Advertisement

Auditory Neuropathy: ಶಿಶುಗಳಲ್ಲಿ ಆಡಿಟರಿ ನ್ಯುರೋಪತಿ ಸ್ಪೆಕ್ಟ್ರಮ್‌ ತೊಂದರೆಗಳು

12:08 PM Sep 17, 2023 | Team Udayavani |

ಸವಾಲುಗಳು ಮತ್ತು ಪರಿಹಾರೋಪಾಯಗಳು (ಎಎನ್‌ಎಸ್‌ಡಿ) ಎಂದರೆ ಶಿಶುಗಳ ಸಹಿತ ಎಲ್ಲ ವಯೋಮಾನದವರನ್ನು ಬಾಧಿಸಬಲ್ಲ ಶ್ರವಣ ಶಕ್ತಿಗೆ ಸಂಬಂಧಿಸಿದ ತೊಂದರೆಗಳು. ಬಾಲ್ಯಕಾಲದ ನಿರ್ಣಾಯಕ ಅವಧಿಯಲ್ಲಿ ಶಿಶುಗಳ ಮಾತು ಮತ್ತು ಭಾಷೆಯ ಬೆಳವಣಿಗೆಯ ಮೇಲೆ ಗಮನಾರ್ಹ ಪ್ರತಿಕೂಲ ಪರಿಣಾಮ ಬೀರುವುದರಿಂದಾಗಿ ಶಿಶುಗಳಲ್ಲಿ ಎಎನ್‌ಎಸ್‌ಡಿ ಗಂಭೀರ ಸವಾಲುಗಳನ್ನು ಒಡ್ಡಬಲ್ಲುದು. ಶಿಶುಗಳಲ್ಲಿ ಎಎನ್‌ಎಸ್‌ ಡಿಯ ಪ್ರಧಾನ ಲಕ್ಷಣವೆಂದರೆ ಅದು ಶಬ್ದ ಸಂಕೇತಗಳು ಕೊಕ್ಲಿಯಾದಿಂದ ಮೆದುಳಿಗೆ ರವಾನೆಯಾಗುವುದಕ್ಕೆ ಅಡಚಣೆಯನ್ನು ಉಂಟು ಮಾಡುತ್ತದೆ. ಇದರಿಂದಾಗಿ ಮೆದುಳಿನಲ್ಲಿ ಶ್ರವಣ ಮಾಹಿತಿಯನ್ನು ಸಂಸ್ಕರಿಸುವುದಕ್ಕೆ ಕಷ್ಟವಾಗುತ್ತದೆ. ಇತರ ಶ್ರವಣ ಶಕ್ತಿ ದೋಷಗಳಂತೆ ಅಲ್ಲದೆ ಎಎನ್‌ ಎಸ್‌ಡಿಯಲ್ಲಿ ಕಿವಿಯ ಬಾಹ್ಯ ರೋಮ ಜೀವಕೋಶ ಕಾರ್ಯಚಟುವಟಿಕೆಗಳು ಸಹಜವಾಗಿರುತ್ತವೆ; ಇದರಿಂದಾಗಿ ಎಎನ್‌ ಎಸ್‌ಡಿಯನ್ನು ಪತ್ತೆ ಮಾಡುವುದು ಮತ್ತು ರೋಗ ನಿರ್ಣಯ ಮಾಡುವುದು ಕಷ್ಟಸಾಧ್ಯವಾಗುತ್ತದೆ. ಶಿಶುಗಳಲ್ಲಿ ಎಎನ್‌ ಎಸ್‌ಡಿ ಎಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ ಎಂಬುದನ್ನು ಇನ್ನೂ ಖಚಿತವಾಗಿ ಹೇಳುವುದಕ್ಕೆ ಸವಾಲುಗಳು ಮತ್ತು ಪರಿಹಾರೋಪಾಯಗಳು ಸಾಧ್ಯವಾಗಿಲ್ಲ; ಆದರೆ ಗಮನಾರ್ಹ ಪ್ರಮಾಣದ ಶಿಶುಗಳಲ್ಲಿ ಶ್ರವಣ ಶಕ್ತಿ ನಷ್ಟಕ್ಕೆ ಎಎನ್‌ಎಸ್‌ ಡಿಯು ಕಾರಣವಾಗಿರಬಹುದು ಎಂಬುದಾಗಿ ಅಧ್ಯಯನಗಳು ಹೇಳುತ್ತವೆ.

Advertisement

ಶಿಶುಗಳಲ್ಲಿ ಎಎನ್‌ಎಸ್‌ಡಿಗೆ ಹಲವಾರು ಕಾರಣಗಳಿರುತ್ತವೆ. ಇವುಗಳಲ್ಲಿ ಶ್ರವಣ ಚಟುವಟಿಕೆಗೆ ಸಂಬಂಧಿಸಿದ ವಂಶವಾಹಿಗಳು ವಿರೂಪಗೊಳ್ಳುವಂತಹ ವಂಶವಾಹಿ ಅಂಶಗಳು ಸೇರಿರಬಹುದಾಗಿದೆ. ಇದರ ಜತೆಗೆ, ಗರ್ಭ ಧರಿಸಿದ ಸಂದರ್ಭದಲ್ಲಿ ಮತ್ತು ಶಿಶು ಜನನದ ಸಂದರ್ಭದಲ್ಲಿ ಕೆಲವು ಅನಾರೋಗ್ಯಗಳು ಅಥವಾ ಅಪಾಯಾಂಶಗಳು ಕೂಡ ಎಎನ್‌ ಎಸ್‌ಡಿ ಉಂಟಾಗುವುದಕ್ಕೆ ಕೊಡುಗೆ ನೀಡಬಲ್ಲವು. ಇವುಗಳಲ್ಲಿ ಅವಧಿಪೂರ್ವ ಜನನ, ಜನನ ಸಂದರ್ಭದಲ್ಲಿ ದೇಹತೂಕ ಕಡಿಮೆ ಇರುವುದು, ಜನನದ ಬಳಿಕ ಹಳದಿ ಕಾಮಾಲೆ, ವಿಷಕಾರಿ ಔಷಧಗಳಿಗೆ ಒಡ್ಡಿಕೊಳ್ಳುವುದು, ಗರ್ಭ ಧರಿಸಿದ ಸಂದರ್ಭದಲ್ಲಿ ಸೋಂಕುಗಳು ಮತ್ತು ಜನನ ಸಂದರ್ಭದಲ್ಲಿ ಆಮ್ಲಜನಕದ ಕೊರತೆ ಸೇರಿವೆ. ಆದರೆ ಅನೇಕ ಪ್ರಕರಣಗಳಲ್ಲಿ ಎಎನ್‌ಎಸ್‌ಡಿ ಉಂಟಾಗುವುದಕ್ಕೆ ನಿಖರ ಕಾರಣಗಳು ತಿಳಿದುಬರುವುದಿಲ್ಲ. ಎಎನ್‌ ಎಸ್‌ಡಿ ಹೊಂದಿರುವ ಶಿಶುಗಳು ಅನೇಕ ಲಕ್ಷಣಗಳನ್ನು ಪ್ರದರ್ಶಿಸಬಹುದಾಗಿದ್ದರೂ ತತ್‌ಕ್ಷಣಕ್ಕೆ ಅವುಗಳನ್ನು ಗುರುತಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಸಾಮಾನ್ಯ ಲಕ್ಷಣಗಳೆಂದರೆ, ಸದ್ದಿಗೆ ವಿಳಂಬವಾಗಿ ಪ್ರತಿಕ್ರಿಯಿಸುವುದು ಅಥವಾ ಪ್ರತಿಕ್ರಿಯೆಯೇ ಇಲ್ಲದಿರುವುದು, ಶಾಬ್ದಿಕ ಪ್ರಚೋದನೆಗೆ ಪ್ರತಿಸ್ಪಂದನೆಯ ಕೊರತೆ, ಸೀಮಿತ ಸದ್ದಿನ ಅಭಿವ್ಯಕ್ತಿ ಮತ್ತು ಸದ್ದಿಗೆ ಪ್ರತಿಕ್ರಿಯೆ ಸತತವಾಗಿಲ್ಲದಿರುವುದು. ಎಎನ್‌ ಎಸ್‌ಡಿ ಹೊಂದಿರುವ ಶಿಶುಗಳು ಸದ್ದು ಕೇಳಿಸಿದ ಸ್ಥಳವನ್ನು ಗುರುತಿಸಲು, ಶಾಬ್ದಿಕ ಸೂಚನೆಗಳನ್ನು ಅನುಸರಿಸಲು ಮತ್ತು ಮಾತಿನ ಶಬ್ದಗಳ ನಡುವೆ ವ್ಯತ್ಯಾಸ ಗುರುತಿಸಲು ಕಷ್ಟಪಡುತ್ತವೆ.

ಬಹುತೇಕ ಪ್ರಕರಣಗಳಲ್ಲಿ ಎಎನ್‌ ಎಸ್‌ಡಿಯನ್ನು ನವಜಾತ ಶಿಶುವಿನ ಶ್ರವಣ ಶಕ್ತಿ ಪರೀಕ್ಷೆಯ ಸಂದರ್ಭದಲ್ಲಿ ಪತ್ತೆ ಹಚ್ಚಲಾಗುತ್ತದೆ. ಶ್ರವಣ ಶಕ್ತಿ ಪರೀಕ್ಷೆಯು ಒಂದು ಸರಳ ಪರೀಕ್ಷೆಯಾಗಿದ್ದು, ಎಲ್ಲ ನವಜಾತ ಶಿಶುಗಳಿಗೆ ಇದನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯು ಸದ್ದಿಗೆ ನವಜಾತ ಶಿಶುವಿನ ಪ್ರತಿಕ್ರಿಯೆಯನ್ನು ಅಳೆಯುತ್ತದೆ ಮತ್ತು ಶ್ರವಣ ಶಕ್ತಿ ದೋಷವನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಬಲ್ಲುದಾಗಿದೆ. ಯಾವುದೇ ಶಿಶು ನವಜಾತ ಶಿಶು ಶ್ರವಣ ಶಕ್ತಿ ಪರೀಕ್ಷೆಯಲ್ಲಿ ವಿಫ‌ಲವಾದರೆ ಇನ್ನಷ್ಟು ಕೂಲಂಕಷ ಪರೀಕ್ಷೆಗಳಿಗಾಗಿ ತಜ್ಞರಿಗೆ ಶಿಫಾರಸು ಮಾಡಲಾಗುತ್ತದೆ. ಪರೀಕ್ಷೆಗಳಲ್ಲಿ ಎಬಿಆರ್‌ಗಳು, ಒಎಇಗಳು ಮತ್ತು ವರ್ತನಾತ್ಮಕ ಪರೀಕ್ಷೆಗಳು ಸೇರಿರಬಹುದಾಗಿದೆ.

ಎಎನ್‌ಎಸ್‌ಡಿ ಹೊಂದಿರುವ ಶಿಶುಗಳಲ್ಲಿ ಮಾತು ಮತ್ತು ಭಾಷೆಯ ಕೌಶಲಗಳ ಗರಿಷ್ಠ ಮಟ್ಟದ ಬೆಳವಣಿಗೆಗೆ ಈ ಸಮಸ್ಯೆಯನ್ನು ಆದಷ್ಟು ಬೇಗನೆ ಪತ್ತೆ ಮಾಡುವುದು ಮತ್ತು ಚಿಕಿತ್ಸೆ ಒದಗಿಸುವುದು ಅತ್ಯಂತ ನಿರ್ಣಾಯಕವಾಗಿರುತ್ತದೆ. ಶಿಶುಗಳಲ್ಲಿ ಎಎನ್‌ ಎಸ್‌ಡಿ ನಿರ್ವಹಣೆಯು ಆಡಿಯಾಲಜಿಸ್ಟ್‌ಗಳು, ಸ್ಪೀಚ್‌-ಲ್ಯಾಂಗ್ವೇಜ್‌ ಪೆಥಾಲಜಿಸ್ಟ್‌ಗಳು, ಮಕ್ಕಳ ತಜ್ಞರು ಮತ್ತು ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಒದಗಿಸುವ ತಜ್ಞರನ್ನು ಒಳಗೊಂಡು ಬಹು ವಿಭಾಗೀಯ ಕಾರ್ಯವಿಧಾನವಾಗಿರುತ್ತದೆ. ಎಎನ್‌ಎಸ್‌ಡಿ ಹೊಂದಿರುವ ಶಿಶುಗಳಿಗೆ ಸದ್ದುಗಳ ಪ್ರಮಾಣ ವರ್ಧನೆ ಮಾಡಿ ಶಾಬ್ದಿಕ ಪ್ರಚೋದನೆಯನ್ನು ಒದಗಿಸುವುದಕ್ಕಾಗಿ ಶ್ರವಣ ಸಾಧನಗಳನ್ನು ಶಿಫಾರಸು ಮಾಡಲಾಗುತ್ತದೆ.

ಆದರೆ ಈ ಶ್ರವಣ ಸಮಸ್ಯೆಯ ವ್ಯತ್ಯಸ್ಥ ಸ್ವಭಾವದಿಂದಾಗಿ ಎಲ್ಲ ಶಿಶುಗಳಿಗೂ ಶ್ರವಣ ಸಾಧನವು ಪರಿಣಾಮಕಾರಿಯಾಗದೆ ಇರಬಹುದು. ಅಂತಹ ಪ್ರಕರಣಗಳಲ್ಲಿ ಕೊಕ್ಲಿಯಾರ್‌ ಇಂಪ್ಲಾಂಟ್‌ಗಳನ್ನು ಪರ್ಯಾಯ ಆಯ್ಕೆಯಾಗಿ ಆಯ್ದುಕೊಳ್ಳಬಹುದು. ಕೊಕ್ಲಿಯರ್‌ ಇಂಪ್ಲಾಂಟ್‌ಗಳು ಹಾನಿಗೀಡಾದ ಶ್ರವಣ ನರಕ್ಕೆ ಪರ್ಯಾಯವಾಗಿ ಕಾರ್ಯನಿರ್ವಹಿಸಿ ಶ್ರವಣ ಮಾರ್ಗಗಳನ್ನು ಸ್ವತಃ ನೇರವಾಗಿ ಪ್ರಚೋದಿಸುತ್ತವೆ.

Advertisement

ಇದರಿಂದ ಶಿಶುಗಳಿಗೆ ಶಬ್ದವನ್ನು ಸ್ವೀಕರಿಸಿ ಭಾಷಿಕ ಕೌಶಲಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಶ್ರವಣ-ಭಾಷಿಕ ಚಿಕಿತ್ಸೆ (ಆಡಿಟರಿ ವರ್ಬಲ್‌ ಥೆರಪಿ-ಎವಿಟಿ) ಎಎನ್‌ಎಸ್‌ಡಿ ಹೊಂದಿರುವ ಶಿಶುಗಳಿಗೆ ಅತ್ಯಂತ ಉಪಯುಕ್ತವಾದ ಚಿಕಿತ್ಸಾ ಕ್ರಮವಾಗಿದೆ. ಈ ಚಿಕಿತ್ಸಾ ಕ್ರಮವು ತೀವ್ರತರಹದ ಶಾಬ್ದಿಕ ಪ್ರಚೋದನೆಗಳ ಮೂಲಕ ಆಲಿಸುವ ಮತ್ತು ಮಾತನಾಡುವ ಭಾಷಿಕ ಕೌಶಲಗಳನ್ನು ಬೆಳೆಸುವತ್ತ ಗಮನ ಕೇಂದ್ರೀಕರಿಸುತ್ತದೆ.

ಶಿಶುವಿಗೆ ಸಮೃದ್ಧ ಶಾಬ್ದಿಕ ವಾತಾವರಣವನ್ನು ಒದಗಿಸುವುದು ಮತ್ತು ಸತತ ಮತ್ತು ಅರ್ಥವತ್ತಾದ ಭಾಷಿಕ ಅನುಭವಗಳನ್ನು ಒದಗಿಸುವುದಕ್ಕೆ ಅಗತ್ಯವಾದ ತರಬೇತಿಯನ್ನು ಹೆತ್ತವರಿಗೆ ಮತ್ತು ಆರೈಕೆದಾರರಿಗೆ ನೀಡುವುದು ಕೂಡ ಎವಿಟಿಯ ಭಾಗವಾಗಿರುತ್ತದೆ. ಶಿಶುವಿನ ಕೇಳುವ ಸಾಮರ್ಥ್ಯ, ಮಾತು ಉತ್ಪಾದನೆ ಮತ್ತು ಒಟ್ಟಾರೆಯಾಗಿ ಸಂವಹನ ಕೌಶಲಗಳನ್ನು ಎಷ್ಟು ಸಾಧ್ಯವೋ ಅಷ್ಟು ಮಟ್ಟಿಗೆ ಬೆಳೆಸುವುದು ಒಟ್ಟು ಗುರಿಯಾಗಿರುತ್ತದೆ.

ಎಎನ್‌ಎಸ್‌ಡಿ ಹೊಂದಿರುವ ಶಿಶುಗಳಿಗೆ ಎವಿಟಿಯ ಜತೆಗೆ ಸಮಗ್ರ ಸಂವಹನದಂತಹ ಇತರ ಸಂವಹನ ಕಾರ್ಯತಂತ್ರಗಳನ್ನು ಕೂಡ ಅಳವಡಿಸಿಕೊಳ್ಳಬಹುದಾಗಿದೆ. ಸಮಗ್ರ ಸಂವಹನ ಕಾರ್ಯತಂತ್ರದಲ್ಲಿ ಸಂಜ್ಞಾ ಭಾಷೆ, ಹಾವಭಾವಗಳು, ಮುಖಭಾವಗಳು ಮತ್ತು ಮಾತು ಇತ್ಯಾದಿ ವಿವಿಧ ವಿಧಾನಗಳು ಒಳಗೊಂಡಿದ್ದು, ಸಂವಹನ ಮತ್ತು ಭಾಷೆಯ ಬೆಳವಣಿಗೆ ಗುರಿಯಾಗಿರುತ್ತದೆ. ಶಿಶುಗಳಲ್ಲಿ ಆಡಿಟರಿ ನ್ಯುರೋಪತಿ ಸ್ಪೆಕ್ಟ್ರಂ ಡಿಸಾರ್ಡರ್‌ ಇದ್ದರೆ ಶ್ರವಣ ದೋಷವನ್ನು ಶೀಘ್ರವಾಗಿ ಗುರುತಿಸಿ ಚಿಕಿತ್ಸೆ ಒದಗಿಸು ವುದಕ್ಕೆ ಸವಾಲು ಒಡ್ಡುತ್ತದೆ.

ಎಎನ್‌ ಎಸ್‌ಡಿಯ ವಿಶಿಷ್ಟ ಗುಣಲಕ್ಷಣಗಳು, ಶಾಬ್ದಿಕ ಸಂಕೇತಗಳ ರವಾನೆಗೆ ಅದು ಒಡ್ಡುವ ಅಡಚಣೆಗಳಿಂದಾಗಿ ಈ ತೊಂದರೆಗೆ ಪ್ರತೀ ಶಿಶುವಿನ ವೈಯಕ್ತಿಕ ಅಗತ್ಯಗಳಿಗೆ ಹೊಂದಿಕೆಯಾಗುವಂತಹ ವ್ಯಕ್ತಿಗತ ವಿಶೇಷ ರೋಗ ವಿಶ್ಲೇಷಣೆ ಮತ್ತು ಚಿಕಿತ್ಸಾ ವಿಧಾನಗಳ ಸಂಯೋಜನೆ ಅಗತ್ಯವಾಗಿರುತ್ತದೆ. ಶೀಘ್ರ ರೋಗಪತ್ತೆ, ಸಮರ್ಪಕವಾದ ಶಬ್ದವರ್ಧಕ ಉಪ ಕರಣಗಳು ಮತ್ತು ಶ್ರವಣ-ಶಾಬ್ದಿಕ ಚಿಕಿತ್ಸೆ ಯಂತಹ ಸಮಗ್ರವಾದ ಚಿಕಿತ್ಸಾತ್ಮಕ ಕಾರ್ಯವಿಧಾನಗಳ ಮೂಲಕ ಎಎನ್‌ ಎಸ್‌ಡಿ ಹೊಂದಿರುವ ಶಿಶುಗಳಲ್ಲಿ ಉತ್ತಮ ಫ‌ಲಿತಾಂಶವನ್ನು ಪಡೆಯಬಹುದಾಗಿದೆ. ಈ ಮೂಲಕ ಈ ಶಿಶುಗಳು ನಿರ್ಣಾಯಕ ಸಂವಹನ ಕೌಶಲ ಬೆಳೆಸಿಕೊಂಡು ಯಶಸ್ವಿ ಭವಿಷ್ಯಕ್ಕೆ ಅಗತ್ಯ ಸಾಮರ್ಥ್ಯವಂತರಾಗಿ ಬೆಳೆಯಬಹುದಾಗಿದೆ.

-ಡಾ| ಮಯೂರ್‌ ಭಟ್‌,

ಅಸಿಸ್ಟೆಂಟ್‌ ಪ್ರೊಫೆಸರ್‌,

ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿ ವಿಭಾಗ

-ಅಕ್ಷತಾ

ಎಂಎಸ್‌ಸಿ ವಿದ್ಯಾರ್ಥಿನಿ

ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿ ವಿಭಾಗ ಕೆಎಂಸಿ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next