Advertisement

ಚವ್ಹಾಣ ಅನಾಥ ಮಕ್ಕಳ ಪ್ರಭು

11:03 AM Aug 22, 2019 | Naveen |

ರವೀಂದ್ರ ಮುಕ್ತೇದಾರ
ಔರಾದ
: ಹೈದರಾಬಾದ ಕರ್ನಾಟಕದ ಪ್ರದೇಶದಲ್ಲಿ ಏಕೈಕ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ಪ್ರಭು ಚವ್ಹಾಣ ಅನಾಥವಾಗಿದ್ದ ತಾಲೂಕಿನ ಹದಿನೈದು ಹೆಣ್ಣು ಮಕ್ಕಳಿಗೆ ಹೊಸ ಬಾಳು ದೊರೆಸಿಕೊಟ್ಟು ಕರುಣಾಮಯಿಯಾಗಿದ್ದಾರೆ.

Advertisement

ತಂದೆ ತಾಯಿ ಕಳೆದುಕೊಂಡು ರಸ್ತೆಯಲ್ಲಿ ಅಲೆಯುತ್ತಿದ್ದ ತಾಲೂಕಿನ ಹದಿನೈದು ಮಕ್ಕಳನ್ನು ಪಾಲನೆ ಪೋಷಣೆ ಹಾಗೂ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಕಾಳಗಾಪುರದ ಅಶ್ವಿ‌ನಿ ಹಾಗೂ ಇನ್ನೊಬ್ಬ ಹೆಣ್ಣು ಮಗಳ ಮದುವೆ ಮಾಡಿದ್ದಾರೆ. ಇದಷ್ಟೇ ಅಲ್ಲದೇ ತವರು ಮನೆಯಿಂದ ಮದುವೆ ಸಮಾರಂಭದಲ್ಲಿ ಉಡುಗೆ ಸಹ ನೀಡಿ ಪಾಲಕರ ಜವಾಬ್ದಾರಿ ನಿಭಾಯಿಸಿದ್ದಾರೆ. ಅದರಂತೆ ಇನ್ನುಳಿದ ಹದಿಮೂರು ಮಕ್ಕಳಿಗೆ ಕಾರ್ಯಕರ್ತರ ಮೂಲಕ ಶಿಕ್ಷಣ ಹಾಗೂ ಪ್ರತಿನಿತ್ಯದ ಮನೆ ಖರ್ಚು ಮತ್ತು ಅಗತ್ಯ ಸಾಮಗ್ರಿ ಪೂರೈಸಿದ್ದಾರೆ ಪ್ರಭು ಚವ್ಹಾಣ. ನಾಗರ ಪಂಚಮಿ, ದಸರಾ ಮತ್ತು ದೀಪಾವಳಿ ಹಬ್ಬದಲ್ಲಿ ಮಕ್ಕಳನ್ನು ತಮ್ಮ ಮನೆಗೆ ಕರೆತಂದು ಅಥವಾ ಅವರು ಇರುವ ಸ್ಥಳಕ್ಕೆ ಹಬ್ಬದ ಬಟ್ಟೆ ಮತ್ತು ಸಿಹಿ ಕಳುಹಿಸಿ ಕೊಟ್ಟಿದ್ದಾರೆ.

ಅನ್ಯ ಭಾಷಿಕರು ಹೆಚ್ಚಾಗಿ ವಾಸವಾಗಿರುವ ಗಡಿ ತಾಲೂಕಿನಲ್ಲಿ ಸಚಿವ ಪ್ರಭು ಚವ್ಹಾಣ ಕನ್ನಡದ ಕಲರವ ಮೂಡಿಸುವುದರ ಜತೆಗೆ ತಾವೂ ಕನ್ನಡ ಕಲಿತು ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿರುವುದು ವಿಶೇಷ.

ಕನ್ನಡಕ್ಕೆ ಬೆಂಬಲ: ತಾಲೂಕಿನಲ್ಲಿ ಮರಾಠಿ, ಉರ್ದು ಮತ್ತು ತೆಲುಗು ಭಾಷಿಕರು ಹೆಚ್ಚಾಗಿದ್ದಾರೆ. ಈ ಭಾಗದಲ್ಲಿ ಹಂತ ಹಂತವಾಗಿ ಕನ್ನಡ ಭಾಷೆಗೆ ಜೀವ ಬರದೊಡಗಿದೆ. ಆದರೂ ಇಂದಿಗೂ ವ್ಯಾಪಾರ ಮತ್ತು ವ್ಯವಹಾರವೆಲ್ಲ ಮೋಡಿ ಮತ್ತು ಮರಾಠಿ ಭಾಷೆಗಳಲ್ಲಿಯೇ ನಡೆಯುತ್ತದೆ. ಮರಾಠಿ ಹಾಗೂ ಉರ್ದು ಭಾಷಿಕರು ಹೆಚ್ಚಾಗಿರುವ ಗಡಿ ತಾಲೂಕಿನಲ್ಲಿ ನಡೆಯುವ ಪ್ರತಿಯೊಂದು ಕನ್ನಡ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಂತು ಕನ್ನಡ ಭಾಷೆ ಬೆಳವಣಿಗೆಗೆ ಸದಾ ಶ್ರಮಿಸುತ್ತಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಂದು ಕನ್ನಡದ ವಿವಿಧ ಸಾಹಿತಿಗಳ ಐದು ಸಾವಿರ ಪುಸ್ತಕಗಳನ್ನು ಮನೆ ಮನೆಗೆ ತೆರಳಿ ಹಂಚಿದ್ದಾರೆ. ಮರಾಠಿ ಭಾಷಿಕರ ಮಧ್ಯೆ ಬೆಳೆದು ಕನ್ನಡ ಮಾತಾಡಲು ಬಾರದೆ ಇರುವುದರಿಂದ ಹಲವು ಸಮಸ್ಯೆ ಅನುಭವಿಸಿ ಕನ್ನಡ ಭಾಷೆ ಕಲಿಯುವುದನ್ನೇ ಸವಾಲಾಗಿ ತೆಗೆದುಕೊಂಡ ಚವ್ಹಾಣ, ದಿನಗಳು ಕಳೆದಂತೆ ಕನ್ನಡ ಭಾಷೆ ಕಲಿತಿದ್ದಾರೆ.

ಹಿಂದಿನ ಶಾಸಕರಿಗಿಂತ ಮಾದರಿ ಕಾರ್ಯ: ಪ್ರಭು ಚವ್ಹಾಣ ತಮಗಿಂತ ಮೊದಲು ಅಧಿಕಾರ ನಡೆಸಿದ ಶಾಸಕರಿಗಿಂತಲೂ ಮಾದರಿ ಎನ್ನುವಂತೆ ಪ್ರತಿ ವರ್ಷ ಗ್ರಾಮ ಸಂಚಾರ ಎನ್ನುವ ಕಾರ್ಯಕ್ರಮದ ಮೂಲಕ ತಾಲೂಕಿನ ಪ್ರತಿಯೊಂದು ಗ್ರಾಮಕ್ಕು ತೆರಳಿ ಜನರ ಸಮಸ್ಯೆ ಆಲಿಸಿ ಬಗೆಹರಿಸುವ ಕೆಲಸ ಮಾಡಿದ್ದಾರೆ. ಹೀಗಾಗಿ ಸರ್ಕಾರಿ ಕಚೇರಿ ಕೆಲಸಕ್ಕೆ ತಾಲೂಕು ಕೇಂದ್ರ ಸ್ಥಾನಕ್ಕೆ ಬರುವ ಜನರ ಸಂಖ್ಯೆ ಕಡಿಮೆಯಾಗಿದೆ.

Advertisement

ಪ್ರಸಾದಕ್ಕೆ ಸಹಕಾರ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ನಡೆಯುವ ಪ್ರವಚನ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಕ್ಕೆ ದೇವರ ಮಂದಿರದಲ್ಲಿ ನಡೆಯುವ ಪ್ರಸಾದಕ್ಕೆ ಅಗತ್ಯ ಸಹಕಾರ ನೀಡುವ ಮೂಲಕ ತಾಲೂಕಿನ ಜನರಿಗೆ ಅತಿ ವೇಗವಾಗಿ ಪರಿಚಯವಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next