Advertisement

ಮೂಕಜ್ಜಿಯ ಕನಸು ಚಿತ್ರವನ್ನು ಪ್ರೇಕ್ಷಕರು ಬೆಂಬಲಿಸುತ್ತಾರೆ : ಶೇಷಾದ್ರಿ ವಿಶ್ವಾಸ

09:24 AM Nov 29, 2019 | Nagendra Trasi |

ಮಣಿಪಾಲ:  ಚಿತ್ರ ನಿರ್ದೇಶಕ ಪಿ. ಶೇಷಾದ್ರಿಯವರ ‘ಮೂಕಜ್ಜಿಯ ಕನಸುಗಳು’ (ಡಾ. ಶಿವರಾಮ ಕಾರಂತರ ಕಾದಂಬರಿ ಆಧರಿತ) ಚಲನಚಿತ್ರ ನ. 29 ರಂದು ರಾಜ್ಯದ ವಿವಿಧೆಡೆ ಬಿಡುಗಡೆಯಾಗಲಿದೆ.

Advertisement

ಅದ್ದೂರಿ ಬಿಡುಗಡೆಯನ್ನು ಆಯೋಜಿಸದಿದ್ದರೂ ಬೆಂಗಳೂರು ಸೇರಿದಂತೆ ಕೆಲವೆಡೆ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ.

‘ಇದೊಂದು ರೀತಿಯಲ್ಲಿ ಸಾಂಪ್ರದಾಯಿಕ ಬಿಡುಗಡೆ. ರಾಜ್ಯಾದ್ಯಂತ, ವಿಶ್ವದಾದ್ಯಂತ ಎಂಬ ಅಬ್ಬರ ಇದಕ್ಕಿಲ್ಲ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಕೆಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಉಡುಪಿಯಲ್ಲೂ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ’ ಎಂದರು ಪಿ. ಶೇಷಾದ್ರಿಯವರು ಉದಯವಾಣಿಯೊಂದಿಗೆ ಗೋವಾದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಹಾಜರಾಗಿದ್ದ ಸಂದರ್ಭ.

ಬೆಟ್ಟದ ಜೀವ ಚಿತ್ರ ಮಾಡಿದ್ದಾಗ ಡಾ. ಶಿವರಾಮ ಕಾರಂತರೇ ನನ್ನ ಕೈ ಹಿಡಿದದ್ದು. ಯಾಕೆಂದರೆ, ಡಾ. ಶಿವರಾಮ ಕಾರಂತರ ಕಾದಂಬರಿ ಎಂದು ಹಲವರು ಬಂದವರಿದ್ದಾರೆ. ಈ ಬಾರಿಯೂ ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ಕಾದಂಬರಿ ಆಧರಿಸಿ ಚಿತ್ರ ಮಾಡಿದ್ದೇನೆ. ಡಾ. ಕಾರಂತರ ಬೆಟ್ಟದ ಜೀವ ತಿಳಿಯದವರಿಗೂ ಅವರ ಮೂಕಜ್ಜಿ ಬಗ್ಗೆ ಗೊತ್ತಿದೆ. ಹಾಗಾಗಿ ಜನರು ಚಿತ್ರಮಂದಿರಕ್ಕೆ ಬಂದು ನೋಡುವ ನಿರೀಕ್ಷೆಯಿದೆ ಎಂದರು ಶೇಷಾದ್ರಿ.

ಬೆಟ್ಟದ ಜೀವ ಮತ್ತು ಮುನ್ನುಡಿ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಿದಾಗ ಜನರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಒಳ್ಳೆಯ ಚಿತ್ರಗಳಿಗೆ ಜನರು ಇದ್ದೇ ಇದ್ದಾರೆ, ಆದರೆ ಅವರಿಗೆ ಚಿತ್ರ ತಲುಪಿಸಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂಬುದು ಸತ್ಯ. ಈಗ ಚಿತ್ರಮಂದಿರಗಳಲ್ಲಿ ಮುಂಗಡವಾಗಿ ಬಾಡಿಗೆ ಕೊಟ್ಟು ಚಿತ್ರ ಬಿಡುಗಡೆ ಮಾಡುವುದು ಕಷ್ಟ. ಜತೆಗೆ ದಿನಗಳು ಸಿಗುವುದೂ ಕಡಿಮೆ. ಚಿತ್ರಮಂದಿರದವರೂ ಸ್ಟಾರ್‌ ಸಿನಿಮಾಗಳಿಗೆ ಮೊದಲು ಆದ್ಯತೆ ನೀಡುತ್ತಾರೆ (ಅವರ ವ್ಯವಹಾರ, ಅವರೇನೂ ಮಾಡುವಂತಿಲ್ಲ). ಒಟ್ಟೂ ಸಮಾನಾಂತರ ಸಿನಿಮಾ ಮಾಡುವವರಿಗೆ ಪ್ರೇಕ್ಷಕರನ್ನು ತಲುಪಲು ಕಷ್ಟವಾಗುತ್ತಿದೆ ಎಂಬುದು ಅವರ ಅಭಿಮತ.

Advertisement

ನೆಟ್‌ಫ್ಲಿಕ್ಸ್‌ ನಂಥ ಒಟಿಟಿ ಮಾಧ್ಯಮಗಳು ಲಭ್ಯವಾದಾಗ ಕೊಂಚ ಹೊಸ ನಿರೀಕ್ಷೆ ಹುಟ್ಟು ಹಾಕಿತು. ಯಾಕೆಂದರೆ ಇದೊಂದು ವಿಶಿಷ್ಟವಾದ ಸಾಧನ. ಆದರೆ ಈಗಿನ ಅನುಭವ ಹಳೆಯದ್ದಕ್ಕಿಂತ ಭಿನ್ನವಾಗಿಲ್ಲ. ಟಿವಿ ಬಂದಾಗ, ನಾವು ಆ ಮೂಲಕ ಜನರನ್ನು ತಲುಪಬಹುದು ಎನಿಸಿತ್ತು, ಸುಳ್ಳಾಯಿತು. ಬಳಿಕ ಸೆಟಲೈಟ್ಸ್‌ ರೈಟ್ಸ್‌ ಮಾದರಿಗಳು ಬಂದವು. ಆಗ ಇದು ಪರಿಹಾರವಾಗಬಹುದೆಂಬ ನಿರೀಕ್ಷೆಯಿತ್ತು. ಕ್ರಮೇಣ ಅದೂ ಹುಸಿಯಾಯಿತು. ಒಟಿಟಿ ಮಾಧ್ಯಮಗಳ ಮೇಲೂ ಅಂಥದ್ದೇ ಒಂದು ನಿರೀಕ್ಷೆಯಿತ್ತು. ಆದರೆ, ಅವರೂ ಸಹ ಕ್ರೈಮ್‌ ಮತ್ತು ಸೆಕ್ಸ್‌ ಮುಖ್ಯ ಎನ್ನುತ್ತಿವೆ. ನಮ್ಮಂಥವರ ಸಿನಿಮಾಗಳಿಗೆ, ‘ನಾವು ಪರಿಗಣಿಸಬಹುದಾದ ವಿಷಯಗಳ ನೀತಿಯಡಿ ನಿಮ್ಮ ಚಿತ್ರ ಪರಿಗಣಿತವಾಗುವುದಿಲ್ಲ’ ಎನ್ನುತ್ತಾರೆ. ಇದರರ್ಥ ಅದೇ ಅಲ್ಲವೇ? ಕ್ರೈಮ್‌ ಮತ್ತು ಸೆಕ್ಸ್‌ ಇರುವುದೇ ಬೇಕೆಂದಲ್ಲವೇ? ಇದರಿಂದ ನನಗೆ ಮತ್ತಷ್ಟು ನಿರಾಸೆಯಾಗಿದೆ ಎಂದು ಬೇಸರದಿಂದ ನುಡಿದರು ಶೇಷಾದ್ರಿ.

ಶಾಲಾ-ಕಾಲೇಜುಗಳಲ್ಲಿ ಚಿತ್ರ ಪ್ರದರ್ಶನ

ಸಿನಿಮಾ ಮಂದಿರಗಳಲ್ಲಿನ ಬಿಡುಗಡೆಯ ಬಳಿಕ ಶಾಲಾ ಕಾಲೇಜುಗಳಲ್ಲೂ ಈ ಚಿತ್ರ ಪ್ರದರ್ಶನ ಮಾಡಲಾಗುವುದು. 100 ಕ್ಕಿಂತ ಹೆಚ್ಚು ಮಂದಿ ನೋಡುವವರಿದ್ದರೆ ಅವರಿಗೆ ಸಿನಿಮಾ ಒದಗಿಸಲು ಪ್ರಯತ್ನಿಸಲಾಗುವುದು. ಅದಕ್ಕೆ ನೀಡಬೇಕಾದ ಸಂಭಾವನೆ ದೂರ ಮತ್ತು ಸಂಖ್ಯೆಯನ್ನು ಆಧರಿಸಿ ನಿರ್ಧರಿಸಲಾಗುವುದು.

ಸಾಮಾಜಿಕ ಮಾಧ್ಯಮ

ಸಾಮಾಜಿಕ ಮಾಧ್ಯಮ ನಮ್ಮಂಥವರಿಗೆ ಒಂದು ಒಳ್ಳೆಯ ಮಾರ್ಗ. ಅದರಲ್ಲೂ ಜನರನ್ನು ತಲುಪಲು ಸುಲಭ. ಸದ್ಯಕ್ಕೆ ನಾನು ನನ್ನ ಸಿನಿಮಾದ ಕುರಿತು ಮಾಹಿತಿ ತಲುಪಿಸಲು ಅನುಸರಿಸಿರುವ ಮಾರ್ಗವಿದೇ. ಆದರೆ, ಅದರಲ್ಲಿ ಎಷ್ಟು ಜನ ಸಿನಿಮಾ ಮಂದಿರಕ್ಕೆ ಬಂದು ಸಿನಿಮಾ ವೀಕ್ಷಿಸುತ್ತಾರೆ ಎಂಬುದು ಮುಖ್ಯ. ನನಗೆ ನನ್ನ ಸಿನಿಮಾ ಕುರಿತು ಪೋಸ್ಟ್‌ಗಳನ್ನು ಓದಿದ ಕನಿಷ್ಠ ಶೇ. ೩೦ ರಷ್ಟು ಮಂದಿ ಜನರಾದರೂ ಸಿನಿಮಾ ಮಂದಿರಕ್ಕೆ ಬಂದು ನಮ್ಮನ್ನು ಬೆಂಬಲಿಸುತ್ತಾರೆಂಬ ನಂಬಿಕೆಯಿದೆ ಎಂದರು ಶೇಷಾದ್ರಿ.

ಇನ್ನಷ್ಟು ಒಳ್ಳೆಯ ಸಿನಿಮಾ ಬೇಕು

ಈಗ ಕನ್ನಡದಲ್ಲಿ ಸಿನಿಮಾ ಸಂಖ್ಯೆ ಹೆಚ್ಚಾಗಿರುವುದು ನಿಜ. ಆದರೆ, ಗುಣಮಟ್ಟದಲ್ಲಿ ಏರಿಕೆಯಾಗಿಲ್ಲ. ಮರಾಠಿ, ತಮಿಳು ಹಾಗೂ ಮಲಯಾಳಂನಲ್ಲಿ ಗುಣಾತ್ಮಕವಾದ ಚಿತ್ರಗಳ ಸಂಖ್ಯೆ ಹೆಚ್ಚಿದೆ. ಅದೇ ಬೆಳವಣಿಗೆ ನಮ್ಮಲ್ಲೂ ಸಾಧ್ಯವಾಗಬೇಕು. ಒಂದು ನಿಜ. ಈಗ ಬರುತ್ತಿರುವ ಹೊಸ ಹುಡುಗರು ಮಾಧ್ಯಮವನ್ನು ಚೆನ್ನಾಗಿ ತಿಳಿದುಕೊಂಡು ಬರುತ್ತಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಒಳ್ಳೆಯ ಚಿತ್ರಗಳು ಬರುವ ವಿಶ್ವಾಸವಿದೆ ಎಂದರು ಅವರು.

Advertisement

Udayavani is now on Telegram. Click here to join our channel and stay updated with the latest news.

Next