ಚಿಕ್ಕಮಗಳೂರು: ಜಿಲ್ಲಾ ಅಮೆಚೂರ್ ಕಬ್ಬಡಿ ಅಸೋಸಿಯೇಷನ್ ಹಾಗೂ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದ ಸುಭಾಷ್ ಚಂದ್ರಬೋಸ್ ಆಟದ ಮೈದಾನದಲ್ಲಿ ಆಯೋಜಿಸಿರುವ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
ಜಿಲ್ಲಾ ಮಟ್ಟದ ಪಂದ್ಯಾವಳಿಯೂ ಎರಡು ದಿನಗಳ ಕಾಲ ಜಿದ್ದಾಜಿದ್ದಿ ಸೆಣಸಾಟ ನಡೆದಿದ್ದು, ಕಡೂರು, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ, ಶೃಂಗೇರಿ, ನರಸಿಂಹರಾಜಪುರ, ಕೊಪ್ಪ, ಅಜ್ಜಂಪುರ ತಾಲೂಕಿನಿಂದ ತಲಾ ಒಂದರಂತೆ ಒಟ್ಟು ಎಂಟು ಕಬಡ್ಡಿ ತಂಡಗಳು ಭಾನುವಾರ ಮತ್ತು ಸೋಮವಾರ ರೋಚಕ ಪ್ರದರ್ಶನ ನೀಡಿದವು.
ಜಿಲ್ಲಾ ಮಟ್ಟದ ಪಂದ್ಯಾವಳಿಯೂ ಭಾನುವಾರ ಮತ್ತು ಸೋಮವಾರ ನಡೆದಿದ್ದು, ಸೋಮವಾರ ನಡೆದ ಪಂದ್ಯದಲ್ಲಿ ಕಡೂರು ಮತ್ತು ಚಿಕ್ಕಮಗಳೂರು ತಂಡಗಳು ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೆಣಸಿದ್ದು, ಪಂದ್ಯದ ಮೊದಲಾರ್ಧದಲ್ಲಿ ಚಿಕ್ಕಮಗಳೂರು ತಂಡ ಮುನ್ನಡೆ ಕಾಯ್ದುಕೊಂಡು ಕಡೂರು ತಂಡವನ್ನು ಸೋಲಿಸುವ ಪ್ರದರ್ಶನ ನೀಡಿತ್ತು. ಆದರೆ ದ್ವಿತೀಯಾರ್ಧದಲ್ಲಿ ಅನಿರೀಕ್ಷಿತ ಪ್ರದರ್ಶನ ನೀಡಿದ ಚೇತನ್ ನೇತೃತ್ವದ ತಂಡ ಚಿಕ್ಕಮಗಳೂರು ತಂಡಕ್ಕೆ ಭಾರೀ ಪೈಪೋಟಿ ನೀಡಿ ಒಂದು ಅಂಕದಿಂದ ಮುನ್ನಡೆ ಸಾಧಿಸಿತು. ಅಂತಿಮ ಕ್ಷಣದಲ್ಲಿ ನಡೆದ ರೋಮಾಂಚನಕಾರಿ ಆಟದಲ್ಲಿ ಕಡೂರು ತಂಡ ಗೆಲುವು ಸಾಧಿಸಿತು.
ಮೂಡಿಗೆರೆ ಹಾಗೂ ಕೊಪ್ಪ ತಂಡಗಳೂ ರೋಚಕ ಪ್ರದರ್ಶನ ನೀಡಿದ್ದು, ಅಂತಿಮ ಕ್ಷಣದಲ್ಲಿ ಮೂಡಿಗೆರೆ ತಂಡ ಕೊಪ್ಪ ತಂಡವನ್ನು ಸೋಲಿಸುವ ಮೂಲಕ ಫೈನಲ್ ಪ್ರವೇಶ ಪಡೆಯಿತು. ಜಿಲ್ಲಾ ಮಟ್ಟದ ವಿಭಾಗದ ಅಂತಿಮ ಪಂದ್ಯ ಮಂಗಳವಾರ ಸಂಜೆ ನಡೆಯಲಿದ್ದು, ಈ ಪಂದ್ಯದಲ್ಲಿ ಕಡೂರು ಹಾಗೂ ಮೂಡಿಗೆರೆ ತಂಡಗಳು ಸೆಣಸಲಿವೆ.
ರಾಜ್ಯ ಮಟ್ಟದ ವಿಭಾಗದ ಪಂದ್ಯಾವಳಿ ಸೋಮವಾರ ರಾತ್ರಿಯಿಂದ ಆರಂಭವಾಗಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಪ್ರಸಿದ್ಧ ತಂಡಗಳು ಪಂದ್ಯಾವಳಿಯಲ್ಲಿ ಸೆಣಸಲಿವೆ. ಸೆಮಿಫೈನಲ್ ಪಂದ್ಯಾವಳಿಗೂ ಮುನ್ನ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರು ಸ್ವರ್ಧಿಗಳಿಗೆ ಶುಭಕೋರಿ ಕೆಲ ಹೊತ್ತು ಪಂದ್ಯ ವೀಕ್ಷಿಸಿದರು. ಅಮೆಚೂರ್ ಕಬ್ಬಡ್ಡಿ ಅಸೋಸಿಯೇಶನ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಆರ್.ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಿಂತಾ ಅನಿಲ್‌ಕುಮಾರ್, ನಗರಸಭೆ ಸದಸ್ಯರಾದ ಎಚ್.ಡಿ.ತಮ್ಮಯ್ಯ, ಟಿ.ರಾಜಶೇಖರ್ ಇನ್ನಿತರರ ಅತಿಥಿಗಳು ಪಂದ್ಯಗಳನ್ನು ವೀಕ್ಷಿಸಿದರು.
ಪ್ರೊ ಕಬಡ್ಡಿಯ ತಮಿಳ್ ತಲೈವಾ ತಂಡದ ಆಟಗಾರ ಸುಕೇಶ್ ದೇವಾಡಿಗ ಹಾಗೂ ದರ್ಶನ್, ಗುಜರಾತ್ ಫಾರ್ಚುನರ್ ತಂಡದ ಸಚಿನ್ ವಿಠuಲ್, ಬೆಂಗಾಲ್ ವಾರಿಯರ್ ತಂಡದ ಮಿಥುನ್ ಗೌಡ, ಯುಪಿ ಯೋಧ ತಂಡದ ಪ್ರಶಾಂತ್ ಕುಮಾರ್ ತಮ್ಮ ಕ್ರೀಡಾ ಪ್ರದರ್ಶನ ನೀಡಲಿದ್ದಾರೆ.