ಹುಣಸೂರು: ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ಶಾಸಕ ಎಚ್.ಪಿ.ಮಂಜುನಾಥರ 50ನೇ ಹುಟ್ಟು ಹಬ್ಬದ ಸಂಭ್ರಮ ಅಂಗವಾಗಿ ಸ್ನೇಹಜೀವಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಇ-ಡಿಜಿಟಲ್ ಚಾನಲ್‌ನ ಉದ್ಘಾಟನೆ ಅಂಗವಾಗಿ ಆಯೋಜಿಸಿದ್ದ ಸಂಜೆಯ ಸ್ನೇಹ ಸಂಭ್ರಮವೆಂಬ ವಿಶಿಷ್ಟ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಯುವ ಸ್ಪೀಡ್ ಪೇಂಟರ್ ವಿಲಾಸ್‌ನಾಯಕ್ ತಮ್ಮ ಕೈಚಳಕ ಪ್ರದರ್ಶಿಸಿ ನೆರೆದಿದ್ದವರನ್ನು ಮಂತ್ರ ಮಗ್ನರಾಗಿಸಿದರು.
ಮೈದಾನದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಮೊದಲಿಗೆ ಕಪ್ಪು ಹಲಗೆಯ ಮೇಲೆ ತಮ್ಮ ಕುಂಚದಿಂದ ಕ್ಷಣಾರ್ಧದಲ್ಲಿ ಸಾಯಿಬಾಬರ ಚಿತ್ರ ಬಿಡಿಸಿ, ಒಮ್ಮೆಲೆ ಬಣ್ಣ ತುಂಬಿದ ರೀತಿ ನೋಡುಗರನ್ನು ಬೆರಗುಗೊಳಿಸಿತ್ತು.
ಆ ನಂತರದಲ್ಲಿ ದೇಶಕಾಯುವ ಸೈನಿಕರು ಬಾವುಟ ಹಿಡಿದು ಮುನ್ನುಗ್ಗುವ ದೇಶಪ್ರೇಮದ ಚಿತ್ರವನ್ನು ಉಲ್ಟಾ ಬಿಡಿಸಿ, ನೋಡುತ್ತಿದ್ದಂತೆ ಉಲ್ಟಾವನ್ನು ಸರಿಪಡಿಸಿದಾಗಲಂತೂ ಕಿಕ್ಕಿರಿದ ಜನ ಹೋ ಎಂದು ಕಿರುಚುತ್ತಾ ಅಭಿಮಾನ ವ್ಯಕ್ತ ಪಡಿಸಿದರು. ಕೊನೆಯಲ್ಲಿ ಶಾಸಕ ಮಂಜುನಾಥರ ಚಿತ್ರವನ್ನು ಕೇವಲ 2 ನಿಮಿಷಗಳಲ್ಲಿ ಆಕರ್ಷಕವಾಗಿ ಬಿಡಿಸಿದಾಗ ವಿಲಾಸ್ ನಾಯಕ್‌ರ ಕೈಚಳಕಕ್ಕೆ ಶಿಳ್ಳೆ ಹಾಕುತ್ತಾ ಅಭಿಮಾನ ವ್ಯಕ್ತಪಡಿಸಿದರು.
ವಿಲಾಸ್ ನಾಯಕರನ್ನು ಶಾಸಕ ಮಂಜುನಾಥ್ ಆತ್ಮೀಯವಾಗಿ ಸನ್ಮಾನಿಸಿದರಲ್ಲದೆ, ಅವರ ಕಲಾ ನೈಪುಣ್ಯತೆಯನ್ನು ಪ್ರಶಂಸಿಸಿ, ಮಕ್ಕಳಲ್ಲಿ ಹುದುಗಿರುವ ಇಂತಹ ಕಲೆಯನ್ನು ಪ್ರೋತ್ಸಾಹಿಸುವ ಕಾರ್ಯಕ್ಕೆ ಬಳಸುವಂತೆ ಮನವಿ ಮಾಡಿ, ವೈಯಕ್ತಿಕವಾಗಿ 50 ಸಾವಿರ ರೂ ಬಹುಮಾನ ನೀಡಿದರು.
ಜೀ ವಾಹಿನಿಯ ಸರಿಗಮಪ ಖ್ಯಾತಿಯ ಹಾಡುಗಾರರು ತಮ್ಮ ಸಿರಿ ಕಂಠದ ಮೂಲಕ ಅನೇಕ ಹಾಡು ಹಾಡಿ ರಂಜಿಸಿದರೆ, ಹಾಡಿಗೆ ತಕ್ಕಂತೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹಾಗೂ ಹುಣಸೂರು ಬಿಎಸ್‌ಬಿ ಡ್ಯಾನ್ಸ್ ಕೆಫೆ ತಂಡದ ನತ್ಯ ಪಟುಗಳು ನೃತ್ಯ ಪ್ರದರ್ಶಿಸಿದರು. ಮೈಸೂರಿನ ಡೊಳ್ಳು ಕುಣಿತದ ತಂಡವು ಸಹ ಅತ್ಯುತ್ತಮ ಪ್ರದರ್ಶನ ನೀಡಿದರು. ಮಿಮಿಕ್ರಿ ಗೋಪಿ ಸಿನಿಮಾ ನಟರು ಹಾಗೂ ರಾಜಕೀಯ ನಾಯಕರ ಧ್ವನಿ ಅನುಕರಣೆ ಮಾಡಿ ನೆರೆದಿದ್ದವರ ಹೊಟ್ಟೆ ಹುಣ್ಣಾಗುವಂತೆ ನಗಿಸಿದರು.
ಸನ್ಮಾನ: ಜೀರ್‌ದುಂಬೆ ಚಿತ್ರದ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಬಾಲನಟಿ ಬೇಬಿ ಸಿರಿವಾನಳ್ಳಿ ಹಾಗೂ ಖ್ಯಾತ ಚಿತ್ರಕಾರ ವಿಲಾಸ್ ನಾಯಕ್, ನಗರದ ಖ್ಯಾತ ಚಿತ್ರಕಲಾವಿದ ಕಿರಣ್ ಅಪ್ಪಿ, ಚಿತ್ರ ನಿರ್ದೇಶಕ ಸುನೀಲ್‌ಕುಮಾರ್ ದೇಸಾಯಿರನ್ನು ಶಾಸಕ ಮಂಜುನಾಥ್ ಸನ್ಮಾನಿಸಿದರು. ಗಂಗೂಬಾಯಿ ಹಾನಗಲ್ ವಿ.ವಿಯ ಮುಖ್ಯಸ್ಥ ನಿರಂಜನ್‌ವಾನಳ್ಳಿ ಇದ್ದರು.
ಇ-ಚಾನಲ್‌ಗೆ ಚಾಲನೆ: ಸಮಾರಂಭದಲ್ಲಿ ನಗರದಲ್ಲಿ ನೂತನವಾಗಿ ಆರಂಭಗೊಂಡಿರುವ ಇ-ಚಾನಲ್ ಅನ್ನು ಶಾಸಕ ಮಂಜುನಾಥ್ ಹಾಗೂ ಇ-ಚಾನಲ್ ಕರ್ನಾಟಕದ ಎಚಿಡಿ ಸೋಮಶೇಖರ್ ಚಾಲನೆ ನೀಡಿ, ಜನತೆಗೆ ಅಗತ್ಯವಾದ ಅತ್ಯುತ್ತಮ ಕಾರ್ಯಕ್ರಮಗಳು, ಮನೋರಂಜನೆ ನೀಡುವ ಕಾರ್ಯಕ್ರಮಗಳನ್ನು ನೀಡಿರಿ ಎಂದು ಮಾಲೀಕ ನಾಗರಾಜ್ ಹಾಗೂ ಎಚ್.ಪಿ ಅಮರ್‌ನಾಥ್‌ರಿಗೆ ಶುಭಕೋರಿದರು.