Advertisement

ನೀರಾವರಿ ಕಚೇರಿ ಸ್ಥಳಾಂತರವಾಗಲಿ

12:23 PM Sep 16, 2019 | Naveen |

ರವೀಂದ್ರ ಮುಕ್ತೇದಾರ
ಔರಾದ:
ಔರಾದ ಪಟ್ಟಣ ತಾಲೂಕು ಕೇಂದ್ರವಾಗಿ ದಶಕಗಳು ಕಳೆದರೂ ತಾಲೂಕು ಕೇಂದ್ರದಲ್ಲಿ ಸಣ್ಣ ನೀರಾವರಿ ಇಲಾಖೆಯ ಕಚೇರಿ ಇಲ್ಲದೇ ತಾಲೂಕಿನ ಜನರು ಇಲಾಖೆಯ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.

Advertisement

ಸರ್ಕಾರ ಗ್ರಾಮೀಣ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಹೆಚ್ಚಿಸುವ ಉದ್ದೇಶದಿಂದ ತಾಲೂಕಿನಲ್ಲಿ 33 ಕೆರೆಗಳನ್ನು ನಿರ್ಮಾಣ ಮಾಡಿದೆ. ಅವುಗಳ ನಿರ್ವಹಣೆ ಜವಾಬ್ದಾರಿ ಹೊಂದಿರುವ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಬೀದರ ಜಿಲ್ಲಾ ಕೇಂದ್ರದಲ್ಲಿ ಉಳಿದುಕೊಂಡಿದ್ದಾರೆ. ಇದರಿಂದ ತಾಲೂಕಿನ ಕೆರೆಗಳ ನಿರ್ವಹಣೆ ಕೊರತೆ ಉಂಟಾಗಿದ್ದು, ಕೆರೆಯ ನೀರು ಕಾಲುವೆ ಮೂಲಕ ರೈತರ ಹೊಲಗಳಿಗೆ ಹೋಗದೇ ಉಳಿದುಕೊಳ್ಳುತ್ತಿದೆ.

ಗಡಿ ತಾಲೂಕಿನ ರೈತರು ಸಂಪೂರ್ಣವಾಗಿ ಮಳೆಯ ಮೇಲೆ ಅವಲಂಬನೆಯಾಗಿರುವುದರಿಂದ ಸರ್ಕಾರ ತಾಲೂಕಿನ ಬೆಳಕುನಿ, ತೇಗಂಪೂರ, ಕೊರೆಕಲ್, ಕಮಲನಗರ, ಹಕ್ಯಾಳ, ರಂಡ್ಯಾಳ, ಎಕಂಬಾ, ಬಾವಲಗಾಂವ, ಅಕನಾಪೂರ, ಬಾವಲಗಾಂವ ಸೇರಿದಂತೆ ತಾಲೂಕಿನ 33 ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ನಿರ್ಮಾಣ ಮಾಡಿದೆ. ಅವುಗಳ ನಿರ್ವಹಣೆ ಕೊರತೆಯಿಂದ ರೈತರ ಹೊಲಕ್ಕೆ ಕಾಲುವೆಯ ಮೂಲಕ ನೀರು ಬರುತ್ತಿಲ್ಲ. ಕಾಲುವೆಗಳಲ್ಲಿ ಹುಲ್ಲು ಬೆಳೆದು, ಕೆಲವೆಡೆ ಕಾಲುವೆಗಳು ಒಡೆದು ಹಾಳಾಗಿವೆ. ಇದರಿಂದ ರೈತರು ಕಚೇರಿಗೆ ಅಲೆಯುತ್ತಿದ್ದಾರೆ.

ತಾಲೂಕಿನಲ್ಲಿ ಇಲಾಖೆಯಿಂದ ನಿರ್ಮಾಣ ಮಾಡಿದ ಕೆರೆಗಳ ಪೈಕಿ ಒಂದು ಕೆರೆಯ ಕಾಲುವೆಯಿಂದ ರೈತರ ಹೊಲಕ್ಕೆ ನೀರು ಬರುತ್ತಿಲ್ಲ ಎಂಬುದನ್ನು ತಿಳಿಸಲು ಸಹ ಜಿಲ್ಲಾ ಕೇಂದ್ರಕ್ಕೆ ಹೋಗಬೇಕು. ಅಲ್ಲದೇ ತಮ್ಮ ನಿತ್ಯದ ಇನ್ನಿತರ ಕೆಲಸಗಳನ್ನು ಬಿಟ್ಟು ಹೋದರೂ ಕೂಡ ಸಕಾಲಕ್ಕೆ ಕೆಲಸಗಳಾಗದೇ ರೈತರು ಬರಿ ಕೈಯಲ್ಲಿ ವಾಪಸ್‌ ಬರುವಂತಾಗಿದೆ.

ಸಣ್ಣ ನೀರಾವರಿ ಇಲಾಖೆಯ ಕಚೇರಿ 1995ರ ತನಕ ಔರಾದ ತಾಲೂಕು ಕೇಂದ್ರದಲ್ಲಿಯೇ ಇತ್ತು. ಕೆಲಸ ಕಡಿಮೆಯಾಗಿದೆ ಎನ್ನುವ ಉದ್ದೇಶದಿಂದ ಕಚೇರಿಯನ್ನು ಬೀದರ ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ ಎನ್ನುವುದು ಇಲಾಖೆಯ ಹಿರಿಯ ಅಧಿಕಾರಿಗಳ ಮಾತು. ಹಿಗಾಗಿಯೇ ಸಣ್ಣ ನೀರಾವರಿ ಇಲಾಖೆಯ ಕಟ್ಟಡ ಹಾಗೂ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳ 22 ವಸತಿ ನಿಲಯಗಳು ಇಂದಿಗೂ ಪಟ್ಟಣದಲ್ಲಿಯೇ ಇವೆ. ಇಲಾಖೆಯ ವಸತಿ ನಿಲಯದಲ್ಲಿ ಇತರ ಇಲಾಖೆಯ ಸಿಬ್ಬಂದಿ ವಾಸವಾಗಿದ್ದಾರೆ.

Advertisement

ಔರಾದ ಮತ್ತು ಸಂತಪೂರ ತಾಲೂಕು ಹೋರಾಟ ಸಮಿತಿ ಸದಸ್ಯರು ಹಾಗೂ ಈ ಭಾಗದ ಜನಪ್ರತಿನಿಧಿಗಳು ಹಾಗೂ ಸಚಿವರು ಸೇರಿ ಜಿಲ್ಲಾ ಕೇಂದ್ರದಲ್ಲಿರುವ ಸಣ್ಣ ನೀರಾವರಿ ಇಲಾಖೆಯ ಕಚೇರಿಯನ್ನು ತಾಲೂಕು ಕೇಂದ್ರಕ್ಕೆ ಸ್ಥಳಾಂತರ ಮಾಡಿ ರೈತರಿಗೆ ಅನುಕೂಲ ಮಾಡಬೇಕೆಂಬುದು ರೈತರ ಮಾತು.

ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಸಣ್ಣ ನಿರಾವರಿ ಇಲಾಖೆ ಕಚೇರಿಯನ್ನು ಔರಾದ ತಾಲೂಕಿಗೆ ಸ್ಥಳಾಂತರ ಮಾಡುವಂತೆ ಎರಡು ದಿನಗಳಲ್ಲಿ ಆದೇಶ ಮಾಡುತ್ತೇನೆ. ಇದರಿಂದ ನಮ್ಮ ತಾಲೂಕಿನ ಜನರಿಗೆ ಇಲಾಖೆಯ ಸೌಕರ್ಯಗಳು ಸಿಗುವುದರ ಜೊತೆಗೆ ಕೆರೆ ನಿರ್ವಹಣೆಯೂ ಸಕಾಲಕ್ಕೆ ಆಗುತ್ತದೆ.
ಪ್ರಭು ಚವ್ಹಾಣ,
 ಪಶುಸಂಗೋಪನೆ ಸಚಿವ

ತಾಲೂಕು ಕೇಂದ್ರದಲ್ಲಿ ಈ ಹಿಂದೆ ಇದ್ದ ಕಚೇರಿಯನ್ನು ತಾಲೂಕಿಗೆ ತರುವುದರ ಜೊತೆಗೆ ನೀರಾವರಿ ಇಲಾಖೆಗೆ ಹೆಚ್ಚು ಒತ್ತು ನೀಡಲು ಸಚಿವರು ಹಾಗೂ ಸರ್ಕಾರ ಮುಂದಾಗಬೇಕು. ಆಗ ಗಡಿ ತಾಲೂಕಿನ ಜನರು ನೀರಾವರಿ ಬೆಳೆಗಳ ಮೊರೆ ಹೋಗಿ ಆರ್ಥಿಕವಾಗಿ ಸದೃಡವಾಗುತ್ತಾರೆ.
ಗೋವಿಂದ ಇಂಗಳೆ,
 ಪ್ರಗತಿಪರ ರೈತ

Advertisement

Udayavani is now on Telegram. Click here to join our channel and stay updated with the latest news.

Next