ಪಾಟ್ನಾ: ಕೆಲವೇ ದಿನಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಲ್ಪ ಅಂತರದಿಂದ ಅಧಿಕಾರ ತಪ್ಪಿಸಿಕೊಂಡಿದ್ದ ಆರ್ ಜೆಡಿ ಅಧಿಕಾರ ಪಡೆಯಲು ಪ್ರಯತ್ನ ಮುಂದುವರಿಸಿದೆ. ಮಗನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಲಾಲು ಪ್ರಸಾದ್ ಯಾದವ್ ಸೆರೆಮನೆಯಿಂದಲೇ ಪ್ರಯತ್ನ ನಡೆಸುತ್ತಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರು ಜೈಲಿಲ್ಲಿದ್ದುಕೊಂಡು ಎನ್ ಡಿಎ ಶಾಸಕರಿಗೆ ಆಮಿಷವೊಡ್ಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರು ಮಂಗಳವಾರ ಆರೋಪಿಸಿದ್ದರು.
ಲಾಲು ಯಾದವ್ ರಾಂಚಿಯಿಂದ ಎನ್ಡಿಎ ಶಾಸಕರಿಗೆ ಫೋನ್ ಕರೆ (8051216302) ಮಾಡುತ್ತಿದ್ದಾರೆ. ಅವರಿಗೆ ಸಚಿವ ಸ್ಥಾನದ ಆಮಿಷವನ್ನು ಒಡ್ಡುತ್ತಿದ್ದಾರೆ. ನಾನು ಈ ದೂರವಾಣಿ ಸಂಖ್ಯೆಗೆ ಕರೆಮಾಡಿದಾಗ ಆಗ ಖುದ್ದು ಲಾಲು ಅವರೇ ಫೋನ್ ರಿಸೀವ್ ಮಾಡಿದರು. ಜೈಲಿನಲ್ಲಿದ್ದುಕೊಂಡು ಇಂಥ ಕೊಳಕು ರಾಜಕೀಯ ಮಾಡಬೇಡಿ. ಯಶಸ್ವಿಯಾಗಲ್ಲ ಎಂದು ನಾನವರಿಗೆ ಹೇಳಿದೆ ಎಂದು ಬಿಹಾರದ ಮಾಜಿ ಡಿಸಿಎಂ ಸುಶೀಲ್ ಮೋದಿ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ:ನಿವಾರ್ ಚಂಡಮಾರುತ: ಅಗತ್ಯ ಕ್ರಮಕ್ಕೆ ಸಿಎಂ ಸೂಚನೆ, ಕೆಲವು ಕಡೆ ರೆಡ್ ಅಲರ್ಟ್ ಘೋಷಣೆ
ಇಂದು ಮತ್ತೆ ಟ್ವೀಟ್ ಮಾಡಿರುವ ಸುಶೀಲ್ ಕುಮಾರ್ ಮೋದಿ ಅವರು ಲಾಲ್ ಪ್ರಸಾದ್ ಮತ್ತು ಎನ್ ಡಿಎ ಶಾಸಕನ ದೂರವಾಣಿ ಕರೆಯ ಆಡಿಯೋವೊಂದನ್ನು ಬಹಿರಂಗಪಡಿಸಿದ್ದಾರೆ.
ಆಡಿಯೋದಲ್ಲಿ ಲಾಲು ಸಹಾಯಕ ಎನ್ ಡಿಎ ಶಾಸಕರಿಗೆ ಕರೆ ಮಾಡಿ “ಮಹನೀಯ ಲಾಲು ಪ್ರಸಾದ್ ಯಾದವ್ ಅವರು ಮಾತನಾಡುತ್ತಾರೆ” ಎನ್ನುತ್ತಾರೆ. ನಂತರ ಲಾಲು ಪ್ರಸಾದ್ ಅವರು ಮಾತನಾಡಿ, ವಿಧಾನ ಸಭಾ ಸ್ಪೀಕರ್ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಮಹಾಘಟಬಂಧನ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಹೇಳುತ್ತಾರೆ. ಚುನಾವಣೆ ಸಂದರ್ಭ ಅಧಿವೇಶನಕ್ಕೆ ಗೈರು ಹಾಜರಾಗು, ಕೋವಿಡ್ ಸೋಂಕು ಬಂದಿದೆ ಎಂದು ಹೇಳು ಎಂದು ಹೇಳಿರುವುದು ಆಡಿಯೋದಲ್ಲಿ ದಾಖಲಾಗಿದೆ.