Advertisement
ಕಾಂಗ್ರೆಸ್ ಸಲ್ಲಿಸಿದ್ದ ಬಿಎಸ್‌ವೈ ಅವರ ಆಡಿಯೋ ಸಿ.ಡಿ.ಯನ್ನು ಪಡೆದುಕೊಂಡ ಸುಪ್ರೀಂ ಕೋರ್ಟ್, ಈ ಸಂಬಂಧ ವಿಚಾರಣೆ ನಡೆಸಲು ನಿರಾಕರಿಸಿದೆ. ಜತೆಗೆ ನೀವು ಅರ್ಜಿ ರೂಪದಲ್ಲಿ ನೀಡಿದ್ದೀರಿ, ನಾವು ಪಡೆದುಕೊಂಡಿದ್ದೇವೆ, ಅದನ್ನು ಪರಿಗಣಿಸುತ್ತೇವೆ. ಅದಿಷ್ಟು ಸಾಕು, ನಾವು ತೀರ್ಪು ನೀಡುತ್ತೇವೆ ಬಿಡಿ ಎಂದು ಕಾಂಗ್ರೆಸ್ ಪರ ವಕಾಲತ್ತು ವಹಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರಿಗೆ ಹೇಳಿದೆ. ಮಾತ್ರವಲ್ಲದೆ ಅರ್ಜಿಯನ್ನು ಸಾಕ್ಷ್ಯರೂಪದಲ್ಲಿ ಪರಿಗಣಿಸಲೂ ಪೀಠ ನಿರಾಕರಿಸಿದೆ.
ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಅವರು ಮಂಗಳವಾರ ಆಡಿಯೋ ಇರುವ ಸಿ.ಡಿ. ಮತ್ತು ಅದರ ಬರಹ ರೂಪದ ನಾಲ್ಕು ಪುಟಗಳ ಅರ್ಜಿ ಯನ್ನು ಪೀಠಕ್ಕೆ ಸಲ್ಲಿಸಿ ಈ ಬಗ್ಗೆ ವಿಚಾರಣೆಗೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
Related Articles
Advertisement
ಇದಕ್ಕೆ ಉತ್ತರಿಸಿದ ಪೀಠ, ಈ ವಿಚಾರಗಳನ್ನೂ ಹಿಂದೆಯೇ ಪ್ರಸ್ತಾವಿಸಲಾಗಿದೆ ಅಲ್ಲವೇ? ಹೆಚ್ಚುವರಿ ಸಾಕ್ಷ್ಯಗಳನ್ನು ನೀವು ನೀಡುತ್ತಾ ಹೋದರೆ, ನಾವು ನೋಟಿಸ್ ಜಾರಿ ಮಾಡಬೇಕಾಗುತ್ತದೆ. ಹೀಗಾಗಿ ಈಗ ನೀವು ಸಿ.ಡಿ. ನೀಡಿದ್ದೀರಿ. ಅದರ ಬಗ್ಗೆ ನೋಡಿ ಕೊಳ್ಳುವೆ. ನಮಗೆ ತೀರ್ಪು ನೀಡಲು ಅನುವು ಮಾಡಿ ಕೊಡಿ ಎಂದು ಹೇಳಿತು. ಜತೆಗೆ ನಿಮ್ಮ ಅರ್ಜಿಯನ್ನು ಸಾಕ್ಷ್ಯವಾಗಿ ಒಪ್ಪಿಕೊಂಡರೆ ಇಡೀ ಪ್ರಕರಣದ ದಿಕ್ಕೇ ಬದಲಾಗುತ್ತದೆ. ಒಂದೊಮ್ಮೆ ವಿಚಾರಣೆ ನಡೆಸಲೇಬೇಕಾದರೆ, ಬಿಎಸ್‌ವೈಗೆ ನೋಟಿಸ್ ನೀಡ ಬೇಕು. ಈ ಪ್ರಕ್ರಿಯೆಯಿಂದಾಗಿ ಸಾಕಷ್ಟು ತಡವಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿತು. ಅನರ್ಹ ಶಾಸಕರ ಪರ ವಾದ ಮಾಡಿದ ಸಿ.ಎ. ಸುಂದರಂ, ಕಾಂಗ್ರೆಸ್‌ನ ಅರ್ಜಿಗೆ ಆಕ್ಷೇಪಿಸಿದರು.
ಮುಂದೇನಾಗಬಹುದು?ತೀರ್ಪು ಕಾದಿರಿಸಿದ್ದರಿಂದ ಮುಂದೇನಾಗಬಹುದು ಎಂಬ ಕುತೂಹಲ ಮೂರೂ ಪಕ್ಷಗಳ ನಾಯಕರಲ್ಲೂ ಇದೆ. ಆಡಿಯೋವನ್ನು ಸಾಕ್ಷ್ಯವಾಗಿ ತೆಗೆದುಕೊಳ್ಳದ ಕೋರ್ಟ್, ತೀರ್ಪು ನೀಡುವಾಗ ಪರಿಗಣಿಸಲಾಗುತ್ತದೆ ಎಂದು ಹೇಳಿರುವುದರಿಂದ ಆತಂಕವೂ ಹೆಚ್ಚಾಗಿದೆ. ಜತೆಗೆ ಮುಂದಿನ ಪರಿಣಾಮಗಳ ಬಗ್ಗೆ ಮೂರೂ ಪಕ್ಷಗಳ ನಾಯಕರು ಚಿಂತನೆ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ-ಎಚ್‌ಡಿಕೆ ನಡುವೆ ಟ್ವೀಟ್ ಜಟಾಪಟಿ
ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ಮತ್ತೆ ಟ್ವೀಟ್ ಸಮರ ಆರಂಭವಾಗಿದೆ. ಬಿಜೆಪಿ ಸರಕಾರ ಪತನವಾಗಲು ಬಿಡಲ್ಲ, ಉಳಿಸುತ್ತೇನೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಜೆಡಿಎಸ್‌ನಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ. ನಾವು ಕೈ ಜೋಡಿಸಿದ್ದು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಾರದು ಎಂದು. ನಾವು 80 ಜನ ಇದ್ದರೂ ಅವರು 37 ಜನ ಇದ್ದರೂ ಸಿಎಂ ಸ್ಥಾನ ಕೊಟ್ಟದ್ದು ಆ ಕಾರಣಕ್ಕೆ ಎಂದು ಸಿದ್ದು ಹೇಳಿದ್ದಾರೆ. ಇದಕ್ಕೆ ಲಂಡನ್‌ನಿಂದಲೇ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಕೆಲವರು ಸಿಎಂ ಆಗಬೇಕು ಎಂಬ ಸ್ವಾರ್ಥದ ದುರಾಸೆಯಿಂದ ಜನರ ಹಣ ಪೋಲಾದರೂ ಪರವಾಗಿಲ್ಲ ಎಂದು ಸರಕಾರ ಬೀಳಿಸಲು ಕಾಯುತ್ತಿದ್ದಾರೆ. ಪಕ್ಷ ಬಿಟ್ಟು ಹೋದ ಶಾಸಕರಲ್ಲಿ ಬಹುತೇಕರು ನಿಮ್ಮ ಪಕ್ಷದವರೇ ಎಂಬುದನ್ನು ಮರೆಯಬಾರದು’ ಎಂದು ತಿರುಗೇಟು ನೀಡಿದ್ದಾರೆ.