ಔರಾದ: ತಾಲೂಕು ಕೇಂದ್ರದಲ್ಲಿರುವ ಉಪ ಬಂಧಿಖಾನೆಯಲ್ಲಿ 23 ಜನ ವಿಚಾರಣಾ ಬಂಧಿಗಳಿದ್ದು, ಅಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಇನ್ನಿತರ ಸೌಕರ್ಯಗಳು ಇಲ್ಲದ ಕಾರಣ ಬಂಧಿಗಳನ್ನು ಜಿಲ್ಲಾ ಸಶಸ್ತ್ರ ಮಿಸಲು ಪಡೆಯೊಂದಿಗೆ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರ ಮಾಡಲು ನ್ಯಾಯಾಧೀಶರು ಅ.17ರಂದು ರಂದು ಲಿಖೀತ ಆದೇಶ ನೀಡಿದ್ದಾರೆ.
Advertisement
ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಬರುವುದು ಸಾಮಾನ್ಯ. ಆದರೆ ಗಡಿ ತಾಲೂಕಿನಲ್ಲಿ ಮಳೆಗಾಲ ಮಗಿಯುವ ಹಂತಕ್ಕೆ ಬಂದರೂ ನೀರಿನ ಸಮಸ್ಯೆಯಿಂದ ಇಲ್ಲಿನ ಜನರು ನಿತ್ಯ ಪರದಾಡುವಂತಾಗಿದೆ. ಹೀಗೆ ಮೂರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಿಂದ ನರಳುತ್ತಿರುವ ಔರಾದ ತಾಲೂಕಿನ ಜನರಿಗೆ ವರ್ಷದಿಂದ ವರ್ಷಕ್ಕೆ ಸಮಸ್ಯೆ ಹೆಚ್ಚುತ್ತಲೇ ಇದೆ. ಆದರೆ ಜನಪ್ರತಿನಿಧಿಗಳು ಹಾಗೂ ಸರ್ಕಾರ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸಂಪೂರ್ಣ ವಿಫಲರಾಗಿದೆ.
ರೀತಿ ಕುಡಿಯುವ ನೀರಿನ ಸಮಸ್ಯೆ ಬಂದಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನೇ ನಿಲ್ಲಿಸಲಾಗಿತ್ತು. ಅದರಂತೆ ಇದೀಗ ಬಂಧೀಖಾನೆಯಲ್ಲಿ ನೀರಿನ ಸಮಸ್ಯೆ ಇರುವುದರಿಂದ ಬಂಧಿಗಳನ್ನು ತಾತ್ಕಾಲೀಕವಾಗಿ ಬೀದರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಬೀದರ ಸಂಸದ ಭಗವಂತ ಖೂಬಾ ಹಾಗೂ ಜಿಲ್ಲಾ ಉಸ್ತುವಾರಿ ಮತ್ತು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಅವರ ಸ್ವಂತ ತಾಲೂಕಿನಲ್ಲಿ ವರ್ಷದಿಂದ ವರ್ಷಕ್ಕೆ ಹೀಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ಸರ್ಕಾರಿ ಕಚೇರಿಗೆ ನೀರಿನ ಬಿಸಿ ತಟ್ಟಿದ್ದರೆ ಅಧಿಕಾರಿಗಳು ಹಾಗೂ ಸರ್ಕಾರ ಬೇರೆ ಕಡೆಗೆ ಸ್ಥಳಾಂತರ ಮಾಡುತ್ತಿದ್ದಾರೆ. ವರ್ಷಪೂರ್ತಿ ಜೀವನ ಸಾಗಿಸುವ ಬಡ ಕುಟುಂಬಗಳು ಹೇಗೆ ಕಷ್ಟದ ಜೀವನ ಸಾಗಿಸಬೇಕು ಇಂಥ ಬರ ಸ್ಥಿತಿಯಲ್ಲಿ ಎನ್ನುವುದನ್ನು ಅರಿತು, ಜನಪ್ರತಿನಿಧಿಗಳು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಲು ಮುಂದಾಗಬೇಕು ಎನ್ನುವುದು ಗಡಿ ತಾಲೂಕಿನ ಜನರ ಮಾತು.