Advertisement
ಪ್ರೇಕ್ಷಕರನ್ನು ಹಲವು ವಿಧಗಳಲ್ಲಿ ಪರಿಗಣಿಸಬಹುದು. ದೀವಟಿಗೆ ಬೆಳಕಿನಲ್ಲಿ ಆಟ ನೋಡಿದ ಹಿರಿಯ ಪ್ರೇಕ್ಷಕರು ಈಗಿನ ಆಧುನಿಕ ಬೆಳಕಿನ ವ್ಯವಸ್ಥೆಯಲ್ಲಿ ಆಟ ನೋಡಿ ಸಂಭ್ರಮಿಸುತ್ತಿದ್ದಾರೆ. ಹತ್ತಾರು ವರ್ಷಗಳಿಂದ ಕಲಾಸಕ್ತಿ ಬೆಳೆಸಿಕೊಂಡು ತಿಟ್ಟುಗಳ ಬೇಧವಿಲ್ಲದೆ ಸಾಧ್ಯವಾದಾಗೆಲ್ಲಾ ಪ್ರದರ್ಶನಗಳನ್ನು ವೀಕ್ಷಿಸಿ ಸಂಭ್ರಮಿಸುವ ಅದೆಷ್ಟೋ ಮಂದಿ ಕಲಾಭಿಮಾನಿಗಳು ನಮ್ಮ ನಡುವೆ ಇದ್ದಾರೆ.
Related Articles
Advertisement
ಡೇರೆ ಮೇಳಗಳ ಪ್ರದರ್ಶನ ಪ್ರಸಿದ್ಧ ಕಲಾವಿದರಿರುವ ಕಾರಣಕ್ಕಾಗಿಯೇ ಅಪಾರ ನಿರೀಕ್ಷೆ ಇರಿಸಿ ಪ್ರೇಕ್ಷಕರು ರಂಗಸ್ಥಳದ ಎದುರು ಜಮಾಯಿಸುತ್ತಾರೆ. ಕರಾವಳಿಯ ಹಲವೆಡೆ ಡೇರೆ ಮೇಳದ ಬಯಲಾಟವಿದೆ ಎಂದರೆ ಎಷ್ಟೇ ಒತ್ತಡ ಇದ್ದರೂ ಒಂದು ಗಳಿಗೆಯಾದರೂ ಆಟ ನೋಡಬೇಕೆಂದು ಬರುವವರ ಸಂಖ್ಯೆಯೂ ದೊಡ್ಡ ಪ್ರಮಾಣದಿದ್ದು, ಇವರು ಎಂದೂ ಟಿಕೆಟ್ ಖರೀದಿ ಮಾಡಿ ಆಟಕ್ಕೆ ಹೋಗುವವ ಪ್ರೇಕ್ಷಕರಲ್ಲ. ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯೂ ಆ ಪ್ರೇಕ್ಷಕರ ಸಾಲಿನಲ್ಲಿ ದೊಡ್ಡದಿದೆ.
ಕೆಲ ಪ್ರೇಕ್ಷಕರೂ ಒಳ್ಳೆಯ ಪ್ರಸಂಗ ಇದೆ ಎಂದಾದರೆ 200 ಕಿ.ಮೀ ದೂರಕ್ಕೆ ಪ್ರಯಾಣಿಸಿ ಪ್ರದರ್ಶನ ವೀಕ್ಷಿಸಲೂ ಸಿದ್ಧ , ಇದಕ್ಕೆ ಸಾಕ್ಷಿ ಎಂದೆ ದೂರದ ಶಿರಸಿಯಿಂದ ಉಡುಪಿಗೆ ಬರುವವರು ಇದ್ದಾರೆ. ಶೃಂಗೇರಿಯಿಂದ ಕುಂದಾಪುರಕ್ಕೆ ಬಂದು ಇಲ್ಲ ತೆರಳಿ ಆಟ ವೀಕ್ಷಿಸುವ ಕೆಲ ಅಭಿಮಾನಿಗಳಿದ್ದಾರೆ.
ಈಗಿನ ದಿನಮಾನಸಗಳಲ್ಲಿ ಬಯಲಾಟ ಮೇಳಗಳಿಗೆ ಪ್ರೇಕ್ಷಕರ ಕೊರತೆ ಇರುವುದು ಎಲ್ಲರೂ ಒಪ್ಪಿಕೊಳ್ಳಬೇಕಾದ ಮಾತು. ಆದೆ ಇದಕ್ಕೆ ಅಪವಾದ ಎನ್ನುವಂತೆ ಆಗೊಮ್ಮೆ ಈಗೊಮ್ಮೆ ಸಾವಿರಾರು ಪ್ರೇಕ್ಷಕರು ಪ್ರದರ್ಶನಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಜೋಡಾಟಗಳು,ಕೂಡಾಟಗಳು , ವಿಶೇಷ ಆಕರ್ಷಣೆ, ಅತಿಥಿ ಕಲಾವಿದರನ್ನು ಕರೆಸಿಕೊಂಡರೆ ಪ್ರೇಕ್ಷಕರ ಸಂಖ್ಯೆಗೆ ಕೊರೆತೆಯಿಲ್ಲ ಎನ್ನುವುದು ಸತ್ಯ.
ಖಾಯಂ ಹರಕೆ ಬಯಲಾಟ ಇರುವ ಮೇಳಗಳಿಗೆ ಆಟ ಆಡಿಸುವವರ ಮನೆಯವರು ದೂರದ ಊರಿಂದ ಬರುವ ನೆಂಟರಿಷ್ಟರೇ ಪ್ರೇಕ್ಷಕರು . ಆಟದ ಮನೆಯ ಸುತ್ತ ಮುತ್ತಲಿನ ನಿವಾಸಿಗಳು ಬಂದರೂ ಮಧ್ಯ ರಾತ್ರಿ ಕಳೆದ ಬಳಿಕ ಅವರೂ ನಿಧಾನವಾಗಿ ಕುರ್ಚಿಯಿಂದ ಏಳುವುದು ಎಲ್ಲೆಡೆ ಸಾಮಾನ್ಯವಾಗಿದೆ.
ಬಯಲಾಟ ಮೇಳದ ಹಿರಿಯ ಕಲಾವಿದರೊಬ್ಬರು ಹೇಳಿದಂತೆ, ಬೆಳಗಿನವರೆಗೆ ಆಟ ನೋಡುವ ಪ್ರೇಕ್ಷಕರು ಈಗ ಇಲ್ಲ. ಹರಕೆ ಹೊತ್ತವರ ಪೈಕಿ ಹೆಚ್ಚಿನವರು ಬೆಳಗಿನವರೆಗೆ ಆಟ ನೋಡುವ ತಾಳ್ಮೆ ಹೊಂದಿಲ್ಲ. ಅವರಿಗೆ ಹರಕೆ ತೀರಿದರಾಯಿತು, ಪ್ರಸಂಗ, ಕಲಾವಿದ ಯಾರೆ ಇದ್ದರು ತೊಂದರೆ ಇಲ್ಲ ಅನ್ನುತ್ತಾರೆ. ಈ ಮಾತಿಗೆ ಅಪವಾದವೂ ಇದ್ದು ಕೆಲವಡೆ ಹರಕೆದಾರರು ಇಂತಹದ್ದೆ ಪ್ರಸಂಗ ಆಡಲೇಬೇಕು ಎಂದು ಮೇಳದವರಿಗೆ ಪಟ್ಟು ಹಿಡಿಯುವವರಿದ್ದಾರೆ. ಅಂತಹ ಪ್ರಸಂಗಗಳನ್ನು ನೋಡಲೆಂದು ಪ್ರಜ್ಞಾವಂತ ಪ್ರೇಕ್ಷಕರು ಆಗಮಿಸುತ್ತಾರೆ. ದುರಂತ ಎಂದರೆ ನಮ್ಮ ಯುವ ಕಲಾವಿದರಿಗೆ ಸವಾಲಿನ ಪ್ರಸಂಗಗಳಿಗೆ ಜೀವ ತುಂಬಲು ಸಾಧ್ಯವಾಗದೆ ಪ್ರೇಕ್ಷಕರು ನಿರಾಶರಾಗುತ್ತಿದ್ದಾರೆ ಎಂದರು.
ಕಾಲಮಿತಿ ಪ್ರೇಕ್ಷಕರಿಗೆ ಅನುಕೂಲವಾಯಿತುಹರಕೆ ಆಟಗಳನ್ನಾಡುವ ಧರ್ಮಸ್ಥಳ ಮೇಳ ಕಾಲಮಿತಿ ಆಟಗಳನ್ನು ಆರಂಭಿಸಿದ ಮೇಲೆ ಎಂದೂ ಪ್ರೇಕ್ಷಕರ ಕೊರತೆಯಾಗಿಲ್ಲ. ಸಂಪೂರ್ಣ ಆಟವನ್ನು ಪ್ರೇಕ್ಷಕರು ಸವಿಯುತ್ತಿದ್ದಾರೆ. ಹಿಂದೆ ಬೈಕ್ ಕಾರು, ಆಟೋ ರಿಕ್ಷಾಗಳು ಹೊಂದಿರದ ಕಾಲದಲ್ಲಿ ಸಂಪೂರ್ಣ ಆಟವನ್ನು ಅನಿವಾರ್ಯವಾಗಿ ವೀಕ್ಷಿಸುತ್ತಿದ್ದರು. ಈಗಿನ ಜಂಜಾಟದ ನಡುವೆ ಒಂದು ಗಂಟೆಯವರೆಗೆ ಪ್ರೇಕ್ಷಕ ನಿಲ್ಲುವುದು ಕಷ್ಟ . ಹೀಗಾಗಿ ಕಾಲಮಿತಿ ವರದಾನವಾಗಿದೆ. ಇದೀಗ ತೆಂಕು ಬಡಗಿನ ಹಲವು ಮೇಳಗಳು ಕಾಲಮಿತಿ ಪ್ರದರ್ಶನಕ್ಕೆ ಒಗ್ಗಿಕೊಳ್ಳುತ್ತಿವೆ. ಕಲೆಕ್ಷನ್ ಮಾಡಿ ಪೇಟೆಗಳಲ್ಲಿ ಆಟ ಮಾಡುವ ಬಯಲಾಟದ ಮೇಳಗಳಿಗೆ ಕಾಲಮಿತಿ ಅನಿವಾರ್ಯವಾಗಿದ್ದು, ಪ್ರದರ್ಶನಕ್ಕೆ ಸಾಕ್ಷಿಯಾಗುವ ಪ್ರೇಕ್ಷಕರು 12 ಗಂಟೆ ದಾಟಿದ ಬಳಿಕ ರಂಗಸ್ಥಳದ ಎದುರು ನಿಲ್ಲುವುದು ದೂರದ ಮಾತು. ಪೌರಾಣಿಕವಾಗಿರಲಿ, ನೂತನ ಪ್ರಸಂಗವಿರಲಿ ಚುಟುಕಾದ ಅಖ್ಯಾನವೊಂದನ್ನು ಕಾಲಮಿತಿಯೊಳಗೆ ಸವಿಯಲು ಮಾತ್ರ ಪ್ರೇಕ್ಷಕ ಸಿದ್ಧ. ವಿಶೇಷವೆಂದರೆ ಹೊಸ ಪ್ರಸಂಗವಾಗಿದ್ದಲ್ಲಿ , ದೈವ ಭೂತಗಳ ಅಬ್ಬರವಿದ್ದರೆ ಮಾತ್ರ ಬಯಲಾಟ ಮೇಳಗಳ ಎದುರು ಪ್ರೇಕ್ಷಕರ ಸಂಖ್ಯೆ ಹೆಚ್ಚು. ಪೌರಾಣಿಕ ಪ್ರಸಂಗ ಎಂದು ತಿಳಿದರೆ ಪ್ರೇಕ್ಷಕರು ಬೆರಳೆಣಿಕೆಯಷ್ಟು ಮಾತ್ರ!. ಸಮಾರಂಭದಲ್ಲಿ,ಜಾತ್ರೆಗಳಲ್ಲಿ ನಡೆಯುವ ಸಂಯೋಜಿತ ಕಾರ್ಯಕ್ರಮಗಳಿಗೆ ಈಗ ಪ್ರೇಕ್ಷಕರ ಕೊರತೆ ಇಲ್ಲ. ತಾರಾ ವರ್ಚಸ್ಸು ಇರುವ ಕಲಾವಿದರಿರುವ ಪೌರಾಣಿಕ ಆಖ್ಯಾನಗಳ ಪ್ರದರ್ಶನಗಳಿಗೆ ಭಾರೀ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರುತ್ತಿರುವುದು, ಇಂತಹ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜನೆಗೊಳ್ಳುತ್ತಿರುವುದು ಸಂತಸದ ವಿಚಾರ. ಕರಾವಳಿಯಲ್ಲಿ ವ್ಯಾಪಿಸಿರುವ ತೆಂಕು ಮತ್ತು ಬಡಗುತಿಟ್ಟಿನಲ್ಲಿ ಪ್ರೇಕ್ಷಕರಾಗಿ ಬಂದ ಅನೇಕರು ಕಲಾಸಕ್ತರಾಗಿ ವೃತ್ತಿ ಕಲಾವಿದರಾದವರೂ ಹಲವರಿದ್ದಾರೆ. ರಂಗದ ಎದುರು ಕುಳಿತವರ ಸಾಲಿನಲ್ಲಿ ಪಾಮರ ಎಂದು ಪರಿಗಣಿಸಲ್ಪಡುವವ ಮುಂದೊಂದು ದಿನ ಉತ್ತಮ ವಿಮರ್ಶಕರೂ ಆದವರಿದ್ದಾರೆ. ಕಲಾವಿದನೊಬ್ಬರ ಶ್ರಮಕ್ಕೆ ಪ್ರಚಾರವನ್ನೂ ನೀಡುವ ಮಹತ್ವದ ಕಾರ್ಯ ಮಾಡುವವರು ಪ್ರೇಕ್ಷಕರು. ಮೇಳದ ಮುಂದಿನ ಪ್ರದರ್ಶನಕ್ಕೆ ಪ್ರೇಕ್ಷಕರನ್ನು ಹೆಚ್ಚಿಸುವ, ಇಲ್ಲ ಕಡಿಮೆ ಮಾಡುವ ಎಲ್ಲಾ ಶಕ್ತಿ ಓರ್ವ ಪ್ರೇಕ್ಷಕನಲ್ಲಿದೆ. ಉತ್ತಮ ಪ್ರದರ್ಶನಕ್ಕೆ ಸಾಕ್ಷಿಯಾದ ಪ್ರೇಕ್ಷಕ ಖಂಡಿತ ಇನ್ನೊಬ್ಬ ಕಲಾಭಿಮಾನಿಗಳ ಬಳಿ ಕಲಾವಿದರ ಶ್ರಮದ ಕುರಿತು ಹೇಳಿಕೊಳ್ಳದೆ ಇರಲಾರ. ಹೀಗಾಗಿ ಕಲಾವಿದರು ಪ್ರತಿಯೊಬ್ಬ ಪ್ರೇಕ್ಷಕನ ಮೇಲೆ ಅಭಿಮಾನ ಹೊಂದಬೇಕಾಗಿರುವುದು ಅನಿವಾರ್ಯ. ಲೋಕೋ ಭಿನ್ನ ರುಚಿ ಎನ್ನುವ ಮಾತಿನಂತೆ ಒಬ್ಬೊಬ್ಬ ಪ್ರೇಕ್ಷಕನಿಗೆ ಒಂದೊಂದು ನಿರೀಕ್ಷೆಗಳು, ಅಭಿರುಚಿ ಇರುತ್ತದೆ. ಕೆಲವರು ನಾಟ್ಯ(ಹೊಡತ), ಕೆಲವರಿಗೆ ಪದ್ಯಗಳು, ಇನ್ನು ಕೆಲ ಪ್ರೇಕ್ಷಕರಿಗೆ ಹಾಸ್ಯವೇ ಬೇಕಾಗುತ್ತದೆ. ಇವುಗಳೆಲ್ಲದರ ನಡುವೆ ಹೊಸ ಪ್ರೇಕ್ಷಕರಿಗೆ ನಿರಾಸೆಯಾಗದಂತೆ ಹಳೆ ತಲೆಮಾರಿನ ಪ್ರೇಕ್ಷಕರಿಗೆ ನೋವಾಗದಂತೆ ಪ್ರದರ್ಶನಗಳನ್ನು ನೀಡುವುದು ಈಗಿನ ಕಲಾವಿದರಿಗೆ ನಿಜವಾಗಿಯೂ ಒಂದು ಸವಾಲಾಗಿದೆ.