Advertisement

ಆಕರ್ಷಕ ಪಂಜಿನ ಕವಾಯತು

11:44 AM Oct 20, 2018 | |

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ನಡೆದ ಆಕರ್ಷಕ ಪಂಜಿನ ಕವಾಯತು ನೆರೆದಿದ್ದ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಿತು. ದಸರೆಯ ಕೊನೆಯ ಕಾರ್ಯಕ್ರಮವಾಗಿ ನಡೆದ ಕಂಜಿನ ಕವಾಯತು ಕಾರ್ಯಕ್ರಮದೊಂದಿಗೆ ವೈಭವದ ದಸರಾ ಮಹೋತ್ಸವಕ್ಕೆ ಸಂಭ್ರಮದ ತೆರೆಬಿದ್ದಿತು. 

Advertisement

ಚಿನ್ನದ ಅಂಬಾರಿ ಹೊತ್ತ ಅರ್ಜುನ ಬನ್ನಿಮಂಟಪ ತಲುಪುತ್ತಿದ್ದಂತೆ ಪಂಜಿನ ಕವಾಯತು ಕಾರ್ಯಕ್ರಮದ ಸಂಭ್ರಮಕ್ಕೆ ಚಾಲನೆ ದೊರೆಯಿತು. ರಾತ್ರಿ 8 ಗಂಟೆಗೆ ಆರಂಭಗೊಂಡ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜೂಭಾಯಿ ವಾಲಾ ಅವರು ನಗರ ಪೊಲೀಸ್‌ ಆಯುಕ್ತ ಎ.ಸುಬ್ರಹ್ಮಣ್ಯೇಶ್ವರ ರಾವ್‌ ಬೆಂಗಾವಲಿನಲ್ಲಿ ವಿವಿಧ ತುಕಡಿಗಳ ಪರಿಶೀಲನೆ ನಡೆಸಿದರು. 

ಇದಾದ ನಂತರ ಮೈದಾನದಲ್ಲಿ 21 ಕುಶಾಲ ತೋಪು ಸಿಡಿಸುವ ಮೂಲಕ ರಾಷ್ಟ್ರ ಗೌರವ ಸಮರ್ಪಿಸಲಾಯಿತು. ಬಳಿಕ ಪೊಲೀಸ್‌ ತುಕಡಿಗಳು, ಎನ್‌ಸಿಸಿಯ ಭೂಸೇನೆ, ವಾಯು ಸೇನೆ, ನೌಕಾದಳ ಹಾಗೂ ಅಶ್ವರೋಹಿ ಪಡೆ ಸಿಬ್ಬಂದಿ ಪೊಲೀಸ್‌ ವಾದ್ಯವೃಂದ ಹಿಮ್ಮೇಳದೊಂದಿಗೆ ಶಿಸ್ತುಬದ್ಧ ಪಥಸಂಚಲನ ನಡೆಸಿ ನೋಡುಗರನ್ನು ಚಕಿತಗೊಳಿಸಿದರು. ನಂತರ ಗಣೇಶ್‌ ಈಶ್ವರ್‌ ಭಟ್‌ ನೇತೃತ್ವದ ಗಾಯಕರ ತಂಡ ನಾಡಗೀತೆ ಪ್ರಸ್ತುತ ಪಡೆಸಿದರು. 

“ಶ್ವೇತಾಶ್ವ’ ಮ್ಯಾಜಿಕ್‌: ಪಂಜಿನ ಕವಾಯತು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾದ ಸಾಹಸಮಯ ಬೈಕ್‌ ರೈಡಿಂಗ್‌ ನೆರೆದಿದ್ದ ಪ್ರೇಕ್ಷಕರಿಗೆ ರೋಮಾಂಚನಕಾರಿ ಅನುಭವ ಉಣಬಡಿಸಿತು. “ಶ್ವೇತಾಶ್ವ’ ಹೆಸರಿನ ತಂಡದಲ್ಲಿದ್ದ ಭೂದಳದ 30 ಮಂದಿ ಯೋಧರು ತಮ್ಮ ಮಿಂಚಿನ ವೇಗದ ರಾಯಲ್‌ ಎನ್ಫಿàಲ್ಡ್‌ ಬೈಕ್‌ಗಳ ಮೂಲಕ ನೀಡಿದ ಸಾಹಸ ಪ್ರದರ್ಶನ ಎಲ್ಲರ ಹುಬ್ಬೇರುವಂತೆ ಮಾಡಿತು.

ಮೈದಾನದಲ್ಲಿ ಅಂದಾಜು 20 ನಿಮಿಷಗಳ ಸಾಹಸಮಯ ಬೈಕ್‌ ರೈಡಿಂಗ್‌ ನಡೆಸಿದ ಯೋಧರು ತರಾವರಿ ಕಸರತ್ತು ಪ್ರದರ್ಶಿಸುವ ಮೂಲಕ ಮೈನವಿರೇಳಿಸುವಂತೆ ಮಾಡಿದರು. ಏಳು ಬೈಕ್‌ಗಳ ಮೇಲೆ 30 ಜನ ಯೋಧರು ರಾಷ್ಟ್ರಧ್ವಜ ಹಿಡಿದು ಸಾಗಿದ್ದು, ಜನರ ಪ್ರಶಂಸೆಗೆ ಪಾತ್ರವಾಯಿತು. 

Advertisement

ಟೆಂಟ್‌ಪೆಗ್ಗಿಂಗ್‌ ಸೆಳೆತ: ನಂತರ ಅಶ್ವರೋಹಿ ಪಡೆಯ ಸದಸ್ಯರು ನಡೆಸಿಕೊಟ್ಟ ಟೆಂಟ್‌ ಪೆಗ್ಗಿಂಗ್‌ ಎಲ್ಲರನ್ನು ರಂಜಿಸಿತು. 15 ನಿಮಿಷಗಳ ಕಾಲ ನಡೆದ ಟೆಂಡ್‌ ಪೆಗ್ಗಿಂಗ್‌ ಪ್ರದರ್ಶನದಲ್ಲಿ ಪೊಲೀಸರು ಶರವೇಗದಲ್ಲಿ ಬಂದು ಟೆಂಟ್‌ ಪೆಗ್ಗಿಂಗ್‌ ಮಾಡುವ ಮೂಲಕ ಸಾಹಸ ಪ್ರದರ್ಶಿಸಿದರು. ವೇಗ ಮತ್ತು ಅಶ್ವರೋಹಿಪಡೆ ಸಿಬ್ಬಂದಿಯ ಚಾಕಚಕ್ಯತೆಗೆ ಸಾಕ್ಷಿಯಾಯಿತು. 

ಸಾಂಸ್ಕೃತಿಕ ಮೆರಗು: ರೋಮಾಂಚನಕಾರಿ ಬೈಕ್‌ ರೈಡಿಂಗ್‌, ಟೆಂಟ್‌ಪೆಗ್ಗಿಂಗ್‌ ಪ್ರದರ್ಶನದ ನಡುವೆ ಬನ್ನಿಮಂಟಪದ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಿತು. ಕಲಾತಂಡಗಳ ಸದಸ್ಯರು, ಮಕ್ಕಳು ವಿವಿಧ ಹಾಡುಗಳಿಗೆ ಹೆಜ್ಜೆಹಾಕುವ ಮೂಲಕ ಎಲ್ಲರನ್ನು ರಂಜಿಸಿದರು. 

ಪಂಜಿನ ಕವಾಯತು: ಬನ್ನಿಮಂಟಪ ಮೈದಾನದಲ್ಲಿ ನಡೆದ ಎಲ್ಲಾ ಕಾರ್ಯಕ್ರಮಗಳು ಮುಕ್ತಾಯಗೊಂಳ್ಳುತ್ತಿದ್ದಂತೆ ಶತಮಾನಗಳ ಇತಿಹಾಸವಿರುವ ಪಂಜಿನ ಕವಾಯತು ಪ್ರದರ್ಶನ ರೋಮಾಂಚನಗೊಳಿಸಿತು. ರಾಜ್ಯ ಪೊಲೀಸ್‌ ಪಡೆಯ 300ಕ್ಕೂ ಹೆಚ್ಚು ಪೊಲೀಸ್‌ ಪ್ರಶಿಕ್ಷಣಾರ್ತಿಗಳು ಆಕರ್ಷಕ ಪ್ರದರ್ಶನ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಕವಾಯತಿನಲ್ಲಿ ಮೈಸೂರು ದಸರಾ, ಕರ್ನಾಟಕ ಪೊಲೀಸ್‌, ವೆಲ್ಕಮ್‌ ಟು ಆಲ್‌, ಜೈ ಚಾಮುಂಡಿ, ಜೈ ಹಿಂದ್‌ ಹಾಗೂ ಸೀ ಯೂ ಇನ್‌ 2019 ಎಂಬ ಅಕ್ಷರಗಳನ್ನು ರೂಪಿಸುವ ಮೂಲಕ ದಸರಾಗೆ ಅದ್ಧೂರಿ ತೆರೆ ಎಳೆದರು. ಸಮಾರಂಭದಲ್ಲಿ ದಸರಾ ಉದ್ಘಾಟಕರಾದ ಡಾ. ಸುಧಾಮೂರ್ತಿ, ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್‌, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next