ಔರಾದ: ಬಾರದ ಮಳೆಯಿಂದ ಆತಂಕದಲ್ಲಿ ಜೀವನ ಸಾಗಿಸುತ್ತಿದ್ದ ಗಡಿ ತಾಲೂಕಿನ ಅನ್ನದಾತರಿಗೆ ಶುಕ್ರವಾರ ಸಂಜೆಯಿಂದ ರಾತ್ರಿಪೂರ್ತಿ ಸುರಿದ ಮಳೆ ಮಂದಾಹಾಸ ಮೂಡಿಸಿದ್ದು, ಹೊಲದಲ್ಲಿನ ಬೆಳೆಗಳಿಗೆ ಕಳೆ ಬಂದಿದೆ.
ಒಂದೂವರೆ ತಿಂಗಳ ಹಿಂದೆ ತಾಲೂಕಿನ ರೈತರು ತಮ್ಮ ಹೊಲದಲ್ಲಿ ಬಿತ್ತನೆ ಮಾಡಿದ ಬಳಿಕ ಮಳೆ ಬಾರದಿರುವುದರಿಂದ ನಿರಾಶೆ ಮೂಡಿತ್ತು. ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ರೈತರಲ್ಲಿ ಹರ್ಷ ಮೂಡಿದೆ. ಮಂಗಾರು ಬಿತ್ತನೆ ನಂತರ ಮಳೆ ಬಾರದಿರುವುದರಿಂದ ಬಾಡುತ್ತಿರುವ ಬೆಳೆ ಕಂಡು, ಪಟ್ಟಣ-ಗ್ರಾಮೀಣ ಭಾಗದ ರೈತ ಕುಟುಂಬದ ಸದಸ್ಯರು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಹಾಗೂ ಜಾತ್ರೆಗಳನ್ನು ಮಾಡಿದ್ದರು. ಅವರ ಸಂಕಲ್ಪದಂತೆ ಈಗ ವರಣ ಕೃಪೆ ತೋರಿದ್ದಾನೆ.
ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಜಲಮೂಲಗಳಿಗೆ ನೀರು ಬಾರದಿದ್ದರೂ ಹೊಲದಲ್ಲಿನ ಬೆಳೆಗಳಿಗೆ ಸಾಕಾಗುವಷ್ಟು ನೀರು ಬಂದಿದೆ ಎನ್ನುವುದು ಅನುಭವಿ ರೈತರ ಮಾತು.ಬೆಳೆ ಬಾಡುವ ಸಮಯದಲ್ಲಿ ಮಳೆ ಬಂದಿದೆ. ಇದರಿಂದ ತಾಲೂಕಿನ ರೈತರು ಶನಿವಾರ ತಮ್ಮ ಹೊಲಗಳಿಗೆ ಹೋಗಿ ಉತ್ಸಾಹದಿಂದ ಕೆಲಸ ಮಾಡಿದ್ದು ಕಂಡು ಬಂದಿತು.
ಬೆಳೆಗಳಿಗೆ ಬೇಕಾಗುವಷ್ಟು ಮಳೆ ಬಂದಿದೆ. ಆದರೆ ಜಲಮೂಲಗಳಲ್ಲಿ ನೀರು ಬಂದಿಲ್ಲ. ಜಾನುವಾರುಗಳಿಗೆ ಅಗತ್ಯವಿರುವ ಮೇವು ಸಹ ಈ ವರ್ಷ ಬೆಳೆದಿಲ್ಲ. ಇನ್ನೂ ಸ್ವಲ್ಪ ಮಳೆ ಬಂದರೆ ಅನುಕೂಲವಾಗುತ್ತಿತ್ತು. ಕಾರಣ ಇನ್ನೂ ತಾಲೂಕಿನ ಅರವತ್ತು ಗ್ರಾಮದ ಜನರು ಮಳೆಗಾಲದಲ್ಲೂ ಬೇಸಿಗೆಯಂತೆ ಕುಡಿಯುವ ನೀರಿಗಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.
ಹೋಬಳಿವಾರು ಮಳೆ ಪ್ರಮಾಣ: ಔರಾದ ಹೋಬಳಿ ವ್ಯಾಪ್ತಿಯಲ್ಲಿ 36 ಮಿ.ಮೀ., ಚಿಂತಾಕಿ ಹೋಬಳಿ ವ್ಯಾಪ್ತಿಯಲ್ಲಿ 43 ಮಿ.ಮೀ., ದಾಬಕಾ ಹೋಬಳಿ ವ್ಯಾಪ್ತಿಯಲ್ಲಿ 23 ಮಿ.ಮೀ., ಕಮಲನಗರ ಹೋಬಳಿ ವ್ಯಾಪ್ತಿಯಲ್ಲಿ 24 ಮಿ.ಮೀ., ಸಂತಪೂರ ಹೋಬಳಿ ವ್ಯಾಪ್ತಿಯಲ್ಲಿ 42 ಮಿ.ಮೀ., ಠಾಣಾಕುಶನೂರ ಹೋಬಳಿ ವ್ಯಾಪ್ತಿಯಲ್ಲಿ 37 ಮಿ.ಮೀ., ಮಳೆಯಾಗಿದೆ.
ಹೊಲದಲ್ಲಿ ಬೆಳೆಗಳಿಗೆ ಸಾಕಾಗುವಷ್ಟು ಮಳೆ ಬಂದಂತೆ ತಾಲೂಕಿನ ಜಲಮೂಲಗಳಲ್ಲಿ ನೀರು ತುಂಬುವಂತೆ ಮಳೆ ಬರಲಿ. ಈ ವರ್ಷವಾದರೂ ಗಡಿ ತಾಲೂಕಿನಲ್ಲಿ ಬರ ದೂರವಾಗಲಿ ಎನ್ನುವುದು ಪ್ರಜ್ಞಾವಂತರ ಮಾತು.