ಹರೆಯದ ಹುಡುಗರ ಜೀವನ, ಬಯಕೆ, ಯೋಚನೆ, ಹಾವ-ಭಾವ ಎಲ್ಲವೂ ರಂಗು ರಂಗಾಗಿರುತ್ತದೆ. ಇಂಥ ರಂಗಿನ ಹುಡುಗರ ನವಿರಾದ ಕಥೆಯೊಂದು ಈಗ, “ರಂಗಾದ ಹುಡುಗರು’ ಹೆಸರಿನಲ್ಲಿ ಚಿತ್ರವಾಗಿ ತೆರೆಗೆ ಮೇಲೆ ಬರುತ್ತಿದೆ. ಈಗಾಗಲೇ ಈ ಚಿತ್ರದ ಶೂಟಿಂಗ್, ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಹಾಡುಗಳನ್ನು ಬಿಡುಗಡೆಗೊಳಿಸುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ.
ಇತ್ತೀಚೆಗೆ ನಡೆದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಹಿರಿಯ ನಿರ್ದೇಶಕ ಎಸ್.ಮಹೇಂದರ್ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಆಗಮಿಸಿ, ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಇದೇ ವೇಳೆ ಮಾತನಾಡಿದ ನಿರ್ದೇಶಕ ಎಸ್. ಮಹೇಂದರ್, “ನನಗೆ ಜೀವದಲ್ಲಿ ಒಳ್ಳೆಯದನ್ನು ಯೋಚನೆ ಮಾಡೋದು ಬಿಟ್ಟರೆ ಬೇರೇನೂ ಗೊತ್ತಿಲ್ಲ. ಭಗವಂತನ ಮೇಲೆ ಆಣೆ, ನನಗೆ ಪಾಸಿಟಿವ್ ಯೋಚನೆಗಳೇ ಜಾಸ್ತಿ. ಎಲ್ಲೋ ಕೊಳ್ಳೇಗಾಲದ ಮೂಲೆಯಿಂದ ಬಂದ ನಂಗೆ ಈ ಚಿತ್ರರಂಗ ಅನ್ನ ಕೊಟ್ಟಿದೆ. ಹಾಗೆ ಈಗಿನ ಯುವಕರು ಸಿಕ್ಕ ಅವಕಾಶವನ್ನು ಪರಿಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು. ಶೋಕಿಗಾಗಿ ಸಿನಿಮಾ ಬೇಡ. ಸಮಚಿತ್ತವನ್ನು ಕಾಪಾಡಿಕೊಳ್ಳಿ. ಸಿನಿಮಾ ಉದ್ಯಮ ಡಾಕ್ಟರ್, ಎಂಜಿನಿಯಿರಿಂಗ್ ವೃತ್ತಿ ಇದ್ದ ಹಾಗೆ ಅಲ್ಲ. ಪ್ರತಿ ದಿನ ಹೊಸದನ್ನು ಕೊಡುತ್ತಾ ಇರಬೇಕು. ಅದು ಹೋರಾಟ ಇದ್ದ ಹಾಗೆ. ಅದಕ್ಕೇ ಹೇಳ್ಳೋದು ಇಲ್ಲಿ ಗೆದ್ದವನೇ ಸ್ಟಾರ್. ಈಗಿನ ಯುವಕರು ಕನ್ನಡ ಚಿತ್ರರಂಗದ ರಥವನ್ನು ಬಹಳ ಚಾಕಚಕ್ಯತೆಯಿಂದ ಎಳೆಯಬೇಕು. ಇದುವರೆಗೂ ನಾವು ಈ ರಥವನ್ನು ಎಳೆದಿದ್ದೇವೆ. ಇದು ಕಷ್ಟಕರ ಎನ್ನುವುದು ನೆನಪಿರಲಿ. ಸಿಗುವ ಒಂದೊಂದು ಅವಕಾಶವು ದೊಡ್ಡದು ಎಂದು ಭಾವಿಸಬೇಕು’ ಎಂದು ಹೊಸ ತಂಡಕ್ಕೆ ಕಿವಿಮಾತು ಹೇಳಿದರು.
ಇನ್ನು “ರಂಗಾದ ಹುಡುಗರು’ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಸೇನಾಪತಿ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಚಿಕ್ಕಮಗಳೂರಿನ ಸುಂದರತಾಣಗಳಲ್ಲಿ ಚಿತ್ರದ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ಮೂವರು ಹೊಸ ಹುಡುಗರು ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಗರ್, ಪ್ರಖ್ಯಾತ್ ಅಮ್ರಿನ್ ಕುನಾಲ್, ಶ್ಯಾಮ್ ಪೊನ್ನಪ್ಪ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ರಂಗಾದ ಹುಡುಗರು’ ಚಿತ್ರವನ್ನು ಯು.ಎಸ್ ತೇಜಸ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಹೊಸಬರ ಈ ಚಿತ್ರಕ್ಕೆ ಬಸವರಾಜ್ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ. ಕಲರ್‌ಫುಲ್ ಶೀರ್ಷಿಕೆ ಹೊಂದಿರುವ “ರಂಗಾದ ಹುಡುಗರು’ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು ಮುಂಬರುವ ಡಿಸೆಂಬರ್ 3ರಂದು ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಒಟ್ಟಾರೆ “ರಂಗಾದ ಹುಡುಗರು’ ಪ್ರೇಕ್ಷಕರನ್ನು ಯಾವ ರೀತಿ ರಂಜಿಸುತ್ತಾರೆ ಎಂಬುದು ಡಿಸೆಂಬರ್ ಮೊದಲ ವಾರದಲ್ಲಿ ಗೊತ್ತಾಗಲಿದೆ.