Advertisement

ಆ. 15ಕ್ಕೆ ಡಿಸಿ ಕಚೇರಿ ಪಡೀಲ್‌ ಗೆ ಶಿಫ್ಟ್?‌ ಶೀಘ್ರ ಮುಗಿಸಲು ಗಡುವು…

04:17 PM Jul 28, 2024 | Team Udayavani |

ಪಡೀಲ್‌: ಸ್ವಾತಂತ್ರ್ಯೋತ್ಸವ ದಿನವಾದ ಆ. 15ರಂದು ಧ್ವಜಾರೋಹಣ ನೆರವೇರಿಸುವ ಮೂಲಕ ಪಡೀಲ್‌ನ ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣಕ್ಕೆ ದ.ಕ. ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಕಚೇರಿ ಮತ್ತು ಸಂಬಂಧಪಟ್ಟ ಆಪ್ತ ಶಾಖೆಗಳು ಸ್ಥಳಾಂತರಗೊಳ್ಳುವ ನಿಟ್ಟಿನಲ್ಲಿ ಮಹತ್ವದ ತಯಾರಿ ನಡೆಯುತ್ತಿದೆ.

Advertisement

ಪಡೀಲ್‌ ಜಂಕ್ಷನ್‌ ಬಳಿ ಕಳೆದ ಆರು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಾಮಗಾರಿ ಕಳೆದೊಂದು ವಾರದಿಂದ ಮತ್ತೆ ವೇಗ ಪಡೆದಿದೆ. ಸಂಕೀರ್ಣದ ಮೊದಲ ಮಹಡಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ, ಅಪರ ಜಿಲ್ಲಾಧಿಕಾರಿ ಕಚೇರಿ, ಕೋರ್ಟ್‌ ಹಾಲ್‌, ಸಂಬಂಧಪಟ್ಟ ಕಚೇರಿ, ಮೀಟಿಂಗ್‌ ಹಾಲ್‌ಗೆ ಒಳಾಂಗಣ ವಿನ್ಯಾಸ ಸಹಿತ ವಿವಿಧ
ಕಾಮಗಾರಿಗಳು ಭರದಿಂದ ಸಾಗಿದೆ.

2ನೇ ಹಂತಕ್ಕೆ ಸ್ಮಾರ್ಟ್‌ ಸಿಟಿ ನೆರವು

ಸಂಕೀರ್ಣದ 2ನೇ ಹಂತದ ಕಾಮಗಾರಿ ಪೂರ್ಣಗೊಳಿಸಲು ಅಂದಾಜಿನ ಪ್ರಕಾರ ಸುಮಾರು 32 ಕೋ.ರೂ.ಗಳ ಅಗತ್ಯ ವಿದೆ. ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆಯಾಗದೇ ಇರುವುದರಿಂದ ಕಾಮಗಾರಿಗೆ ಅಡ್ಡಿಯಾಗಿದೆ. ಇದೀಗ ಮಂಗಳೂರು ಸ್ಮಾರ್ಟ್‌ ಸಿಟಿ ಲಿ. ಸಹಕಾರ ದಿಂದ ಯೋಜನೆಯನ್ನು ಪೂರ್ಣ ಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಅದರಂತೆ ಸ್ಮಾರ್ಟ್‌ ಸಿಟಿ 20 ಕೋ.ರೂ. ಮೀಸಲಿರಿಸಲು ಉದ್ದೇಶಿಸಿದೆ.

ಇದರಲ್ಲಿ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಕಟ್ಟಡಕ್ಕೆ ಕಲ್ಪಿಸಲಾಗುತ್ತದೆ. ಮುಖ್ಯವಾಗಿ ಸುಸಜ್ಜಿತ ಆವರಣಗೋಡೆ,
ಯಾರ್ಡ್‌, ಫ್ಲೋರಿಂಗ್‌, ಡಿಸಿ ಕಚೇರಿಗೆ ಸಂಬಂಧಿಸಿದ ಪೀಠೊಪಕರಣಗಳು, ಸಭಾಂಗಣದ ವಿನ್ಯಾಸ, ಪೈಂಟಿಂಗ್‌, ಇಲೆಕ್ಟ್ರಿಕಲ್‌-ಕೇಬಲ್‌ ನೆಟ್‌ವರ್ಕ್‌ ಮೊದಲಾದ ಕೆಲಸಗಳು ನಡೆಯಲಿದೆ. ಇದಕ್ಕಾಗಿ ಪ್ರತ್ಯೇಕ ಟೆಂಡರ್‌ ಕರೆದು ಯೋಜನೆ ಮುಂದುವರಿಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

Advertisement

ತಕ್ಷಣ ನಡೆಯಬೇಕಿರುವ ಕಾಮಗಾರಿ
ಕಚೇರಿಗಳ ಒಳಾಂಗಣ ಕೆಲಸಗಳು, ಇಲೆಕ್ಟ್ರಿಕಲ್‌ ಕೆಲಸಗಳು, ಪ್ಲಂಬಿಂಗ್‌ ಕೆಲಸಗಳು, 150 ಆಸನ ಸಾಮರ್ಥ್ಯದ ಮೀಟಿಂಗ್‌ ಹಾಲ್‌ನ ಒಳಾಂಗಣ ವಿನ್ಯಾಸ, ಸೌಂಡ್‌ ಸಿಸ್ಟಮ್‌, ಸಂಕೀರ್ಣದ ಮುಂಭಾಗದಲ್ಲಿ ಧ್ವಜಸ್ಥಂಭ ನಿರ್ಮಾಣ, ಪ್ರವೇಶದ್ವಾರದಲ್ಲಿರುವ ಎರಡು ಪ್ರವೇಶ ಸ್ಥಳಗಳಿಗೆ ಇಂಟರ್‌ಲಾಕ್‌ ಅಳವಡಿಕೆ, ಮುಖ್ಯ ರಸ್ತೆಯಿಂದ ಮಣ್ಣಿನ ರಸ್ತೆ ನಿರ್ಮಿಸಿ ಸಂಪರ್ಕಕ್ಕೆ ವ್ಯವಸ್ಥೆ. ಇವಿಷ್ಟು ಕಾಮಗಾರಿ ಶೀಘ್ರ ಕೈಗೊಳ್ಳಬೇಕಿದೆ. ಮಳೆಯಾಗುತ್ತಿರುವುದರಿಂದ ಹೊರಭಾಗದ ಕಾಮಗಾರಿಗಳಿಗೆ ಅಡ್ಡಿಯಾಗಿದೆ.

ಅನುದಾನಗಳ ಹೊಂದಾಣಿಕೆ
ಸಂಕೀರ್ಣದಲ್ಲಿರುವ ವಿವಿಧ ಇಲಾಖೆಗಳ ಕಚೇರಿಗೆ ಸಂಬಂಧಿಸಿದ ಲೈಟಿಂಗ್‌ ಪಾಯಿಂಟ್‌, ಪ್ಲಂಬಿಂಗ್‌ ಕೆಲಸಗಳನ್ನು ಬಾಕಿ ಇರಿಸಿ, ಆ ಮೊತ್ತವನ್ನು ಜಿಲ್ಲಾಧಿಕಾರಿ ಚೇಂಬರ್‌ಗೆ ಸಂಬಂಧಿಸಿದ ಕಾಮಗಾರಿಗೆ ವಿನಿಯೋಗಿಸಿ ಅನುದಾನದ ಹೊಂದಾಣಿಕೆ ಮಾಡಲಾಗುತ್ತಿದೆ. ಆ ಉಳಿಕೆ ಕೆಲಸಗಳನ್ನು ಎರಡನೇ ಹಂತದ ಕಾಮಗಾರಿಯಲ್ಲಿ ಕೈಗೊಳ್ಳಲಾಗುತ್ತದೆ. ಮೊದಲನೇ ಹಂತದ ಉಳಿಕೆ ಮೊತ್ತದಲ್ಲಿ ಕಚೇರಿ ಸಿದ್ಧಪಡಿಸುವುದು ಆದ್ಯತೆಯಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಹಳೆಯ ಫರ್ನಿಚರ್‌ ಬಳಕೆ?
ಶೀಘ್ರದಲ್ಲೇ ಜಿಲ್ಲಾಧಿಕಾರಿ ಕಚೇರಿಯನ್ನು ಕಟ್ಟಡಕ್ಕೆ ಸ್ಥಳಾಂತರಿಸಲು ಜಿಲ್ಲಾಡಳಿತ ಉದ್ದೇಶಿಸಿರುವುದರಿಂದ ಸದ್ಯ ಕಚೇರಿಗೆ ಅಗತ್ಯವಿರುವ ಫರ್ನಿಚರ್‌ ಗಳನ್ನು ಈಗಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇರುವುದನ್ನೇ ಬಳಸಲು ಜಿಲ್ಲಾಡಳಿತ ಉದ್ದೇಶಿಸಿದೆ. ಅನುದಾನ ಲಭ್ಯವಿದ್ದಲ್ಲಿ ಎರಡನೇ ಹಂತ ದಲ್ಲಿ ಹೊಸ ಫನೀìಚರ್‌ ಗಳ ಖರೀದಿ ನಡೆಯಲಿದೆ. ತಳ ಅಂತಸ್ತಿನಲ್ಲಿ ಪಾರ್ಕಿಂಗ್‌ಗೆ ಸಾಕಷ್ಟು ಸ್ಥಳಾವಕಾಶ ಇರುವುದರಿದ ಪಾರ್ಕಿಂಗ್‌ಗೆ ಸಮಸ್ಯೆಯಾಗದು.

ಶೀಘ್ರ ಮುಗಿಸಲು ಗಡುವು
ಪಡೀಲ್‌ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಾಮಗಾರಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಕಾಮಗಾರಿಗೆ ವೇಗ ನೀಡುವ ನಿಟ್ಟಿನಲ್ಲಿ ಕೆಲವೊಂದು ನಿರ್ದೇಶನಗಳನ್ನು ನೀಡಲಾಗಿದ್ದು, ಶೀಘ್ರ ಮುಗಿಸಲು ಗಡುವನ್ನೂ ವಿಧಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು.
ಮುಲ್ಲೈ ಮುಗಿಲನ್‌, ಎಂ.ಪಿ., ದ.ಕ.ಜಿಲ್ಲಾಧಿಕಾರಿ

*ಭರತ್‌ ಶೆಟ್ಟಿಗಾರ್

Advertisement

Udayavani is now on Telegram. Click here to join our channel and stay updated with the latest news.

Next