Advertisement

ಕತ್ತಲಲ್ಲೇ ನಡೆಯುತ್ತಾ ಅಮರೇಶ್ವರ ಜಾತ್ರೆ?

12:53 PM Feb 16, 2020 | Naveen |

ಔರಾದ: ಪ್ರತಿ ವರ್ಷಕ್ಕೊಮ್ಮೆ ಉದ್ಭವಲಿಂಗ ಅಮರೇಶ್ವರ ಜಾತ್ರೆ ಸಮಯದಲ್ಲಿ ಪಟ್ಟಣದ ಮುಖ್ಯರಸ್ತೆಯಲ್ಲಿನ ವಿದ್ಯುತ್‌ ಕಂಬಗಳಿಗೆ ಬಲ್ಬ್ ಹಾಕುವ ಪಟ್ಟಣ ಪಂಚಾಯತಿ ಅಧಿಕಾರಿಗಳು ಈ ಬಾರಿ ಸ್ವಚ್ಛತೆ ಹಾಗೂ ಬಲ್ಬ್ ಹಾಕದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

Advertisement

ಔರಾದ ತಾಲೂಕು ಕೇಂದ್ರಸ್ಥಾನದಲ್ಲಿರುವ ಉದ್ಭವಲಿಂಗ ಹಾಗೂ ಕಲ್ಯಾಣ ಚಾಲುಕ್ಯರ ಆಳ್ವಿಕೆಯಲ್ಲಿ ಗುರುತಿಸಿಕೊಂಡ ಅಮರೇಶ್ವರ ಜಾತ್ರೆ ಫೆ.19ರಿಂದ ಆರಂಭವಾಗಲಿದೆ. ಆದರೆ ಪಪಂ ಅಧಿಕಾರಿಗಳು ಇನ್ನೂ ಮುಖ್ಯ ರಸ್ತೆಯಲ್ಲಿನ ಕಂಬಗಳಿಗೆ ಬಲ್ಬ್ ಗಳನ್ನು ಅಳವಡಿಸದ ಕಾರಣ ಕತ್ತಲೆಯಲ್ಲಿಯೇ ಜಾತ್ರೆ ಆಚಾರಿಸುವುದಾ? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಪಪಂ ಚುನಾವಣೆಗಳು ಮುಗಿದು ವರ್ಷ ಕಳೆಯುತ್ತ ಬಂದರೂ ಇನ್ನೂ ಪಪಂಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮುಗಿದಿಲ್ಲ. ಸರ್ಕಾರದಿಂದ ಕೆಟಗಿರಿ ಬಾರದಿರುವ ಹಿನ್ನೆಲೆಯಲ್ಲಿ ಪೆಂಡಿಂಗ್‌ ಉಳಿದುಕೊಂಡಿದೆ ಎನ್ನುವುದು ಒಂದೆಡೆಯಾಗಿದ್ದರೆ, ಇನ್ನೊಂದಡೆ ಪಪಂ ಸದಸ್ಯರ ಕೈಗೆ ಪೂರ್ಣ ಪ್ರಮಾಣದ ಅಧಿಕಾರ ಸಿಕ್ಕಿಲ್ಲ. ಹೀಗಾಗಿ ಪಪಂ ಮುಖ್ಯಾಧಿಕಾರಿಗಳು ನಮ್ಮ ಮಾತಿಗೆ ಬೆಲೆ ನೀಡುತ್ತಿಲ್ಲ ಎನ್ನುವುದು ಸದಸ್ಯರ ಅಳಲು.

ಏಳು ದಿನಗಳ ಕಾಲ ನಡೆಯುವ ಉದ್ಭವಲಿಂಗ ಅಮರೇಶ್ವರ ಜಾತ್ರೆಗೆ ಔರಾದ ತಾಲೂಕು ಸೇರಿದಂತೆ ನೇರೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಿಂದ ಭಕ್ತರು ಬರುತ್ತಾರೆ. ಅಲ್ಲದೆ ಅಮರೇಶ್ವರನ ರಥೋತ್ಸವ ಕೂಡ ರಾತ್ರಿ ಸಮಯದಲ್ಲಿಯೇ ನಡೆಯುತ್ತದೆ. ಕತ್ತಲೆಯಲ್ಲಿ ರಥ ಸಂಚರಿಸುವುದು, ನಾಟಕ ಸೇರಿದಂತೆ ಇತರ ಮನರಂಜನೆ ಕಾರ್ಯಕ್ರಮ ವೀಕ್ಷಿಸಲು ಬರುವ ಜನರಿಗೆ ಕಳ್ಳರ ಕಾಟ ತಪ್ಪಿದ್ದಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.

ನಾಯಕರಲ್ಲಿ ಉತ್ಸಾಹದ ಕೊರತೆ: ಉದ್ಭವಲಿಂಗ ಅಮರೇಶ್ವರ ಜಾತ್ರೆ ಆಚರಣೆಗೆ ಈ ಬಾರಿ ರಾಜಕೀಯ ನಾಯಕರಲ್ಲಿ ಉತ್ಸಾಹದ ಕೊರತೆ ಎದ್ದು ಕಾಣುತ್ತಿದೆ. ಬೀದರ ಸಂಸದ ಭಗವಂತ ಖೂಬಾ ಪಟ್ಟಣದ ನಿವಾಸಿಯಾಗಿದ್ದರೂ ಜಾತ್ರೆಗೆ ಅಗತ್ಯ ಸೌಕರ್ಯ ಹಾಗೂ ಬೆನ್ನೆಲುಬಾಗಿ ನಿಲ್ಲುತ್ತಿಲ್ಲ. ಇನ್ನೂ ಸಚಿವ ಪ್ರಭು ಚವ್ಹಾಣ ಜಾತ್ರೆ ಕಾರ್ಯಕ್ರಮಕ್ಕೆ ಬಂದು ಹೋಗುತ್ತಾರೆ. ಪ್ರತಿವರ್ಷ ದಾಸೋಹಕ್ಕೆ ಅಗತ್ಯ ಸೌಕರ್ಯ ನೀಡುತ್ತಾರೆ. ಪಪಂ ಸದಸ್ಯರು ನಮ್ಮ ಕೈಯಲ್ಲಿ ಅ ಧಿಕಾರವಿಲ್ಲವೆಂದು ಕೈ ಕಟ್ಟಿ ಕುಳಿತಿದ್ದಾರೆ.

ಬಲ್ಬ್ ಹಾಕುವುದು ಯಾವಾಗ?: ಅಮರೇಶ್ವರ ಜಾತ್ರೆಗೆ ದಿನಗಣನೆ ಶುರುವಾಗಲಿದೆ. ಆದರೆ ಪಪಂ ಅಧಿ  ಕಾರಿಗಳು ದೇವಸ್ಥಾನದ ಸುತ್ತಮುತ್ತ ಹಾಗೂ ಪಟ್ಟಣದ ಮುಖ್ಯರಸ್ತೆ ಸೇರಿದಂತೆ ದೇವರು ತಿರುಗುವ ರಸ್ತೆಯಲ್ಲಿ ಸ್ವಚ್ಛತೆ ಮಾಡಿಲ್ಲ. ಅದರಂತೆ ಮುಖ್ಯ ರಸ್ತೆ ಸೇರಿದಂತೆ ಪ್ರಮುಖ ಬಡಾವಣೆಯಲ್ಲಿನ ವಿದ್ಯುತ್‌ ಕಂಬಗಳಿಗೆ ಬಲ್ಬ್ ಹಾಕದಿರುವುದರಿಂದ ಕತ್ತಲುಮಯ ವಾತಾವರಣವಿದೆ. ಇದರಿಂದ ರಾತ್ರಿಯಲ್ಲಿ ಕಳ್ಳತನ ಪ್ರಕರಣ ಹೆಚ್ಚಾಗಲಿವೆ ಎನ್ನುವುದು ಜನರ ಮಾತು.

Advertisement

ಪಟ್ಟಣದಲ್ಲಿ ವಿದ್ಯುತ್‌ ಕಂಬಗಳಿಗೆ ಬಲ್ಬ್ ಗಳು ಇಲ್ಲದೆ ಪಟ್ಟಣವೇ ಕತ್ತಲುಮಯವಾಗಿದೆ. ಮುಖ್ಯಾಧಿ ಕಾರಿಗೆ ತಿಳಿಸಲು ಕಚೇರಿಗೆ ಹೋದರೆ ಕಚೇರಿಯಲ್ಲಿ ಅವರು ಇರುವುದಿಲ್ಲ. ಫೋನ್‌ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಜಾತ್ರೆಯ ಸಮಯದಲ್ಲಾದರೂ ಕೆಲಸ ಮಾಡಿ. „ಆನಂದ ದ್ಯಾಡೆ,
   ಯುವಕ

ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿದೆ. ದೇವಸ್ಥಾನ, ಮುಖ್ಯ ರಸ್ತೆ ಮತ್ತು ದೇವರು ತಿರುಗುವ ರಸ್ತೆಯಲ್ಲಿನ ಕಂಬಗಳಿಗೆ ಬಲ್ಬ್ ಹಾಕುವಂತೆ ಮನವಿ ಮಾಡಿದ್ದರೂ ಹಾಕಿಲ್ಲ. ಜನರಿಗೆ ಭಯ ಪಡದಿದ್ದರೂ ದೇವರಿಗಾದರೂ ಭಯ ಪಡಿ.
„ಬಸವರಾಜ ದೇಶಮುಖ,
ದೇವಸ್ಥಾನ ಕಮಿಟಿ ಅಧ್ಯಕ್ಷ

ಜಾತ್ರೆಯಲ್ಲಿ ಬೇರೆ ರಾಜ್ಯ ಹಾಗೂ ತಾಲೂಕಿನ ಮೂಲೆ ಮೂಲೆಗಳಿಂದ ಜನರು ಬರುತ್ತಾರೆ. ಸ್ವಚ್ಛತೆ ಹಾಗೂ ಬೀದಿ ದೀಪ ಅಳವಡಿಸುವಂತೆ ನಾಲ್ಕು ಬಾರಿ ಮನವಿ ಮಾಡಿದ್ದೇವೆ. ಆದರೆ ಅಧಿಕಾರಿ ನಮ್ಮ ಮಾತಿಗೆ ಕಿಮ್ಮತ್ತು ನೀಡುತ್ತಿಲ್ಲ.
„ಹೆಸರು ಹೇಳಲಿಚ್ಛಿಸದ ಪಪಂ ಸದಸ್ಯ

„ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next