ಸುಬ್ರಹ್ಮಣ್ಯ: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಕೈಕಂಬ ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬೀದಿ ನಾಟಕ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿದರು.
ಕೈಕಂಬ ಶಾಲೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಕಂಬ ಒಕ್ಕೂಟದ ಆಶ್ರಯದಲ್ಲಿ ಗುರುವಾರ “ಪರಿಸರ ಕಡೆಗೆ ನಮ್ಮ ನಡಿಗೆ’ ಘೋಷವಾಕ್ಯದ ಜತೆಗೆ “ಸ್ವಚ್ಛಮೇವ ಜಯತೇ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಸಿ ನೆಡುವ ಮೂಲಕ ಶ್ರೀ ಕ್ಷೇ.ಧ.ಗ್ರಾ. ಯೋಜನೆ ಕೈಕಂಬ ಒಕ್ಕೂಟದ ಅಧ್ಯಕ್ಷ ಲೋಕನಾಥ್ ಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಶಾಲಾ ಮಕ್ಕಳು ಗುಂಡ್ಯ-ಸುಬ್ರಹ್ಮಣ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಿತ್ತಿ ಪತ್ರಗಳನ್ನು ಹಿಡಿದು ಪರಿಸರ ಉಳಿಸಿ ಎನ್ನುವ ಘೋಷಣೆಗಳನ್ನು ಮೊಳಗಿಸಿ ಜಾಥಾ ನಡೆಸಿದರು. ಬಳಿಕ ವಿದ್ಯಾರ್ಥಿಗಳಿಂದ ಕೈಕಂಬ ಜಂಕ್ಷನ್‌ನಲ್ಲಿ ಬೀದಿ ನಾಟಕ ಪ್ರದರ್ಶನ ನಡೆಯಿತು.
ನಮ್ಮ ಪರಿಸರವನ್ನು ಸ್ವಚ್ಛವಾಗಿಸಿಡೋಣ, ವಿಷಯುಕ್ತ ಆಹಾರ ಕೈಬಿಟ್ಟು ಶುದ್ಧ ಆಹಾರ ಸೇವಿಸುವುದು ಅಗತ್ಯ. ಪರಿಸರ ಮಾಲಿನ್ಯ ರಹಿತವಾಗಿ ಇರಿಸುವುದರಿಂದ ರೋಗ ರುಜಿನಗಳು ಬಾಧಿಸಲಾರವು. ಶುಚಿತ್ವ ಕಾಪಾಡುವ ಮೂಲಕ ಸುಂದರ ಬದುಕು ಕಟ್ಟಿಕೊಳ್ಳಬೇಕು. ಮೂಢನಂಬಿಕೆಯಿಂದ ದೂರವಿದ್ದು ಸ್ವಚ್ಛ ಸುಂದರ ಜೀವನ ಶೈಲಿಯಿಂದ ಸಮಾಜ ಜತೆಗೆ ದೇಶದ ಸಮಗ್ರತೆಗೆ ನಾವೆಲ್ಲರೂ ಕೈ ಜೋಡಿಸಬೇಕು ಎನ್ನುವ ಸಂದೇಶವಿರುವ ಬೀದಿ ನಾಟಕ ಗಮನ ಸೆಳೆಯಿತು. ಹೆದ್ದಾರಿಯಲ್ಲಿ ತೆರಳುತ್ತಿದ್ದವರೆಲ್ಲ ವಾಹನ ನಿಲ್ಲಿಸಿ ಬೀದಿ ನಾಟಕವನ್ನು ವೀಕ್ಷಿಸಿದ್ದು ವಿಶೇಷವಾಗಿತ್ತು. ತೋಟಗಾರಿಕೆ ಇಲಾಖೆಯಿಂದ ನೀಡಲಾಗಿದ್ದ ವಿವಿಧ ಜಾತಿಯ ಸಸಿಗಳನ್ನು ಶಾಲಾ ಆವರಣದಲ್ಲಿ ನೆಡಲಾಯಿತು.
ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸೇವಾನಿರತ ವಿನೋದ್, ಎಸ್‌ಡಿಎಂಸಿ ಅಧ್ಯಕ್ಷ ಮೋಹನ ಪಳ್ಳಿಗದ್ದೆ, ಶ್ರೀ ಕ್ಷೇ.ಧ.ಗ್ರಾ. ಯೋಜನೆ ಕೈಕಂಬ ಒಕ್ಕೂಟದ ಕಾರ್ಯದರ್ಶಿ ತುಳಿಸಿ, ಮುಖ್ಯ ಶಿಕ್ಷಕಿ ಪುಷ್ಪಾವತಿ ಕೆ.ಬಿ., ಶಿಕ್ಷಕಿಯರಾದ ಪವಿತ್ರಾ ಎ., ಅಂಬಿಕಾ ಎನ್., ವನಿತಾ ಕೆ., ಸಿದ್ದಲಿಂಗ ಸ್ವಾಮಿ ಬಿ.ಎಸ್., ಎಸ್‌ಡಿಎಂಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರಸ್ತೆ ಬದಿ ಕಸ ಹಾಕಬೇಡಿ
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳುವ ರಾಜ್ಯ ಹೆದ್ದಾರಿ ಬದಿಯಲ್ಲೇ ಕೈಕಂಬ ಶಾಲೆಯಿದೆ. ಗುರುವಾರ ಬೀದಿ ನಾಟಕ ನಡೆಯುತ್ತಿದ್ದ ಸಂದರ್ಭ ಕೈಕಂಬ ಶಾಲೆಯ ವಿದ್ಯಾರ್ಥಿ ಬಬಿನ್, ಯಾತ್ರಾರ್ಥಿಗಳ ಬಳಿ “ಪ್ಲೀಸ್ ರಸ್ತೆ ಬದಿ ಕಸ ಬಿಸಾಕಬೇಡಿ’ ಎಂದು ಹೇಳುವ ಮೂಲಕ ಗಮನಸೆಳೆದ.