ಬರೋಬ್ಬರಿ 1500 ಪ್ರತಿಭೆಗಳ ಪ್ರತಿಭಾನ್ವೇಷಣೆ. ಆದರೆ, ಆ ಪೈಕಿ ಆಯ್ಕೆ ಆಗಿದ್ದು ಮಾತ್ರ ಇಬ್ಬರೇ…!
– ಇದು “ರಣರಣಕ’ ಚಿತ್ರದ ನಾಯಕ, ನಾಯಕಿ ಆಯ್ಕೆ ಕುರಿತ ವಿಷಯ. ಬಪ್ಪರೇ, ಒಬ್ಬ ನಾಯಕ, ನಾಯಕಿ ಆಯ್ಕೆಗೆ ಅಷ್ಟೊಂದು ಪ್ರತಿಭೆಗಳಿಗೆ ಆಡಿಷನ್ ಮಾಡಿದ್ದುಂಟಾ? ಸಹಜವಾಗಿಯೇ ಈ ಪ್ರಶ್ನೆ ಎದುರಾಗುತ್ತೆ. ಆದರೂ ಇದು ನಿಜ. ಇಷ್ಟಕ್ಕೂ ಅಷ್ಟೊಂದು ಪ್ರತಿಭೆಗಳಿಗೆ ಆಡಿಷನ್ ನಡೆಸಿ, ಅಂತಿಮವಾಗಿ ಇಬ್ಬರನ್ನೇ ಆಯ್ಕೆ ಮಾಡಿಕೊಂಡ ನಿರ್ದೇಶಕ ಸುಧಾಕರ ಬನ್ನಂಜೆ. ಹೌದು, ಈ ಹಿಂದೆ “ನಾನು ಹೇಮಂತ್ ಅವಳು ಸೇವಂತಿ’ ಚಿತ್ರ ನಿರ್ದೇಶಿಸಿದ್ದ ಸುಧಾಕರ ಬನ್ನಂಜೆ ಪುನಃ ಬಂದಿದ್ದಾರೆ. “ರಣ ಕಹಳೆ’ ಗೊತ್ತು, “ರಣ ಚರಂಡಿ’ಯೂ ಗೊತ್ತು. “ರಣ ರಣಕ’ ಅಂದರೇನು? ಇಂಥದ್ದೊಂದು ಪ್ರಶ್ನೆಗೆ ಉತ್ತರ “ಕಾತುರ’ ಎಂದರ್ಥ ಎನ್ನುತ್ತಾರೆ ನಿರ್ದೇಶಕ ಸುಧಾಕರ ಬನ್ನಂಜೆ.
ನಿರ್ದೇಶಕರೇ ಹೇಳುವಂತೆ, “ಪ್ರೀತಿಸಿದ ಹುಡುಗಿ ಕೈ ಕೊಟ್ಟಾಗ, ಪ್ರಿಯಕರ ಅನುಭವಿಸುವ ನೋವು, ವೇದನೆಗೆ “ರಣ ರಣಕ’ ಎಂಬ ವ್ಯಾಖ್ಯಾನ ಇದೆ. ಇದೊಂದು ಪ್ರೇಮಕಥೆ. ಎಲ್ಲಾ ಪ್ರೇಮಿಗಳ ಕಥೆ ಇದ್ದಂತೆ ಇಲ್ಲೂ ಇದೆಯಾದರೂ, ಹೊಸ ನಿರೂಪಣೆಯೊಂದಿಗೆ ಚಿತ್ರ ಸಾಗಲಿದೆ. ಒಂದು ರೀತಿ ಇಲ್ಲಿರುವ ಪ್ರೀತಿಯಲ್ಲಿ ಸಾಕಷ್ಟು ಕುತೂಹಲವಿದೆ. ಒಬ್ಬ ಹುಡುಗನ ಲೈಫಲ್ಲಿ ಹುಡುಗಿ ಎಂಟ್ರಿಯಾದಾಗ ಅವರ ಬದುಕಿನಲ್ಲಿ ಆಗುವಂತಹ ಬದಲಾವಣೆ ಎಂಥದ್ದು, ಆಕೆಯ ಸಹಕಾರದಿಂದ ಅವನು ಹೇಗೆಲ್ಲಾ ಬೆಳವಣಿಗೆ ಕಾಣುತ್ತಾನೆ ಮತ್ತು ಒಂದು ಘಟನೆಯಿಂದ ಅವನ ಬದುಕು ಹೇಗೆ ತಿರುವು ಪಡೆದುಕೊಳ್ಳುತ್ತದೆ ಎಂಬುದು ಕಥೆ’ ಎಂದು ವಿವರ ಕೊಡುತ್ತಾರೆ ನಿರ್ದೇಶಕರು.
1500 ಪ್ರತಿಭೆಗಳ ಪೈಕಿ ನಾಯಕ, ನಾಯಕಿಯಾಗಿ ಆಯ್ಕೆಯಾಗಿದ್ದು ಮಂಡ್ಯದ ಹುಡುಗ ಶಶಿಕಾಂತ್ ಮತ್ತು ತುಮಕೂರು ಬೆಡಗಿ ದಿವ್ಯಾ. ನಿರ್ದೇಶಕರು ಶಶಿಕಾಂತ್ ಅವರ ಹೆಸರನ್ನು ಈ ಚಿತ್ರಕ್ಕಾಗಿ ಶಶಿರಾಜ್ ಎಂದು ಬದಲಿಸಿದ್ದಾರೆ. ನಾಯಕಿ ದಿವ್ಯ ಅವರಿಗಿಲ್ಲಿ ಸಂಭ್ರಮ ಗೌಡ ಹೆಸರಲ್ಲಿ ಪರಿಚಯಿಸುತ್ತಿದ್ದಾರೆ. ಶಶಿರಾಜ್ ಕಾಲೇಜ್ ಹುಡುಗನಾಗಿ ಕಾಣಿಸಿ ಕೊಂಡರೆ, ಸಂಭ್ರಮಗೌಡ, ಹಳ್ಳಿಯಿಂದ ಪಟ್ಟಣಕ್ಕೆ ಓದಲು ಬರುವ ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ಉಡುಪಿ, ಮಂಗಳೂರು, ಉಳ್ಳಾಲ ಸೇರಿದಂತೆ ಇತರೆ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಟೆನ್ನಿಸ್‌ಕೃಷ್ಣ, ಶೋಭರಾಜ್, ಹೊನ್ನವಳ್ಳಿಕೃಷ್ಣ, ಬಿರಾದಾರ್, ಮೈಕೋ ಮಂಜು, ಶೇಖರ್‌ಭಂಡಾರಿ ಇತರರು ನಟಿಸಿದ್ದಾರೆ.
ಇತ್ತೀಚೆಗೆ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಲಾಗಿದೆ. ರಾಜೇಶ್ ರಾಮನಾಥ್ ಸಂಗೀತ ನೀಡಿದ್ದು, ಹೇಮಂತ್, ಅನುರಾಧ ಭಟ್, ಅಜಯ್ ವಾರಿಯರ್ ಹಾಡಿದ್ದಾರೆ. ಎನ್. ದಿವಾಕರ ಕಥೆ, ಸಾಹಿತ್ಯ ಬರೆದಿದ್ದಾರೆ. ಅಷ್ಟೇ ಅಲ್ಲ, ಸುಧಾಕರ್ ಅವರನ್ನು ಗುರುವಂತೆ ಕಾಣುತ್ತಿರುವುದರಿಂದ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಆಡಿಯೋ ಸಿಡಿ ಬಿಡುಗಡೆಗೆ ಜಯನಗರ ಶಾಸಕಿ ಸೌಮ್ಯರೆಡ್ಡಿ, ಟೆನ್ನಿಸ್‌ಕೃಷ್ಣ, ಹೊನ್ನವಳ್ಳಿ ಕೃಷ್ಣ, ಬಿರಾದಾರ್, ವಿತರಕ ವೆಂಕಟ್‌ಗೌಡ ಸಾಕ್ಷಿಯಾದರು. ಸದ್ಯ “ರಣರಣಕ’ ಸೆನ್ಸಾರ್ ಅಂಗಳದಲ್ಲಿದೆ. ಸೆಪ್ಟೆಂಬರ್ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ.