ಯಾವಾಗ ಗುರು ಸಿನಿಮಾ ನೋಡೋದು, ನಮ್ ಬಾಸ್ ಕಟೌಟ್ ಮುಂದೆ ಜೈಕಾರ ಹಾಕಿ ಕುಣಿಯೋದು, ಇಂಟ್ರೊಡಕ್ಷನ್‌ಗೆ ಹೂ ಬಿಸಾಕಿ, ಥಿಯೇಟರ್ ಪರದೆ ಮುಂದೆ ಬಿಂದಾಸ್ ಆಗಿ ಕುಣಿಯೋದು ಯಾವಾಗ … ಇಂತಹ ಹತ್ತಾರು ಪ್ರಶ್ನೆಗಳು ಅಪ್ಪಟ ಸಿನಿಮಾ ಪ್ರೇಮಿಯನ್ನು ಕಾಡುತ್ತಿದೆ.
ಸಿನಿಮಾ ರಂಗವೇ ಹಾಗೆ. ಅಲ್ಲಿ ಸದಾ ಚಟುವಟಿಕೆ ಇದ್ದರಷ್ಟೇ ಜೀವಂತಿಕೆ. ಅದರಲ್ಲೂ ಸಿನಿಮಾ ಬಿಡುಗಡೆಯ ವಾರವೆಂದರೆ ಸಿನಿಮಾ ಪ್ರೇಮಿಗಳಿಗೆ ಅಚ್ಚುಮೆಚ್ಚು. ಶುಕ್ರವಾರ ಬಂತೆಂದರೆ ಅದೊಂದು ಹಬ್ಬ. ಅದರಲ್ಲೂ ಸ್ಟಾರ್ ಸಿನಿಮಾ ಬಿಡುಗಡೆಯಾಗುವುದಾದರೆ ಆ ಸಂಭ್ರಮ ದುಪ್ಪಟ್ಟು. ಒಂದು ಕಡೆ ಫಸ್ಟ್ ಡೇ ಫಸ್ಟ್ ಶೋ ನೋಡಬೇಕೆಂಬ ತುಡಿತ, ಇನ್ನೊಂದು ಕಡೆ ಥಿಯೇಟರ್ ಮುಂದೆ ಸಂಭ್ರಮಿಸುವ ಹಂಬಲ. ಆದರೆ, ಕಳೆದ ಒಂದು ತಿಂಗಳಿನಿಂದ ಚಿತ್ರರಂಗ ಸ್ತಬ್ಧವಾಗಿದೆ. ಸಿನಿಮಾದ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಸಿನಿಮಾ ಪ್ರೇಕ್ಷಕ ಸಹಜವಾಗಿಯೇ ಬೇಸರಗೊಂಡಿದ್ದಾನೆ. ವಾರ ವಾರ ಹೊಸ ಸಿನಿಮಾಗಳನ್ನು ಕಣ್ತುಂಬಿಕೊಳ್ಳುತ್ತಿದ್ದ ಪ್ರೇಕ್ಷಕನಿಗೆ ಈಗ ಯಾವ ಹೊಸ ಸಿನಿಮಾವೂ ಇಲ್ಲ. ಚಿತ್ರಮಂದಿರ ಮುಂದಿನ ಆ ಕಲರ್ ಫುಲ್ ವಾತಾವರಣವೂ ಇಲ್ಲ.
ಇವತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಸಾಕಷ್ಟು ಸಿನಿಮಾಳು ಇವೆ. ಆದರೆ, ಗಾಂಧಿನಗರದ ಅಪ್ಪಟ ಸಿನಿಮಾ ಪ್ರೇಮಿಗೆ ಈ ಡಿಜಿಟಲ್ ಮಾಧ್ಯಮಗಳು ಅಷ್ಟಾಗಿ ಒಗ್ಗುವುದಿಲ್ಲ. ಅತನಿಗೆ ಏನಿದ್ದರೂ ಚಿತ್ರಮಂದಿರದ ಮುಂದಿನ ಸಂಭ್ರಮವೇ ಹೆಚ್ಚು ಖುಷಿ ನೀಡುತ್ತದೆ. ಈ ಸಂಭ್ರಮ ಮತ್ತೆ ಮರುಕಳಿಸಲಿ ಎಂಬ ಪ್ರಾರ್ಥನೆ ನಿಜವಾದ ಸಿನಿಮಾ ಪ್ರೇಮಿಯದ್ದು. ಪ್ರತಿ ಶುಕ್ರವಾರ ಸಿನಿಮಾ ಬಿಡುಗಡೆಯಾದಾಗ ಎರಡು ವರ್ಗ ಕಾತರದಿಂದ ಕಾಯುತ್ತದೆ. ಸ್ಟಾರ್ ಹಾಗೂ ಹೊಸಬರು. ಅದರಲ್ಲೂ ಹೊಸಬರ ಚಿಂತೆ, ಲೆಕ್ಕಾಚಾರ ಸ್ವಲ್ಪ ಹೆಚ್ಚೇ ಇರುತ್ತದೆ. ಎಷ್ಟೇ ದೊಡ್ಡ ಸ್ಟಾರ್ ಆದರೂ ತನ್ನ ಸಿನಿಮಾ ರಿಲೀಸ್ ದಿನ ಸಣ್ಣದೊಂದು ಚಡಪಡಿಕೆ, ಆತಂಕ ಇದ್ದೇ ಇರುತ್ತದೆ. ಸಿನಿಮಾ ಏನಾಗುತ್ತದೋ, ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೋ ಎಂಬ ಚಡಪಡಿಕೆ ಸಹಜ. ಹಾಗಂತ ಒಬ್ಬ ಸ್ಟಾರ್ ನಟನ ಒಂದು ಸಿನಿಮಾ ಸೋತ ಕೂಡಲೇ ಆತನ ಕೆರಿ ಯರ್ ಮೇಲೆ ಅದು ದೊಡ್ಡ ಪ್ರಭಾವ ಬೀರೋದಿಲ್ಲ. ಇದು ಸ್ಟಾರ್ ನಟರ ಕಥೆಯಾದರೆ ಹೊಸಬರಿಗೆ ತಮ್ಮ ಸಿನಿಮಾ ಬಿಡುಗಡೆಯ ದಿನ ಅದೊಂದು ಅಗ್ನಿಪರೀಕ್ಷೆಯಾಗಿರುತ್ತದೆ.
ಸಿನಿಮಾ ಗೆದ್ದೆರೆ ಅಥವಾ ಮೆಚ್ಚುಗೆ ಪಡೆದರಷ್ಟೇ ಅವರಿಗೆ ಭವಿಷ್ಯ. ಇಲ್ಲವಾದರೆ ಬಂದ ದಾರಿಯಲ್ಲೇ ವಾಪಾಸ್ ಹೋಗ ಬೇಕಾದ ಪರಿಸ್ಥಿತಿ. ಅದೆಷ್ಟೋ ಹೊಸಬರು ಫಸ್ಟ್ ಡೇ ಫಸ್ಟ್ ಶೋ ಮುಗಿಸಿಕೊಂಡು ಹೊರ ಬರುವ ಪ್ರೇಕ್ಷಕರ ಅಭಿಪ್ರಾಯ, ವಿಮರ್ಶೆಯ ನಿರೀಕ್ಷೆಯಲ್ಲಿರುತ್ತಾರೆ. ಆದರೆ ಕೋವಿಡ್ 19 ಎಫೆಕ್ಟ್ನಿಂದಾಗಿ ಹೊಸಬರು, ಸ್ಟಾರ್‌ಗಳು ಇಬ್ಬರೂ ಒಟ್ಟಿಗೆ ಭಯಪಡುವಂತಾಗಿದೆ. ಮತ್ತೆ ಸಿನಿಮಾ ಪ್ರದರ್ಶನ ಯಾವಾಗ ಆರಂಭವಾಗುತ್ತದೆ ಎಂದು ಎದುರು ನೋಡುವಂತಾಗಿದೆ. ಚಿತ್ರ ರಂಗ ಮತ್ತೆ ಮೊದಲಿನಂತಾಗಲೂ ಸಾಕಷ್ಟು ಸಮಯವೇ ಬೇಕಾಗಬಹುದು. ಕೋವಿಡ್ 19 ಮಹಾಮಾರಿ ಮಾಯವಾಗಿ ಜನ ಭಯ ಬಿಟ್ಟು ಸಿನಿಮಾ ಎಂಜಾಯ್ ಮಾಡಿದಾಗ ಮಾತ್ರ ಚಿತ್ರರಂಗ ಮತ್ತೆ ಕಲರ್ ಫುಲ್ ಆಗಲಿದೆ. ಪ್ರೇಕ್ಷಕನ ಶಿಳ್ಳೆ, ಕುಣಿತ ಚಿತ್ರಮಂದಿರ ಮುಂದೆ ಮರುಕಳಿಸಲಿದೆ.