Advertisement
ಆಲ್ಫೆಡ್ ಹಿಚ್‌ಕಾಕ್ ಪ್ರೇಕ್ಷಕರ ಸಿನಿಮೀಯ ಅನುಭವಕ್ಕೆ ಹೊಸಭಾಷ್ಯವನ್ನು ಬರೆದವರು. ರಹಸ್ಯ, ಕುತೂಹಲ ಹಾಗೂ ರೋಚಕ ಕಥನಗಳನ್ನು ಸಿನೆಮಾಕ್ಕೆ ಇಳಿಸಿ, ಸಿನೆಮಾಸಕ್ತರಿಗೆ ಹೊಸ ಅನುಭವವನ್ನೇ ಕಟ್ಟಿಕೊಟ್ಟವರು. ಸಾಮಾನ್ಯವಾಗಿ ಕೆಲವೊಂದು ಸಿನೆಮಾಗಳು ನಟರ ಹೆಸರಿನಲ್ಲಿ ಗುರುತಿಸಿಕೊಂಡರೆ, ಕೆಲವೊಂದು ಸಿನೆಮಾಗಳು ನಿರ್ದೇಶಕರ ಹೆಸರಿನಲ್ಲಿ ಗುರುತಿಸಿಕೊಳ್ಳುತ್ತವೆ. “ನಿರ್ದೇಶಕನ ಸಿನೆಮಾ’ ಎಂಬ ಸಾಲಿಗೆ ಸೇರಿಕೊಳ್ಳುವವು ಹಿಚ್‌ಕಾಕ್ ಕೃತಿಗಳು ಮಾತ್ರ. ಆಲ್ಫೆಡ್ ಹಿಚ್‌ಕಾಕ್ ಒಬ್ಬ ಸ್ಟಾರ್ ನಿರ್ದೇಶಕ.
ಒಬ್ಬ ಸಾಮಾನ್ಯ ಟೈಟಲ್ ಕಾರ್ಡ್ ವಿನ್ಯಾಸಕಾರನಾಗಿ ವೃತ್ತಿಜೀವನ ಆರಂಭಿಸಿದ ಹಿಚ್‌ಕಾಕ್ ತದನಂತರದಲ್ಲಿ ಸಿನೆಮಾ ಜಗತ್ತಿಗೆ ನೀಡಿದ ಕೊಡುಗೆ ಐತಿಹಾಸಿಕ ಮೌಲ್ಯವುಳ್ಳದ್ದು. ಜಗತ್ತಿನ ಎಲ್ಲಾ ಸಿನೆಮಾ ಅಧ್ಯಯನ ಪಠ್ಯದಲ್ಲಿ ಹಿಚ್‌ಕಾಕ್‌ನ ಸಿನೆಮಾ ತಂತ್ರಗಳು ಓದಲೇಬೇಕಾದ ವಿಷಯ. ತನ್ನ ನಿರ್ದೇಶನ ವೃತ್ತಿಯನ್ನು ಆರಂಭಿಸಿದ್ದು 1925ರ ದಿ ಫ್ಲೆಷರ್ ಗಾರ್ಡನ್ ಎಂಬ ಸಿನೆಮಾದ ಮೂಲಕ. ಆದರೆ 1927ರಲ್ಲಿ ನಿರ್ದೇಶಿಸಿದ ದಿ ಲಾಡ್ಜರ್ ಎಂಬ ಚಿತ್ರ “ಥ್ರಿಲ್ಲರ್’ ಎಂಬ ಹೊಸ ಸಿನೆಮಾ ಪ್ರಕಾರವನ್ನು ಆರಂಭಿಸುವಲ್ಲಿ ನಾಂದಿ ಹಾಡಿತು. ಆ ಎಲ್ಲ ಚಿತ್ರಗಳು ಗಳಲ್ಲಿ ಬಳಸಿದ ಸಿನೆಮಾ ತಂತ್ರಗಳು ಕಾಲಾನಂತರದಲ್ಲಿ ಹಿಚ್‌ಕಾಕಿಯನ್ ತಂತ್ರ ಎಂದೇ ಪ್ರಸಿದ್ಧಿಗೆ ಬಂತು. ಹಿಚ್‌ಕಾಕಿಯನ್ ತಂತ್ರ
ಕೆಮರಾದ ದೃಷ್ಟಿಕೋನವೇ ನೋಡುಗನ ದೃಷ್ಟಿಯಾಗಿ ಪರಿವರ್ತನೆಯಾಗಿ ಆ ದೃಶ್ಯದ ಪ್ರತ್ಯಕ್ಷದರ್ಶಿ ತಾನು ಎಂಬ ಭಾವವನ್ನು ನೋಟಕನಲ್ಲಿ ಉಂಟುಮಾಡುವ ತಂತ್ರ (voyeur), ಆತಂಕ ಹಾಗೂ ಭಯಾನಕತೆಯನ್ನು ಬಿಂಬಿಸುವ ದೃಶ್ಯ… ಇವೆಲ್ಲಾ ಹಿಚ್‌ಕಾಕ್‌ನ ಕೃತಿಗಳನ್ನು ಇತರ ಸಿನೆಮಾಗಳಿಂದ ಭಿನ್ನಗೊಳಿಸುವಂಥವು. ಬಹುಶಃ ತದನಂತರದ ಎಲ್ಲಾ ಥ್ರಿಲ್ಲರ್ ಸಿನೆಮಾಗಳು ಹಿಚ್‌ಕಾಕಿಯನ್ ತಂತ್ರವನ್ನೇ ಅನುಸರಿಸಿವೆ.
Related Articles
Advertisement
ಹಿಚ್‌ಕಾಕ್‌ನ ಚಿತ್ರಗಳ ಇನ್ನೊಂದು ವಿಶೇಷತೆ ಎಂದರೆ, ಆತ ನಿರ್ದೇಶಿಸಿದ ಹೆಚ್ಚಿನ ಚಿತ್ರಗಳಲ್ಲಿ ಸಣ್ಣ ಪಾತ್ರವೊಂದರಲ್ಲಿ ಸ್ವತಃ ಹಾದುಹೋಗುವ ಹಿಚ್‌ಕಾಕ್ (ಕ್ಯಾಮಿಯೋ ಅಪಿಯರೆನ್ಸ್), ಹಿಚ್‌ಕಾಕ್ ನಿರ್ದೇಶಿಸಿದ 52 ಚಿತ್ರಗಳಲ್ಲಿ ಸುಮಾರು 39 ಚಿತ್ರಗಳಲ್ಲಿ ಆತನ ಕ್ಯಾಮಿಯೋ ಪಾತ್ರಗಳನ್ನು ಗುರುತಿಸಬಹುದು. ಇಂಥ ಪಾತ್ರಗಳಿಗೆ ಚಿತ್ರದಲ್ಲಿ ಯಾವುದೇ ಮಹತ್ವವಿರುವುದಿಲ್ಲ , ಅದು ಕೆಲವೊಮ್ಮೆ ಸಂಭಾಷಣೆರಹಿತ ಪಾತ್ರವೂ ಆಗಿರಬಹುದು. ಆ ಪಾತ್ರ ಯಾವುದೋ ದೃಶ್ಯದಲ್ಲಿ ಬರುವ ದಾರಿಹೋಕನೂ ಆಗಿರಬಹುದು, ಗಡಿಯಾರ ರಿಪೇರಿ ಮಾಡುವವನೂ ಇರಬಹುದು, ವೈದ್ಯ-ಲಾಯರ್‌ನೂ ಆಗಿರಬಹುದು ಇತ್ಯಾದಿ. ಉದಾಹರಣೆಗೆ ಹಿಂದಿ ಚಿತ್ರನಿರ್ದೇಶಕ ಮಧುರ್ ಭಂಡಾರ್ಕರ್ ತನ್ನೆಲ್ಲಾ ಚಿತ್ರಗಳಲ್ಲಿ ಒಮ್ಮೆ ತೆರೆಯ ಮೇಲೆ ಹಾದುಹೋಗುತ್ತಾರೆ. ಕನ್ನಡ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತನ್ನ ಚಿತ್ರಗಳ ಒಂದು ದೃಶ್ಯದಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳುವುದಿದೆ.
ಆರು ದಶಕಗಳ ಸಿನಿಮಾಯಾನದಲ್ಲಿ ಆತ ನಿರ್ದೇಶಿಸಿದ್ದು ಬರೋಬ್ಬರಿ 52 ಚಿತ್ರಗಳು, 1960ರ ಹೊತ್ತಿಗೆ ಹಿಚ್‌ಕಾಕ್ ನಿದೇಶಿಸಿದ ಕೆಲ ಚಿತ್ರಗಳು ಅತ್ಯದ್ಭುತ ಚಿತ್ರಗಳಾಗಿ ಮೂಡಿಬಂದವು, ರಿಯರ್‌ವಿಂಡೋ (1954), ವೆರ್ಟಿಗೋ (1958), ನಾರ್ತ್ ಬೈ ನಾರ್ತ್ ವೆಸ್ಟ್, ಸೈಕೋ (1960) ಸಿನಿಮಾ ವಲಯದಲ್ಲಿ ಈಗಲೂ ಚರ್ಚೆಗೆ ಗ್ರಾಸವಾಗುವ, ಅಧ್ಯಯನ ಯೋಗ್ಯ ಚಿತ್ರಗಳು, ಥ್ರಿಲ್ಲರ್ ಹಾಗೂ ಡಿಟೆಕ್ಟಿವ್ ಚಿತ್ರಗಳು ಒಂದಲ್ಲ ಒಂದು ರೀತಿಯಲ್ಲಿ ಹಿಚ್‌ಕಾಕಿಯನ್ ತಂತ್ರದ ಪ್ರಭಾವಕ್ಕೆ ಒಳಗಾದಂಥವೇ.
ಗೀತಾ ವಸಂತ್