Advertisement
ಪ್ರತೀ ಪರ್ಯಾಯಕ್ಕೂ ರಥಬೀದಿ ಸೇರಿದಂತೆ ನಗರಕ್ಕೆ ನಗರವೇ “ಸಾಂಸ್ಕೃತಿಕ ಲೋಕ’ವೊಂದರಲ್ಲಿ ಮಿಂದೇಳುತ್ತಿರುವ ಅನುಭವ ಜ.17ರ ರಾತ್ರಿ(ಪರ್ಯಾಯ ಮೆರವಣಿಗೆ ಹೊರಡುವ ಹಿಂದಿನ ದಿನ ರಾತ್ರಿ) ಆಗುತ್ತದೆ. ವೈಭವದ ಮೆರವಣಿಗೆ ಕಣ್ತುಂಬಿಸಿಕೊಳ್ಳಲು ಆಗಮಿಸಿ ಜಾಗರಣೆಯಲ್ಲಿರುವ ಸಾವಿರಾರು ಜನರಿಗೆ ಮನೋರಂಜನೆ ಒದಗಿಸಲು ಈ ಬಾರಿಯೂ ಅನೇಕ ಸಂಘಸಂಸ್ಥೆಗಳು ಅದ್ದೂರಿಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ನಡೆಸಿವೆ. ಒಂದನ್ನೊಂದು ಮೀರಿಸುವ ಪ್ರಯತ್ನಗಳೂ ನಡೆಯುತ್ತಿವೆ. ಉತ್ಸಾಹಿ ಸಂಘಟನೆಗಳು ತಮ್ಮದೇ ಖರ್ಚು ಇಲ್ಲವೆ ದಾನಿಗಳ ಸಹಕಾರದೊಂದಿಗೆ ಹಲವು ವರ್ಷಗಳಿಂದ ನಗರದ ಹಲವೆಡೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿವೆ.
ಸಿನೆಮಾ ನಟ ನಟಿಯರು, ಖ್ಯಾತ ಸಂಗೀತಗಾರರು ಸೇರಿದಂತೆ ಸಿಲೆಬ್ರಿಟಿಗಳನ್ನು ಆಹ್ವಾನಿಸಿ ನೆರೆದವರನ್ನು ಹುಚ್ಚೆಬ್ಬಿಸುವಂತೆ ಕಾರ್ಯಕ್ರಮ ಆಯೋಜಿಸುವ ಸಂಘಟನೆಗಳು ಒಂದೆಡೆಯಾದರೆ, ಶಾಸ್ತ್ರೀಯ, ಸುಗಮ ಸಂಗೀತದಂತಹ ಕಾರ್ಯಕ್ರಮಗಳ ಮೂಲಕ ಸಾವಿರಾರು ಜನರ ಮನಸ್ಸು ಮುಟ್ಟುವ ಪ್ರಯತ್ನ ಇನ್ನು ಕೆಲವು ಸಂಘಟನೆಗಳದ್ದು. ಈ ಬಾರಿ ಈಗಾಗಲೇ 7-8 ತಂಡಗಳು ನಗರದ ಅಲ್ಲಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಮಾಡಿಕೊಂಡಿವೆ. 28 ವರ್ಷಗಳ ಇತಿಹಾಸ, ಸೇವೆಯ ಸಾರ್ಥಕತೆ
ಪರ್ಯಾಯ ಮೆರವಣಿಗೆ ಹೊರಡುವ ಜೋಡುಕಟ್ಟೆಯಿಂದ ಕೆಲವೇ ಹೆಜ್ಜೆಗಳ ದೂರದ ಕಿನ್ನಿಮೂಲ್ಕಿಯಲ್ಲಿ ಇಲ್ಲಿನ “ಶ್ರೀಕೃಷ್ಣ ಗ್ರೂಪ್ ಆಫ್ ಡ್ಯಾನ್ಸ್’ ಸಂಘಟನೆ ಪ್ರತಿ ಪರ್ಯಾಯಕ್ಕೂ ತನ್ನ ವಿಶಿಷ್ಟ ಕಾರ್ಯಕ್ರಮಗಳಿಂದಾಗಿ ಗುರುತಿಸಲ್ಪಡುತ್ತಿದೆ. ಇದು ಕಳೆದ 28 ವರ್ಷಗಳಿಂದ (14 ಪರ್ಯಾಯಗಳು) ಕಾರ್ಯಕ್ರಮ ನಡೆಸಿಕೊಂಡು ಬಂದಿದೆ. ಸಂಗೀತ, ಇತರ ಮನರಂಜನೆಯ ಜತೆಗೆ ಸಾಮಾಜಿಕ ಸೇವಾ ಕಾರ್ಯಕ್ಕೂ ಈ ವೇದಿಕೆ ಬಳಕೆಯಾಗುತ್ತಿರುವುದು ಇನ್ನೊಂದು ವಿಶೇಷ.
Related Articles
Advertisement
ದೇವಭಕ್ತಿಯೊಂದಿಗೆ ದೇಶಭಕ್ತಿ ಈ ಬಾರಿಯ ಪರ್ಯಾಯಕ್ಕೆ ದೇಶಭಕ್ತಿಯ ಕಾರ್ಯಕ್ರಮವೂ ಸೇರ್ಪಡೆಯಾಗಿದೆ. ಸ್ವರ ನಿನಾದ ಕೊಲ್ಲಾಪುರ ತಂಡದಿಂದ ಉಡುಪಿ ಕೋರ್ಟ್ ರೋಡ್ ಬಳಿ “ಜಾಗೋ ಹಿಂದುಸ್ತಾನಿ’ ದೇಶಭಕ್ತಿಯ ಕಾರ್ಯಕ್ರಮ ಜ.17ರಂದು ರಾತ್ರಿ 7.30ಕ್ಕೆ ಆಯೋಜಿಸಿರುವುದಾಗಿ ಕಾರ್ಯಕ್ರಮ ಸಂಯೋಜಕ ಬೈಕಾಡಿ ಸುಪ್ರಸಾದ್ ಶೆಟ್ಟಿ ಅವರು ತಿಳಿಸಿದ್ದಾರೆ. ದೇಗುಲಗಳ ನಾಡು, ಸಾಂಸ್ಕೃತಿಕ ಊರು ಎಂದು ಗುರುತಿಸಲ್ಪಡುವ ಉಡುಪಿ ಪರ್ಯಾಯೋತ್ಸವ ಸಂದರ್ಭದಲ್ಲಿ ಲಕ್ಷಾಂತರ ಭಕ್ತರನ್ನು ಸೆಳೆದುಕೊಳ್ಳುವುದು ಮಾತ್ರವಲ್ಲದೆ ನೂರಾರು ಕಲಾವಿದರನ್ನು ಕೂಡ ಬರಮಾಡಿಕೊಳ್ಳುತ್ತಿರುವುದು ಮತ್ತೂಂದು ವಿಶೇಷ. ಶ್ರೀಕೃಷ್ಣ ಮಠಕ್ಕೆ ಮರಿ ಆನೆ?
ಪರ್ಯಾಯ ಮೆರವಣಿಗೆಯಲ್ಲಿ ಆಕರ್ಷಕ ಟ್ಯಾಬ್ಲೋ, ಕಲಾತಂಡಗಳನ್ನು ಆನೆಯೇ ಮುನ್ನಡೆಸುವ ಸಾಧ್ಯತೆ ಇದೆ. ಶ್ರೀಕೃಷ್ಣ ಮಠದ ಆನೆ ಸುಭದ್ರೆಯೂ ಬರಬಹುದು. ಇಲ್ಲವಾದರೆ ಬೇರೆ ಕ್ಷೇತ್ರಗಳ ಆನೆಯೂ ಬರಬಹುದು. ಮಾತ್ರವಲ್ಲದೆ ಶ್ರೀಕೃಷ್ಣ ಮಠಕ್ಕೆ ಮರಿ ಆನೆಯೊಂದನ್ನು ಪಡೆಯುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಸಮಿತಿಯ ಪದಾಧಿಕಾರಿಯೋರ್ವರು ತಿಳಿಸಿದ್ದಾರೆ. ಶ್ರೀಕೃಷ್ಣ ಮಠದಲ್ಲಿದ್ದ ಆನೆ ಸುಭದ್ರೆ ಅನಾರೋಗ್ಯಕ್ಕೀಡಾಗಿ ಸಕ್ಕರೆಬೈಲಿನಲ್ಲಿ ಚಿಕಿತ್ಸೆ ಪಡೆದು ಅಲ್ಲಿ ಗುಣಮುಖವಾಗಿದೆ. ಜ.18ರಿಂದ ರಾಜಾಂಗಣದಲ್ಲಿ
ಜ. 18ರಿಂದ ಪ್ರತಿದಿನ ಸಂಜೆ 7.30ರಿಂದ ರಾಜಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ಜ. 18ರಂದು ಭಕ್ತಿಸುಧೆ, 19ರಂದು ಅಪ್ರತಿಮ ಸಂತ ವೀಡಿಯೋ ಪ್ರದರ್ಶನ, ಕೊಳಲು-ಮ್ಯಾಂಡೋಲಿನ್ ಜುಗಲ್‌ಬಂದಿ, 20 ಮತ್ತು 21ರಂದು ಆಳ್ವಾಸ್ ತಂಡದ ಕಾರ್ಯಕ್ರಮ, 23ರಂದು ಕೊಳಲುವಾದನ, 24ರಂದು ಸಂಗೀತಸುಧೆ, 25ರಂದು ಕರ್ನಾಟಕ ಶಾಸ್ತ್ರೀಯ ಸಂಗೀತ, 26ರಂದು ಭರತನಾಟ್ಯ, 27ರಂದು ಒಡಿಸ್ಸಿ ನೃತ್ಯ, 28ರಂದು ಕಥಕ್ ನೃತ್ಯ, 29ರಂದು ತೆಂಕು ಮತ್ತು ಬಡಗು ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಸಂತೋಷ್ ಬೊಳ್ಳೆಟ್ಟು