Advertisement

ಎಸ್‌ಐಟಿ ತನಿಖೆ ಬೇಡವೇ ಬೇಡ; ಆಡಿಯೋ ಕುರ್ಚಿ ಉಳಿಸಿಕೊಳ್ಳಲು ಬಳಕೆ !

12:38 PM Feb 12, 2019 | Team Udayavani |

ಬೆಂಗಳೂರು : “ಆಪರೇಷನ್‌ ಕಮಲ ಆಡಿಯೋ ಬಿಡುಗಡೆಯ ಹಿಂದೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಸ್ವಾರ್ಥ ಅಡಗಿದ್ದು, ಪ್ರಕರಣವನ್ನು ಕುರ್ಚಿ ಉಳಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಪ್ರಕರಣದಲ್ಲಿ ತನಿಖೆಯನ್ನು ಎಸ್‌ಐಟಿ ನಡೆಸುವುದು ಬೇಡ, ನಡೆಸಿದರೆ ಸತ್ಯಾಂಶ ಹೊರ ಬರುವುದಿಲ್ಲ ಎಂದು ವಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಮಂಗಳವಾರ ವಿಧಾನ ಸಭಾ ಕಲಾಪದಲ್ಲಿ  ಗುಡುಗಿದ್ದಾರೆ. 

Advertisement

ಘಟನೆಯನ್ನು ಸ್ವಾರ್ಥಕ್ಕಾಗಿ,ಕುರ್ಚಿ ಉಳಿಸಿಕೊಳ್ಳಲು ಬಳಸಿಕೊಂಡಿದ್ದಾರೆ. ಇದು ಮುಖ್ಯಮಂತ್ರಿಗಳಿಗೆ ಶೋಭೆ ತರುವಂತದ್ದಲ್ಲ. 30 ನಿಮಿಷಗಳ ವಿಡಿಯೋವನ್ನು ಕಟ್‌ ಆಂಡ್‌ ಪೇಸ್ಟ್‌ ಮಾಡಿ 2 ರಿಂದ 3  ನಿಮಿಷದ ಆಡಿಯೋ ಮಾಡಿ ತಮಗೆ ಬೇಕಾದ ಹಾಗೆ ತಿರುಚಿ ಮಾಡಲಾಗಿದೆ. ಈ ಪ್ರಕರಣದ ತನಿಖೆಯನ್ನು ಸದನ ಸಮಿತಿ ಮೂಲಕವೇ ಮಾಡಬೇಕು. ಯಾವುದೇ ಕಾರಣಕ್ಕೂ ಎಸ್‌ಐಟಿ ಮೂಲಕ ನಡೆಸುವುದನ್ನು ನಾವು ಒಪ್ಪುವುದಿಲ್ಲ ಎಂದರು. 

ನಾನು ಸಾಮಾನ್ಯ ಕುಟುಂಬದಿಂದ ಬಂದವನು. ಹೋರಾಟಗಳ ಮೂಲಕ ಈ ಹಂತಕ್ಕೆ ತಲುಪಿ, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಆಗಿದ್ದೇನೆ. ಕುಮಾರಸ್ವಾಮಿ ಅವರೊಂದಿಗೂ 20 ತಿಂಗಳು ಕೆಲಸ ಮಾಡಿದ್ದೇನೆ ಎಂದರು. 

ಜಗತ್ತಿಗೇ ಗೊತ್ತಿದೆ 20 ಕ್ಕೂ ಹೆಚ್ಚು ಕಾಂಗ್ರೆಸ್‌ ಶಾಸಕರು ರೆಸಾರ್ಟ್‌ನಲ್ಲಿ ಎಚ್‌ಡಿಕೆಯನ್ನು ಮುಖ್ಯಮಂತ್ರಿಯಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. ಇದಕ್ಕೆ ಯಡಿಯೂರಪ್ಪ ಜವಾಬ್ದಾರ ಅಲ್ಲ. ಅವರನ್ನು ಕಾದಿಟ್ಟುಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದರು. 

ಸುಭಾಷ್‌ ಗುತ್ತೇದಾರ್‌ರನ್ನು ಕುಮಾರಸ್ವಾಮಿ ಅವರು ಕರೆಯಲಿಲ್ಲವೆ?,ನಿಮ್ಮ ಇಬ್ಬರು ಮಂತ್ರಿಗಳು ನಮ್ಮ ಜೊತೆ ಬಿಜೆಪಿ ಶಾಸಕರಿದ್ದಾರೆ ಎಂದಿದ್ದು ನಿಜ ತಾನೆ ಎಂದು ಪ್ರಶ್ನಿಸಿದರು. 

Advertisement

ವಿಧಾನ ಸಭಾಧ್ಯಕ್ಷ ರಮೇಶ್‌ಕುಮಾರ್‌ ಅವರ ಸೂಚನೆ ಬಳಿಕ ಪ್ರಕರಣವನ್ನು ಎಸ್‌ಐಟಿ ಮೂಲಕ ತನಿಖೆ ನಡೆಸುವುದಾಗಿ ಸರ್ಕಾರ ಘೋಷಿಸಿತ್ತು.  ನ್ಯಾಯಾಂಗ ಅಥವಾ ಸದನ ಸಮಿತಿ ಮೂಲಕ ಸಮಗ್ರ ತನಿಖೆ ಯಾಗಬೇಕೆಂದು ಬಿಜೆಪಿ ಪಟ್ಟು ಹಿಡಿದಿದೆ. 

ನಾಳೆ ಬೆಳಗ್ಗೆ 10.30 ಕ್ಕೆ ಸ್ಪೀಕರ್‌ ಕೊಠಡಿಯಲ್ಲಿ ಸಭೆ 
ನಾಳೆ ಬೆಳಗ್ಗೆ ಸ್ವೀಕರ್‌ ರಮೇಶ್‌ ಕುಮಾರ್‌ ಅವರ ಕೊಠಡಿಯಲ್ಲಿ ಮೂರು ಪಕ್ಷಗಳ ನಾಯಕರ ಸಭೆ ನಡೆಯಲಿದ್ದು , ಇಲ್ಲಿ ತನಿಖೆಯ ಕುರಿತು ಯಾವ ತೀರ್ಮಾನ ಕೈಗೊಳ್ಳುತ್ತಾರೆ.ಸರ್ಕಾರದ ವತಿಯಿಂದ ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next