Advertisement

ಹಾಗೆ ನಿಮ್ಮನ್ನು ಕರೆದಾಗ…

09:22 AM Dec 26, 2018 | |

ಈಗ ಎಲ್ಲರನ್ನೂ ಅವರ ಈಗ ಎಲ್ಲರನ್ನೂ ಅವರ ಹೆಸರಿನೊಂದಿಗೆ ಅಂಕಲ್‌- ಹೆಸರಿನೊಂದಿಗೆ ಅಂಕಲ್‌- ಆಂಟಿ ಎಂದು ಕರೆಯುವುದೇ ಆಂಟಿ ಎಂದು ಕರೆಯುವುದೇ ರೂಢಿ. ಕೆಲಸದ ಆಂಟಿ, ಪಕ್ಕದ ರೂಢಿ. ಕೆಲಸದ ಆಂಟಿ, ಪಕ್ಕದ ಮನೆಯ ಆಂಟಿ, ಟ್ಯೂಷನ್‌ ಆಂಟಿ, ವಾಚಮನ್‌ ಅಂಕಲ್‌… ಹೀಗೆ ಇಡೀ ಜಗತ್ತೇ ಆಂಟಿ- ಹೀಗೆ ಇಡೀ ಜಗತ್ತೇ ಆಂಟಿ- ಅಂಕಲ್‌ಗ‌ಳಿಂದ ತುಂಬಿಕೊಂಡಿದೆ…

Advertisement

“ನಾಳೆಯಿಂದ ವಾಕಿಂಗ್‌ ಹೋಗೋಣ, ಬರ್ತೀಯಾ?’ ಎಂದು ಗೆಳತಿ ಸರಿತಾ ಫೋನಾಯಿಸಿದಳು. ಇಷ್ಟು ದಿನ ನಾನೇ, ಹೋಗೋಣ ಬಾರೆ ಎಂದು ಕರೆದರೂ ಬಾರದವಳು ಈಗೇನು ಅವಳಾಗಿಯೇ ಕರೆಯುತ್ತಿದ್ದಾಳೆ ಎಂದು ಆಶ್ಚರ್ಯವಾಯ್ತು. ಈ ನಿರ್ಧಾರಕ್ಕೆ ಕಾರಣ ಕೇಳಿದರೆ, ನಾಳೆ ವಾಕ್‌ ಮಾಡುತ್ತಾ ಹೇಳುತ್ತೇನೆ ಎಂದಳು.

ಬೆಳಗ್ಗೆ ಏಳು ಗಂಟೆಯಾದರೂ ಏಳದ ಗೆಳತಿ, ಮರುದಿನ ಬೆಳಗ್ಗೆ ಐದು ಗಂಟೆಗೇ ಫೋನಾಯಿಸಿ, “ರೆಡಿ ಏನೇ?’ ಎಂದು ಕೇಳಿದಳು. ಹೌದು ಎಂದ ಐದು ನಿಮಿಷಕ್ಕೇ ಸರಿತಾ ನಮ್ಮ ಮನೆಯ ಮುಂದೆ ಹಾಜರು. ಇಬ್ಬರೂ ವಾಕ್‌ ಮಾಡುತ್ತಾ ವಿಷಯವೇನೆಂದು ಕೇಳಲು, “ನಿನ್ನೆ ನಮ್ಮ ಪಕ್ಕದ ಮನೆಯವನು ಆಂಟಿ ಎಂದು ಕರೆದ ಕಣೇ’ ಎಂದಳು ಬೇಸರದಲ್ಲಿ. ಅದರಲ್ಲಿಏನಿದೆ ವಿಶೇಷ ಅಂತ ನನಗೆ ಅಚ್ಚರಿಯಾಯಿತು.  ಅದಕ್ಕವಳು, “ಅವನು ನನಗಿಂತ ವಯಸ್ಸಿನಲ್ಲಿ ಒಂದೆರಡು ವರ್ಷ ದೊಡ್ಡವನು ಕಣೇ. ನನಗಿಂತ ದೊಡ್ಡವನೇ ಆಂಟಿ ಎಂದು ಕರೆಯುತ್ತಿದ್ದಾನೆ ಅಂದರೆ ನಾನು ಹಾಗೇ ಕಾಣಲು ಶುರುವಾಗಿದ್ದೇನೆ ಅಂತಾಯ್ತು. ಇನ್ನು ವಾಕ್‌ ಮಾಡಲೇಬೇಕು ಎಂದು ನಿರ್ಧರಿಸಿದ್ದೇನೆ’ ಎಂದಳು.ಹಿಂದೆಲ್ಲಾ ಅತ್ತೆ, ಮಾವ, ಚಿಕ್ಕಪ್ಪ, ಚಿಕ್ಕಮ್ಮ ಎಂದು ಬಂಧುಬಾಂಧವರನ್ನು ಅವರದೇ ಸಂಬಂಧದಿಂದ ಕರೆಯುತ್ತಿದ್ದವರು, ಈಗ ಇಂಗ್ಲಿಷ್‌ ವ್ಯಾಮೋಹಕ್ಕೆ ಬಿದ್ದು, ಎಲ್ಲರನ್ನೂ ಅಂಕಲ್‌, ಆಂಟಿ ಎಂದು ಕರೆದು ಬಾಂಧವ್ಯವನ್ನು ಸಣ್ಣದಾಗಿಸಿಕೊಂಡಿದ್ದೇವೆ. ಮಾಮ- ಮಾಮಿ (ಅತ್ತೆ) ಎನಿಸಿಕೊಳ್ಳುತ್ತಿದ್ದ, ಅಪ್ಪ- ಅಮ್ಮನ
ಸ್ನೇಹಿತರೂ ಈಗ ಅಂಕಲ್‌- ಆಂಟಿಯಾಗಿಬಿಟ್ಟಿದ್ದಾರೆ.

ಅಮ್ಮ ಮಗಳು ಒಟ್ಟಿಗೇ ಹಡೆಯುವ ಕಾಲವೊಂದಿತ್ತು. ಅಮ್ಮನ ತಮ್ಮ, ವಯಸ್ಸಿನಲ್ಲಿ ಚಿಕ್ಕವನಾದರೂ ಆತ ಮಾವನೇ. ಮಾವ ಎಂದು ಕರೆದರೆ, ಅವನೂ ಅಳಿಯ- ಸೊಸೆಯೆಂಬ ಮಮತೆಯಲ್ಲೇ ಮಾತಾಡಿಸುತ್ತಿದ್ದ. ಈಗ “ಅಂಕಲ್‌’ ಎಂದು ಕರೆದರೆ ಅವನಿಗೆ ಮುಜುಗರವಾಗದೇ ಇರುತ್ತದೆಯೇ? ನನ್ನ ದೊಡ್ಡಮ್ಮನ ಮೊಮ್ಮಗಳು ನನಗಿಂತ ಒಂದು ದಿನ ದೊಡ್ಡವಳು. ಅವಳಿಗೆ ದೊಡ್ಡ ಕನ್‌ಫ್ಯೂಷನ್‌. ನನ್ನನ್ನು ಚಿಕ್ಕಮ್ಮ ಅನ್ನಬೇಕೋ, ಹೆಸರು ಹಿಡಿದು ಕರೆಯಬೇಕೋ ಎಂದು. ಒಂದೇ ತರಗತಿಯಲ್ಲಿ ಓದಿದ ನಾವು, ಅವಳೇನಾದರೂ ನನ್ನನ್ನು ಆಂಟಿ ಎಂದು ಕರೆದರೆ ಬಾರಿಸದೇ ಇರುತ್ತೇನೆಯೇ?

ಈಗ ಎಲ್ಲರನ್ನೂ ಅವರ ಹೆಸರಿನೊಂದಿಗೆ ಅಂಕಲ್‌- ಆಂಟಿ ಎಂದು ಸೇರಿಸಿ ಕರೆಯುವುದೇ ರೂಢಿ. ಕೆಲಸದ ಆಂಟಿ, ಪಕ್ಕದ ಮನೆಯ ಆಂಟಿ, ಟ್ಯೂಷನ್‌ ಆಂಟಿ, ವಾಚಮನ್‌ ಅಂಕಲ್‌… ಹೀಗೆ ಇಡೀ ಜಗತ್ತೇ ಆಂಟಿ- ಅಂಕಲ್‌ಗ‌ಳಿಂದ ತುಂಬಿ ಕೊಂಡಿದೆ. ಅಂಗಡಿಗೆ ಹೋದರೆ, ಅವರು ಕೂಡ “ಏನು ಬೇಕು ಆಂಟಿ?’ ಅಂತಲೇ ಶುರು ಮಾಡುತ್ತಾರೆ. ಅವರಿಗಿಂತ ಸಣ್ಣವರನ್ನೂ ಮುಜುಗರವಿಲ್ಲದೆ, “ಅಂಕಲ್‌- ಆಂಟಿ’ ಎಂದು ಕರೆಯುತ್ತಾರೆ ಎಂಬುದು ಸೋಜಿಗದ ವಿಷಯ. ಗೆಳತಿಯೊಬ್ಬಳು ಕೆಲಸಕ್ಕೆ ಸೇರಲು ಬೆಂಗಳೂರಿಗೆ ಬಂದು, ಲೋಕಲ್‌ ಬಸ್‌ ಹತ್ತುತ್ತಿದ್ದಂತೆ ಅವಳದೇ ವಯಸ್ಸಿನ ಕಂಡಕ್ಟರ್‌ಗೆ “ಅಂಕಲ್‌ ಒಂದು ಇಕೋಸ್ಪೇಸ್‌ ಟಿಕೆಟ್‌ ಕೊಡಿ’ ಎಂದಾಗ ಅವನ ಮುಖ ಸಣ್ಣದಾಗಿದ್ದನ್ನು ಆಗಾಗ ನೆನಪಿಸಿಕೊಂಡು ನಗುತ್ತಿರುತ್ತಾಳೆ.

Advertisement

 ಮದುವೆಯಾದ್ರೆ ವಯಸ್ಸಾಯ್ತು!
ಮದುವೆ ಆದವರನ್ನೆಲ್ಲ ಅಂಕಲ್‌-ಆಂಟಿ ಎಂದು ರಾಜಾರೋಷವಾಗಿ ಕರೆಯಬಹುದು ಅಂತ ಬಹುತೇಕ ಜನರು ಅಂದುಕೊಂಡಿದ್ದಾರೆ. ಮದುವೆಆಗಿರುವ, ವಯಸ್ಸಿನಲ್ಲಿ ತನಗಿಂತ ಸಣ್ಣವರನ್ನೂ ಅಂಕಲ್‌-ಆಂಟಿ ಎಂದು ಕರೆಯುವುದು ಬಹುಜನರ ಹುಟ್ಟು ಗುಣ. ಮದುವೆಯಾದರೆ ಅಂಕಲ ಆಂಟಿ ಅನ್ನಿಸಿಕೊಳ್ಳುತ್ತೇವೆ, ಜನರು ವಯಸ್ಸಾಯ್ತು ಅಂದುಕೊಳ್ಳುತ್ತಾರೆ ಅಂತಲೇ ಕೆಲವರು ಮದುವೆಯನ್ನು ಮುಂದೂಡುತ್ತಾರೆ.

ಸಿಟ್ಟಿಗೆದ್ದ ಆಂಟಿ…
ಇತ್ತೀಚೆಗೆ ಮದುವೆಯಾಗಿ ಬಂದ ಪಕ್ಕದ ಮನೆಯವಳಿಗೆ, “ನೀರು ಕೊಡಿ ಆಂಟಿ’ ಎಂದು ರಸ್ತೆ ಕೆಲಸಕ್ಕೆ ಬಂದ ಹೆಂಗಸೊಬ್ಬಳು ಕೇಳಿದಾಗ, ಆಕೆ ಅಕ್ಷರಶಃ ಜಗಳಕ್ಕೇ ಇಳಿದುಬಿಟ್ಟಿದ್ದಳು. “ನನ್ನ ಹೆಸರು ಜ್ಯೋತಿ, ವಯಸ್ಸಿನಲ್ಲಿ ನಿನಗಿಂತ ಚಿಕ್ಕವಳೇ ಇದ್ದೀನಿ. ನಿಮ್ಮ ಕಣ್ಣಿಗೆ ಅಷ್ಟು ದೊಡ್ಡವಳಾಗಿ ಕಾಣುತ್ತಿದ್ದೀನಾ?’
ಎಂದು ರೇಗಿದ್ದಳು. ಹಾಲು ಮಾರುವ ಅಜ್ಜಿಯೊಬ್ಬರನ್ನು, “ಆಂಟಿ, ಎರಡು ಪ್ಯಾಕೆಟ್‌ ಹಾಲು ಕೊಡಿ’ ಎಂದು ವಯಸ್ಸಾದ ಗಂಡಸರೊಬ್ಬರು ಕೇಳಿದಾಗ, ಅವರು ಬಹಳ ಸಿಟ್ಟಿನಲ್ಲಿ ಹಾಲಿನ ಪ್ಯಾಕೆಟ್‌ ಅನ್ನು ಅವರೆದುರು ಕುಕ್ಕಿದ್ದನ್ನು ನಾನು ಕಣ್ಣಾರೆ ನೋಡಿದ್ದೇನೆ. ಮಲೆನಾಡಿನ ಕೆಲವು ಕಡೆ, ಅಜ್ಜಿ ಎಂಬ ಶಬ್ದವನ್ನೇ ಬಳಸುವುದಿಲ್ಲ. ಅಮ್ಮನನ್ನು ಆಯಿಯೆಂದು, ಅಜ್ಜಿಯನ್ನು ಅಮ್ಮನೆಂದು ಅಥವಾ ದೊಡ್ಡಮ್ಮನೆಂದು ಕರೆಯುವ ರೂಢಿ ಇದೆ. ಅವರನ್ನೇನಾದರೂ ಆಂಟಿಯೆಂದು ಕರೆದರೆ ಬಾಸುಂಡೆ ಬರುವಂತೆ ಬಾರಿಸಬಹುದು ಜೋಕೆ. 

 “ಆಂಟಿ’ಗೆ ಅಂಟಿಕೊಳ್ಳಬೇಡಿ…
ನಾವು ಇನ್ನಾದರೂ ಅಂಕಲ್‌- ಆಂಟಿ ಸಂಪ್ರದಾಯದಿಂದ ಹೊರಬರೋಣ. ಕೆಲವರನ್ನು ಅಕ್ಕ- ಅಣ್ಣ ಎಂದು ಕರೆಯಬಹುದು. ಇನ್ನು ಕೆಲವರಿಗೆ ಹೆಸರಿನ ಜೊತೆ ಅವರೇ, ಇವರೇ ಸೇರಿಸಿ ಬಹುವಚನದಲ್ಲಿ ಮಾತಾಡಬಹುದು. ವಯಸ್ಸಿಗಿಂತ ಕಿರಿಯರನ್ನು ಬಹುವಚನದಲ್ಲಿ ಮಾತಾಡಿಸುವ ಪದ್ಧತಿ ಬಂದಿರುವುದೂ ಅನುಕರಣೀಯ. ಆಂಟಿ
ಹೆಸರಿಗೆ ಅಂಟಿಕೊಳ್ಳುವ ಬದಲು ಅಕ್ಕ ಎಂದರೆ, ಅವರು ನಿಮ್ಮನ್ನು ಹತ್ತಿರದವರಂತೆ ಕಾಣುವುದರಲ್ಲಿ
ಸಂಶಯವಿಲ್ಲ. ಅಲ್ಲದೇ ವಯಸ್ಸಿಗೆ ಗೌರವ ಸೂಚಿಸಿದಂತೆಯೂ ಆಯ್ತು, ಅವರನ್ನು ಸಣ್ಣವರನ್ನಾಗಿಸಿದಂತೆಯೂ ಆಯ್ತು. ಅಕ್ಕ ಎಂದಾಗಲೂ ಅವರು ಬಯ್ದರೆ ನನ್ನನ್ನು ದೂರಬೇಡಿ! ಅಕ್ಕ ಎಂದಿದ್ದಕ್ಕೇ ಬೈದವರು, ಆಂಟಿ ಎಂದಾಗ ಎಷ್ಟು ಸಿಟ್ಟು ಮಾಡಿ ಕೊಳ್ಳುತ್ತಿದ್ದರೆಂದು ಊಹಿಸಿ!

ಆಂಟಿ… ಅದು ಗೌರವ ಎಂದು ಭಾವಿಸಿ…
ಯಾರಾದರೂ ನಿಮ್ಮನ್ನು ಆಂಟಿ -ಅಂಕಲ್‌ ಎಂದು ಕರೆದರೆ ಮುಜುಗರ ಪಡಬೇಕೆಂದಿಲ್ಲ. “ಆಂಟಿ ಅಲ್ಲ ಕಣೋ,
ಅಜ್ಜಿಯಂತ ಕರಿ’ ಎಂದು ಜೋಕ್‌ ಮಾಡಿ ಅಥವಾ ಏನು ಅಳಿಯ/ ಸೊಸೆ ಎಂದು ನೀವೂ ತಮಾಷೆಯಾಗಿ ವಿಚಾರಿಸಿ. ತುಂಬಾ ಹತ್ತಿರದವರಾದರೆ, ಹಾಗೆ ಕರೆಯಬೇಡಿ ಎಂದು ತಿಳಿಸಿ ಹೇಳಿ. ಅಷ್ಟಕ್ಕೂ ಬಗ್ಗದಿದ್ದರೆ ಮನಸ್ಸಿಗೆ ಹಚ್ಚಿಕೊಳ್ಳಲೇಬೇಡಿ! ನಿಮ್ಮ ವಯಸ್ಸು ಎಷ್ಟೆಂದು ನಿಮಗೆ ತಿಳಿದಿದೆಯಲ್ಲವೆ? ಗೌರವ ನೀಡುತ್ತಿದ್ದಾರೆ, ನಾನು ದೊಡ್ಡವಳಾಗಿದ್ದೇನೆಂದು ಸಂತೋಷ ಪಡಿ.

 ಸಾವಿತ್ರಿ ಶ್ಯಾನಭಾಗ್‌

Advertisement

Udayavani is now on Telegram. Click here to join our channel and stay updated with the latest news.

Next