ಹಾನಗಲ್ಲ: ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಹಾನಗಲ್ಲ ಪುರಸಭೆ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಕೊನೆಗೂ ನಡೆದಿದೆ. ಒಟ್ಟು 98 ಮಳಿಗೆಗಳಲ್ಲಿ ಒಂದಕ್ಕೆ ತಡೆಯಾಜ್ಞೆ ಇದ್ದು, ಇನ್ನುಳಿದ 97ರಲ್ಲಿ 56 ಮಳಿಗೆಗಳು ಹರಾಜಾಗಿವೆ. ಈ ಮೂಲಕ ಪುರಸಭೆಗೆ ದಾಖಲೆ ಮಟ್ಟದ ಆದಾಯ ಹರಿದು ಬರಲಿದೆ.
ಇಷ್ಟೊಂದು ಪೈಪೋಟಿ ನಡೆದಿದ್ದು ರಾಜ್ಯ ಪೌರಾಡಳಿತ ಇತಿಹಾಸದಲ್ಲಿ ಇದೇ ಮೊದಲು. ಪಟ್ಟಣದ ಪ್ರಮುಖ ಮಾರುಕಟ್ಟೆ ಪ್ರದೇಶದ ಬಹುತೇಕ ಮಳಿಗೆಗಳು ಪುರಸಭೆಗೆ ಸೇರಿದ್ದು, ಹೀಗಾಗಿ ಮಳಿಗೆಗಳನ್ನು ಪಡೆಯುವಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. 399 ವ್ಯಾಪಾರಸ್ಥರು ಪಾಲ್ಗೊಂಡಿದ್ದರು. ಹೀಗಾಗಿ ಹಾನಗಲ್ಲ ಪುರಸಭೆಗೆ ಬೃಹತ್ ಮೊತ್ತದ ಆದಾಯ ಬರುವ ನಿರೀಕ್ಷೆ ಇದೆ. ಸವಣೂರು ಉಪವಿಭಾಗಾಧಿಕಾರಿ ಹರ್ಷಲ್ ಬೋಯರ್ ನಾರಾಯಣ್‌ರಾವ್ ನೇತೃತ್ವದಲ್ಲಿ ಪುರಸಭೆ ಸಭಾಂಗಣದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಾಗದಂತೆ ಹರಾಜು ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆಯಿತು.
ಎರಡು ದಶಕಗಳಿಂದ ಬಾಡಿಗೆ ಹೆಚ್ಚಿಸಿರಲಿಲ್ಲ. ಹೀಗಾಗಿ ಪುರಸಭೆ ಆದಾಯಕ್ಕೆ ಹೊಡೆತ ಬೀಳುತ್ತಿದೆ ಎಂದು ಪ್ರಶಾಂತ ಮುಚ್ಚಂಡಿ ಸೇರಿದಂತೆ ಯುವಕರ ಗುಂಪು ಇದನ್ನು ಪ್ರಶ್ನಿಸಿ, ಹೊಸದಾಗಿ ಬಹಿರಂಗ ಹರಾಜು ಕರೆಯುವ ಮೂಲಕ ಪುರಸಭೆ ಆದಾಯ ಹೆಚ್ಚಿಸಬೇಕೆಂದು ಕೋರ್ಟ್ ಮೆಟ್ಟಲೇರಿದ್ದರು. ಹೀಗಾಗಿ ಕೋರ್ಟ್ ಆದೇಶ ಪ್ರಕಾರ ಈಗ ಹರಾಜು ಪ್ರಕ್ರಿಯೆ ನಡೆದಿದೆ. ಈ ಮೊದಲು ತಿಂಗಳಿಗೆ ಕೇವಲ 40 ರಿಂದ 60 ಸಾವಿರ ಬರುತ್ತಿದ್ದ ಆದಾಯ ಇನ್ಮುಂದೆ 8 ರಿಂದ 10 ಲಕ್ಷ ರೂ. ಬರುವ ನಿರೀಕ್ಷೆ ಇದೆ.
ಹರಾಜು ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಅತಿ ಹೆಚ್ಚು ಮೊತ್ತಕ್ಕೆ ಮಳಿಗೆಗಳು ಹರಾಜುಗುತ್ತಿದ್ದವು. ನಂತರ ಕಡಿಮೆ ಮೊತ್ತಕ್ಕೆ ಬಿಡ್ ಕೂಗಿದರು. ಅಲ್ಲದೆ ಒಂದೇ ಸಾಲಿನಲ್ಲಿರುವ ಮಳಿಗೆಗಳಲ್ಲಿ ಒಂದು ಮಳಿಗೆ 40 ಸಾವಿರಕ್ಕೆ ಬಿಡ್ ಆದರೆ, ಅದರ ಪಕ್ಕದ ಮಳಿಗೆ ಕೇವಲ 7 ಸಾವಿರಕ್ಕಿಂತ ಹೆಚ್ಚಿಗೆ ಕೂಗಲಿಲ್ಲ. ಹೀಗಾಗಿ ಉಪವಿಭಾಗಾಧಿಕಾರಿಗಳು ಹರಾಜು ಪ್ರಕ್ರಿಯೆಯನ್ನು ಮರುದಿನಕ್ಕೆ ಮುಂದೂಡಿದರು.
ಹರಾಜು ಪ್ರಕ್ರಿಯೆ ಷರತ್ತಿನಲ್ಲಿರುವಂತೆ ವಿಕಲಚೇತನರಿಗೆ ಮೀಸಲಿರುವ ಮಳಿಗೆಗಳ ಹರಾಜು ಪ್ರಕ್ರಿಯೆಯಲ್ಲಿ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಆದರೆ ಎರಡಕ್ಕಿಂತ ಹೆಚ್ಚು ಜನ ಭಾಗವಹಿಸಿದ್ದರಿಂದ ಸಾಮಾನ್ಯ ಮಳಿಗೆಗಳಂತೆ ಹರಾಜು ಮಾಡಲಾಯಿತು. ಇದು ವಿಕಲಚೇತನರ ಆಕ್ರೋಶಕ್ಕೆ ಕಾರಣವಾಯಿತು. ಕಾನೂನಾತ್ಮಕ ಸಲಹೆ ಪಡೆದು ಮುಂದಿನ ಪ್ರಕ್ರಿಯೆ ಮಾಡಲಾಗುವುದು ಎಂದು ಸಮಜಾಯಿಸಿ ನೀಡಲಾಯಿತು.