Advertisement

ನೀರು-ಮೇವಿಗೆ ಜಾನುವಾರುಗಳ ಅಲೆದಾಟ

10:08 AM May 05, 2019 | Naveen |

ಔರಾದ: ಕುಡಿಯಲು ನೀರು ಮತ್ತು ತಿನ್ನಲು ಮೇವು ಸಹ ಇಲ್ಲದೆ ಪಟ್ಟಣದ ಅಮರೇಶ್ವರ ಗೋ ಶಾಲೆಯಲ್ಲಿನ ಜಾನುವಾರುಗಳು ಹಾಗೂ ರೈತರ ಬಳಿ ಇರುವ ದನಕರುಗಳು ನರಳುತ್ತಿವೆ.

Advertisement

ಇದು ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಜಾನುವಾರುಗಳ ನಿತ್ಯದ ಸ್ಥಿತಿ.

ಮೇವು ಇಲ್ಲದೆ ಇರುವುದರಿಂದ ಗೋಶಾಲೆ ಜಾನುವಾರಗಳನ್ನು ರಸ್ತೆಯಲ್ಲಿ ಬಿಡಲಾಗುತ್ತಿದೆ. ಇನ್ನು ರೈತರ ಜಾನುವಾರುಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಬೇಸಿಗೆಯಲ್ಲಿ ಬಿಸಿಲಿನ ಕಾವು ಹೆಚ್ಚಾಗುತ್ತಿದ್ದಂತೆ ಪಟ್ಟಣದ ಅಮರೇಶ್ವರ ಗೋ ಶಾಲೆಯಲ್ಲಿರುವ 400 ಜಾನುವಾರುಗಳು ಮೇವು ಹಾಗೂ ನೀರು ಇಲ್ಲದೆ ನಿತ್ಯ ರಸ್ತೆ ರಸ್ತೆಯಲ್ಲಿ ಅಲೆಯುವಂತಹ ಸ್ಥಿತಿ ಬಂದಿದೆ. ದೇವರ ಹೆಸರಿನಲ್ಲಿ ಬಿಟ್ಟಿರುವ ಗೂಳಿ ದನಗಳ ಪರಿಸ್ಥಿತಿ ಭಿನ್ನವಾಗಿಲ್ಲ.

ಈ ಹಿಂದೆ ಅಮರೇಶ್ವರ ಗೋ ಶಾಲೆಗೆ ನಿತ್ಯ ಪಟ್ಟಣ ಪಂಚಾಯತನಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಕೆಲ ದಿನಗಳಿಂದ ನೀರಿನ ಸಮಸ್ಯೆ ಉಲ್ಬಣವಾದ ಹಿನ್ನೆಲೆಯಲ್ಲಿ ನೀರು ಪೂರೈಕೆ ಸ್ಥಗಿತವಾಗಿದೆ. ಸದ್ಯ ಪ್ರತಿನಿತ್ಯ ಒಂದು ಟ್ಯಾಂಕರ್‌ ಮೂಲಕ ಅಮರೇಶ್ವರ ಗೋ ಶಾಲೆಗೆ ನೀರು ಪೂರೈಸಲಾಗುತ್ತಿದೆ. ಟ್ಯಾಂಕರ್‌ ನೀರು ಶಾಲೆಯಲ್ಲಿರುವ 400 ಜಾನುವಾರುಗಳಿಗೆ ಒಂದು ಸಮಯಕ್ಕೆ ಸಾಕಾಗುತ್ತಿದೆ. ಎರಡು ಬಾರಿ ನೀರು ಹೇಗೆ ಪೂರೈಸಬೇಕು ಎನ್ನುವ ಚಿಂತೆ ಗೋರಕ್ಷಣಾ ಸಮಿತಿ ಅಧ್ಯಕ್ಷರಿಗೆ ಎದುರಾಗಿದೆ.

Advertisement

ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನ್ನೆಲೆಯಲ್ಲಿ ಗೋಶಾಲೆಗೆ ಸೇರಿದ ಹೊಲದಲ್ಲಿ ಕಡಿಮೆ ಪ್ರಮಾಣದಲ್ಲಿ ಮೇವು ಬೆಳೆದಿದೆ. ಮಳೆಗಾಲದಿಂದ ಇಲ್ಲಿಯವರೆಗೂ ಹೊಲದಲ್ಲಿ ಬೆಳೆದ ಮತ್ತು ಕೆಲವು ಭಕ್ತರು ದೇಣಿಗೆ ರೂಪದಲ್ಲಿ ನೀಡಿದ ಮೇವು ಜಾನುವಾರುಗಳಿಗೆ ನಿತ್ಯವು ನೀಡಿದ್ದೇವೆ. ಈಗ ಅದೆಲ್ಲ ಮುಗಿದುಹೋಗಿದೆ. ನೀರು, ಮೇವು ಸಹ ಇಲ್ಲದೆ ಗೋ ಶಾಲೆ ಜಾನುವಾರುಗಳನ್ನು ನೋಡಲು ನಮಗೆ ಕಷ್ಟವಾಗುತ್ತಿದೆ ಎನ್ನುತ್ತಾರೆ ಗೋ ಶಾಲೆ ನಿರ್ವಹಣೆಗಾರರು.

ಸರ್ಕಾರ ಬರ ಪೀಡಿತ ಪ್ರದೇಶದಲ್ಲಿ ಗೋ ಶಾಲೆ ಹಾಗೂ ಮೇವು ವಿತರಣಾ ಕೇಂದ್ರ ಆರಂಭಿಸಿ ಅಲ್ಲಿನ ರೈತರ ಜಾನುವಾರುಗಳ ಸಂರಕ್ಷಣೆ ಮಾಡಲು ಮುಂದಾಗಬೇಕು ಎಂದು ಅನುದಾನ ಸಹ ಬಿಡುಗಡೆ ಮಾಡಿದೆ. ಆದರೆ ತಾಲೂಕು ಆಡಳಿತಾಧಿಕಾರಿಗಳ ನಿರ್ಲಕ್ಷ್ಯದಿಂದ ಔರಾದ ಹಾಗೂ ಕಮಲನಗರ ತಾಲೂಕಿನಲ್ಲಿ ಒಂದೇ ಒಂದು ಗೋ ಶಾಲೆ ಆರಂಭಿಸಿಲ್ಲ.

ಮೇವು ವಿತರಣೆ ಕೇಂದ್ರ ಆರಂಭಿಸಿ: ಮೇವು ಇಲ್ಲದಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕೈ ಚೆಲ್ಲಿ ಕುಳಿತುಕೊಳ್ಳುವ ಪ್ರಸಂಗ ಬಂದಿದೆ. ಸರ್ಕಾರ ಹಾಗೂ ಬರ ನಿರ್ವಹಣೆ ಅಧಿಕಾರಿಗಳು ಬೇಗನೆ ಮೇವು ವಿತರಣೆ ಕೇಂದ್ರ ಹಾಗೂ ಗೋ ಶಾಲೆಗಳು ಆರಂಭಿಸುವ ಮೂಲಕ ರೈತರ ಹಾಗೂ ಗೋ ಶಾಲೆಯಲ್ಲಿನ ಜಾನುವಾರುಗಳ ರಕ್ಷಣೆ ಮಾಡಲು ಮುಂದಾಗಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಗೋ ಶಾಲೆಯಲ್ಲಿ ಮೇವು, ನೀರು ಇಲ್ಲದೆ ಜಾನುವಾರುಗಳನ್ನು ರಸ್ತೆಯಲ್ಲಿ ಬಿಡುತ್ತಿದ್ದೇವೆ. ಅಲ್ಲಿ ಇಲ್ಲಿ ಅಲ್ಪ ಸ್ವಲ್ಪ ಆಹಾರ ಸೇವಿಸಿ ರಾತ್ರಿ ಗೋ ಶಾಲೆಗೆ ಬರುತ್ತಿವೆ. ಸರ್ಕಾರ ಗೋ ಶಾಲೆ ಮತ್ತು ಮೇವು ವಿತರಣಾ ಕೇಂದ್ರ ಆರಂಭಿಸುವ ಮೂಲಕ ಗೋವುಗಳ ರಕ್ಷಣೆಗೆ ಮುಂದಾಗಬೇಕು.
ಶಿವರಾಜ ಅಲ್ಮಾಜೆ,
ಅಮರೇಶ್ವರ ಗೋ ರಕ್ಷಣಾ ಸಮಿತಿ ಅಧ್ಯಕ್ಷರು

ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಮೇವು ವಿತರಣೆ ಕೇಂದ್ರ ಆರಂಭಿಸಲಾಗಿದೆ. ಸದ್ಯ ಮೇವು ಇಲ್ಲ. ಎರಡು ದಿನಗಳಲ್ಲಿ ಮೇವು ಬರುತ್ತದೆ. ಬಂದ ತಕ್ಷಣ ಗೋ ಶಾಲೆಗೆ ನೀಡುತ್ತೇವೆ. ಗಡಿ ತಾಲೂಕಿನಲ್ಲಿ ಗೋ ಶಾಲೆ ಆರಂಭಿಸುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಮತನಾಡಿ ಕೆಲವೇ ದಿನಗಳಲ್ಲಿ ಶುರು ಮಾಡುತ್ತೇವೆ.
ಎಂ. ಚಂದ್ರಶೇಖರ, ತಹಶೀಲ್ದಾರ್‌

ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next