಉಚಿತವಾಗಿ ಪೂರೈಸುತ್ತಿದ್ದಾರೆ.

Advertisement

ಸಚಿವ ಪ್ರಭು ಚವ್ಹಾಣ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನೇತೃತ್ವದ ಮೈತ್ರಿ ಸರ್ಕಾರದ ಆಡಳಿತಾವಧಿಯಲ್ಲಿ ಕಾರಂಜಾ ಜಲಾಶಯದಿಂದ ಔರಾದ ಪಟ್ಟಣಕ್ಕೆ ನೀರು ಪೂರೈಸುವಂತೆ ಅಂದಿನ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ದರು. ಅಲ್ಲದೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆಗೆ ಕಾರಂಜಾ ಜಲಾಶಯಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ಕೆಲ ತಿಂಗಳ ಹಿಂದೆ ಬಸವಕಲ್ಯಾಣ ತಾಲೂಕಿಗೆ ಆಗಮಿಸಿದ್ದ ಸಿಎಂ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದರು.

ಆದರೆ ಕಾಲಚಕ್ರ ಬದಲಾಗಿ ಬಿಜೆಪಿ ಅಧಿಕಾರದ ಚುಕ್ಕಾಣಿ ಸಹ ಹಿಡಿದುಕೊಂಡಿದೆ. ಅಲ್ಲದೆ ಪ್ರಭು ಚವ್ಹಾಣ ಕೂಎ ಸಚಿವರಾಗಿದ್ದು, ಸಮಸ್ಯೆ ಬಗೆಹರಿಸಲು ಶ್ರಮಿಸುತ್ತಾರೋ ಎಂಬ ಪ್ರಶ್ನೆ ಕಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next