Advertisement

ಅಂತಾರಾಜ್ಯ ಸಂಪರ್ಕ ರಸ್ತೆಗೆ ದುಸ್ಥಿತಿ

12:01 PM Sep 11, 2019 | Naveen |

ರವೀಂದ್ರ ಮುಕ್ತೇದಾರ
ಔರಾದ:
ದಶಕಗಳು ಕಳೆದರೂ ರಸ್ತೆ ಕಾಮಗಾರಿ ಮಾಡದಿರುವುದರಿಂದ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯದ ಗಡಿ ಗ್ರಾಮಸ್ಥರು ಸಂಚಾರಕ್ಕೆ ಸಮಸ್ಯೆ ಎದುರಿಸುವಂತಾಗಿದೆ. ಇದು ಕರ್ನಾಟ ಮತ್ತು ತೆಲಂಗಾಣ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಐದು ಗ್ರಾಮಸ್ತರ ದಶಕದ ಕಥೆಯಾಗಿದೆ.

Advertisement

ಹಾಳಾದ ರಸ್ತೆ ಸುಧಾರಣೆ ಮಾಡುವಂತೆ ಸರ್ಕಾರಕ್ಕೆ ಹಾಗೂ ಸಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಈ ಭಾಗದ ಜನರು ರಸ್ತೆಗಳಿಲ್ಲದೇ ಸಂಚಾರಕ್ಕೆ ಸಮಸ್ಯೆ ಅನುಭವಿಸುತ್ತಿದ್ದಾರೆ.

ಗಡಿ ಗ್ರಾಮಸ್ಥರು ನೆರೆಯ ತೆಲಂಗಾಣಕ್ಕೆ ಹಾಗೂ ತೆಲಂಗಾಣ ರಾಜ್ಯದ ಜನರು ಕರ್ನಾಟಕ ಪ್ರವೇಶ ಮಾಡಲು ಇರುವ ರಸ್ತೆ ಸಂರ್ಪೂಣ ಹಾಳಾಗಿದೆ. ಇದರಿಂದ ಜನರು ನಿತ್ಯ ಭಯದ ವಾತಾವರಣದ ಮಧ್ಯದಲ್ಲಿ ಸಂಚಾರ ಮಾಡುವ ಸ್ಥಿತಿ ಇದೆ. ರಸ್ತೆ ಸಂಪೂರ್ಣ ಕೆಟ್ಟು ಹೋಗಿರುವುದರಿಂದ ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ತುಂಬಿಕೊಂಡು ಸಂಚಾರ ಸಂಚಕಾರವನ್ನುಂಟು ಮಾಡುತ್ತಿದೆ.

ತೆಲಂಗಾಣ ರಾಜ್ಯದಲ್ಲಿನ ಕಾರೆಮುಂಗಿ, ಗಡಿ ಗೌಂಡಗಾಂವ, ಸಿಖರಖಾನೆ, ಜೈನಾಪೂರ ಮತ್ತು ಎಸಕಿ ಐದು ಗ್ರಾಮದ ವಿದ್ಯಾರ್ಥಿಗಳು ಪ್ರತಿನಿತ್ಯ ಔರಾದ ತಾಲೂಕಿನ ಕಂದಗೂಳ ಗ್ರಾಮದಲ್ಲಿ ಹಾಗೂ ಜಿಲ್ಲಾ ಕೇಂದ್ರವಾದ ಬೀದರನಲ್ಲಿ ಶಾಲಾ-ಕಾಲೇಜುಗಳಿಗೆ ಬರುತ್ತಾರೆ. ರಸ್ತೆ ಹಾಳಾಗಿರುವ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಸಾರಿಗೆ ಸಂಸ್ಥೆಯ ಬಸ್‌ಗಳು ಬರುವುದಿಲ್ಲ. ಖಾಸಗಿ ವಾಹನಗಳ ಮೇಲೆ ಸಂಚಾರ ಮಾಡುವ ಅನಿವಾರ್ಯವಾಗಿದೆ.

ವಿದ್ಯಾರ್ಥಿಗಳಿಗೆ ಮಾತ್ರವಲ್ಲ. ರೈತರು ಬೆಳೆಗಳನ್ನು ಜಿಲ್ಲಾ ಕೇಂದ್ರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಾಗಿಸಲು ಹರಸಾಹಸ ಪಡುವಂತಾಗಿದೆ. ಅದಲ್ಲದೆ ಗರ್ಭಿಣಿಯರು, ಅನಾರೋಗ್ಯದಿಂದ ಬಳಲುವ ಜನರು ಆಸ್ಪತ್ರೆಗೆ ಹೋಗಲು ಉತ್ತಮ ರಸ್ತೆಯಿಲ್ಲದೇ ಪರದಾಡುವಂತಾಗಿದೆ. ಸರಿಯಾದ ರಸ್ತೆಗಳಿಲ್ಲದಿರುವುದರಿಂದ ರಸ್ತೆ ಮಧ್ಯದಲ್ಲಿ ಇಬ್ಬರು ಪ್ರಾಣವನ್ನು ಕಳೆದುಕೊಂಡ ಉದಾರಣೆಗಳು ಕೂಡ ಇವೆ.

Advertisement

ಸರ್ಕಾರ ಪ್ರತಿವರ್ಷ ಗ್ರಾಮೀಣ ಭಾಗದ ಅಭಿವೃದ್ಧಿಗಾಗಿ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ತಾಲೂಕಿನ ರಸ್ತೆ ಅಭಿವೃದ್ಧಿಗೆ ಬಂದ ಅನುದಾನ ಎಲ್ಲಿಗೆ ಹೋಗುತ್ತಿದೆ ಎನ್ನುವುದು ಯಕ್ಷ ಪ್ರಶ್ನೆಯಾಗಿ ಈ ಭಾಗದ ಜನರನ್ನು ಕಾಡುತ್ತಿದೆ.

ಕಂದಗೂಳ ಗ್ರಾಮದಿಂದ ಗಡಿ ಗೌಂಡಗಾಂವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಹತ್ತು ವರ್ಷಗಳ ಹಿಂದೆ ಅರ್ಧ ಕಿ.ಮೀ. ರಸ್ತೆ ಮಾಡಿದ ಅಧಿಕಾರಿಗಳು ಇನ್ನೂ ಅರ್ಥ ಕಿ.ಮೀ. ರಸ್ತೆ ಮಾಡದೆ ಹಾಗೇ ಬಿಟ್ಟಿದ್ದಾರೆ. ಅಲ್ಲದೇ ಹಾಗೆಯೇ ಬಿಟ್ಟ ರಸ್ತೆ ಸಂಪೂರ್ಣ ಹಾಳಾಗಿದೆ. ಹತ್ತು ವರ್ಷಗಳಿಂದ ಈ ಭಾಗದ ರಸ್ತೆ ಅಭಿವೃದ್ಧಿಯಾಗದಿರುವುದರಿಂದ ಬೈಕ್‌ ಸವಾರರು ಹಾಗೂ ಪ್ರಯಾಣಿಕರು ಯಾತನೆ ಅನುಭವಿಸುವಂತಾಗಿದೆ.

ಕನ್ನಡ ವ್ಯಾಮೋಹ: ಕರ್ನಾಟಕದಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಕನ್ನಡ ಕಲಿಯಿರಿ ಎಂದು ಸರ್ಕಾರ ಜಾಗೃತಿ ಕಾರ್ಯಕ್ರಮಗಳ ಮೂಲಕ ಜನರ ಮನ ಪರಿವರ್ತನೆ ಮಾಡಲು ಮುಂದಾಗಿದೆ. ಆದರೆ ನೇರೆ ತೆಲಂಗಾಣ ರಾಜ್ಯದ ಐದು ಗ್ರಾಮದ ಜನರು ಔರಾದ ತಾಲೂಕಿನ ಕಂದಗೂಳ, ಬೀದರ ತಾಲೂಕಿನ ಚಾಂಬೋಳ ಮತ್ತು ಜಿಲ್ಲಾ ಕೇಂದ್ರವಾದ ಬೀದರನಲ್ಲಿ ಪದವಿ ಸೇರಿದಂತೆ ಇನ್ನಿತರ ಉನ್ನತ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಅದರಂತೆ ಇಲ್ಲಿನ ಯುವಕರು ಹಾಗೂ ಕೂಲಿ ಕಾರ್ಮಿಕರು ಕೂಡ ತಮ್ಮ ಪ್ರತಿನಿತ್ಯದ ಉಪಜೀವನಕ್ಕಾಗಿ ಬೀದರ ಮೇಲೆ ಅವಲಂಬಿತರಾಗಿ ತಮ್ಮ ಕುಟುಂಬ ಸದಸ್ಯರನ್ನು ನೋಡಿಕೊಳ್ಳುತ್ತಿದ್ದಾರೆ.

ದಶಕಗಳಿಂದ ಈ ಭಾಗದ ರಸ್ತೆ ಸುಧಾರಣೆ ನಡೆದಿಲ್ಲ. ಕಂದಗೂಳ ಗ್ರಾಮದಿಂದ ಗಡಿ ಗೌಂಡಗಾಂವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅರ್ಧ ಕಿ.ಮೀ. ಮಾಡಿ ಇನ್ನುಳಿದ ರಸ್ತೆಯನ್ನು ಅಧಿಕಾರಿಗಳು ಇಂದಿಗೂ ಮಾಡಿಲ್ಲ. ಕೂಡಲೆ ಉತ್ತಮ ರಸ್ತೆ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಡಲು ಮುಂದಾಗಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುತ್ತದೆ.
ವಿನೋದಕುಮಾರ ಪಾಟೀಲ,
 ಗೌಡಗಾಂವ ನಿವಾಸಿ

ಕಂದಗೂಳ ಗಡಿಗೌಂಡಗಾವ ರಸ್ತೆಯ ಅರ್ಧ ಕಿ.ಮೀ. ಕಾಮಗಾರಿ ಮಾಡದಿರುವುದರ ಬಗ್ಗೆ ಹಾಗೂ ರಸ್ತೆ ಸುಧಾರಣೆಯ ಬಗ್ಗೆ ಸಬಂಧ ಪಟ್ಟ ಜೆಇ ಗಮನಕ್ಕೆ ತಂದು, ಕೂಡಲೆ ನಿಂತಿಹೋದ ರಸ್ತೆ ಸುಧಾರಣೆ ಮಾಡಲು ಮತ್ತು ಗುಂಡಿಗಳು ಬಿದ್ದ ರಸ್ತೆಯಲ್ಲಿ ಬರಬು ಹಾಕುವಂತೆ ಆದೇಶ ಮಾಡುವೆ.
ಅಶೋಕ ಸಜ್ಜನಶೆಟ್ಟಿ,
 ಜಿಪಂ ಇಇ ಔರಾದ

Advertisement

Udayavani is now on Telegram. Click here to join our channel and stay updated with the latest news.

Next