Advertisement

ಕಣ್ಮನ ಸೆಳೆವ ಮನಾಲಿ

03:33 PM Jul 19, 2018 | |

ಡಿಸೆಂಬರ್‌ ತಿಂಗಳ ಚಳಿಯ ನಡುವೆ ಪದವಿ ವಿದ್ಯಾರ್ಥಿಗಳಿಗೆ ಪ್ರವಾಸದ ಪರ್ವ ಕಾಲ ಎದುರಾಯಿತು. ಪ್ರಾಂಶುಪಾಲರ ಒಂದು ಹೊಸ ಕನಸು ನಮಗೆಲ್ಲ ಖುಷಿಯ ಜತೆಗೆ ಮನಾಲಿ ಪ್ರವಾಸದ ಬೆಚ್ಚಗಿನ ನೆನಪನ್ನು ಕಟ್ಟಿಕೊಟ್ಟಿತು. ಪ್ರಾಂಶುಪಾಲರು ಒಂದು ಸುತ್ತಿನ ಸಭೆ ಕರೆದು ಅರ್ಥಶಾಸ್ತ್ರ ಉಪನ್ಯಾಸಕರಿಗೆ ಪ್ರವಾಸದ ಉಸ್ತುವಾರಿ ವಹಿಸಿದರು. ಮನಾಲಿಯಲ್ಲಿ ಚಳಿ ಹೆಚ್ಚಾಗಿರುವುದರಿಂದ ಯಾವೆಲ್ಲ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕು, ಏನೆಲ್ಲ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು, ಪ್ರವಾಸದ ಖರ್ಚು ಎಷ್ಟು ಎಂಬಿತ್ಯಾದಿ ವಿಷಯಗಳನ್ನು ವಿವರಿಸಿದರು. ಕಡಿಮೆ ಖರ್ಚಿನಲ್ಲಿ ದೇಶದ ತುತ್ತತುದಿಗೆ ಹೋಗಿಬರುವ ಅವಕಾಶ ಸಿಕ್ಕಿದ್ದರಿಂದ ಎಲ್ಲ ವಿದ್ಯಾರ್ಥಿಗಳು ಹೊರಟುನಿಂತರು. 

Advertisement

ಪ್ರವಾಸದ ದಿನ ಮಕ್ಕಳು ಯುದ್ಧಕ್ಕೆ ಹೋಗುತ್ತಿರುವಂತೆ ಹೆತ್ತ ತಂದೆ- ತಾಯಿ ಬಂದು ಬೀಳ್ಕೊಡುತ್ತಿದ್ದರು. ಎಲ್ಲರೂ ಬಸ್‌ ಹತ್ತಿ ಮಂಗಳೂರು ರೈಲು ನಿಲ್ದಾಣ ತಲುಪಿದೆವು. ಲಗೇಜ್‌ ಭಾರ ಜಾಸ್ತಿಯಿದ್ದುದರಿಂದ ನಮ್ಮ ಬ್ಯಾಗ್‌ಗಳ ಜತೆಗೆ ಹೆಣ್ಣು ಮಕ್ಕಳ ಬ್ಯಾಗ್‌ಗಳು ನಮ್ಮ ಹೆಗಲಿಗೇರಿದವು. ಮೊದಲೇ ಟ್ರೈನ್‌ ಟಿಕೆಟ್‌ ಬುಕ್‌ ಆಗಿದ್ದರಿಂದ ರೈಲು ಹತ್ತಿ ಕುಳಿತೆವು. 

ರೈಲು ಪ್ರಯಾಣ ಮುಂದುವರಿಯುತ್ತಿದ್ದಂತೆ ನಮ್ಮ ಅಂತ್ಯಾಕ್ಷರಿ, ಹಳೆಯ ಜಗಳಗಳು, ಚಿತ್ರನಟರ ಸ್ವಾರಸ್ಯಕರ ವಿಷಯಗಳು, ಕೆಲವರ ಲವ್‌ ಸ್ಟೋರಿಗಳು ಚರ್ಚೆಗೆ ಬಂದವು. ಪ್ರಾಂಶುಪಾಲರು ಬಂದು ಎಲ್ಲರೂ ಮಲಗಿ ಎಂದು ಆದೇಶ ನೀಡಿದಾಗ ಸೈಲೆಂಟ್‌ ಆಗಿ ಎಲ್ಲರೂ ತಮ್ಮ ತಮ್ಮ ಸೀಟ್‌ಗೆ ಒರಗಿ ಪ್ರವಾಸದ ಕನಸು ಕಾಣುತ್ತ ನಿದ್ದೆಹೋದರು.

ಮರುದಿನ ಬೆಳಗ್ಗೆ 11 ಗಂಟೆಯ ವೇಳೆ ಎಲ್ಲರ ಕಿರಿಕಿರಿಗೆ ಎದ್ದು ಮುಖ ತೊಳೆದು ಬಂದೆವು. ಆ ವೇಳೆಗೆ ಚಹಾ ನಮ್ಮ ಮುಂದೆ ಹಾಜರಿತ್ತು. ರೈಲು ಮಹಾರಾಷ್ಟ್ರದಲ್ಲಿ ಬಿರುಸಾಗಿ ಮುಂದೆಮುಂದೆ ಚಲಿಸುತ್ತಿತ್ತು. ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸುತ್ತ ಉತ್ತರ ಪ್ರದೇಶ, ರಾಜಸ್ತಾನ ಕಳೆದು ಎರಡು ರಾತ್ರಿಯನ್ನು ರೈಲಿನಲ್ಲಿ ಕಳೆದು ಚಂಡಿಗಢಕ್ಕೆ ಬಂದು ಇಳಿದಾಗ ಎಲ್ಲರಿಗೂ ಸುಸ್ತೋಸುಸ್ತು.

ರೈಲಿನಿಂದ ಇಳಿಯುತ್ತಿದ್ದಂತೆ ಮನಾಲಿಗೆ ಹೊರಡುವ ಬಸ್ಸೊಂದು ಸಿದ್ಧವಾಗಿತ್ತು. ಅದನ್ನು ಹತ್ತಿ ಬಸ್‌ನಲ್ಲೇ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದೆವು. ಅನಂತರ ಸಿಕ್ಖರ ಪವಿತ್ರ ದೇವಾಲಯಕ್ಕೆ ಬಂದು ರೋಟಿ ಸವಿದೆವು. ಅಲ್ಲಿಂದ ಹೊರಟು ಬೆಳಗ್ಗೆ ಮನಾಲಿಯ ಹಿಮ ಕಣಿವೆಗೆ ಬಂದಿಳಿದಾಗ ಚಳಿಯ ಹೊಡೆತಕ್ಕೆ ಎಲ್ಲರೂ ಚಳಿಚಳಿ ಎಂದು ಕಿರುಚಲಾರಂಭಿಸಿದರು. ಆದರೆ ಹೊಸ ಪ್ರದೇಶ ನೋಡುವ ಉತ್ಸಾಹಕ್ಕೆ ಎಲ್ಲರೂ ಚಳಿಯನ್ನು ಎದುರಿಸಲು ಸಿದ್ಧರಾದರು.

Advertisement

ಹಿಮದ ಬೆಟ್ಟ ನೋಡಲು ಎರಡು ಕಣ್ಣೂ ಸಾಲದು ಎಂಬಂತಾಗುತ್ತಿತ್ತು. ಅಷ್ಟರಲ್ಲಿ ಕೆಲವು ಶಾಲೆಯೊಂದರಲ್ಲಿ ವಿಶ್ರಾಂತಿ ಪಡೆಯಲು ಹೊರಟರೆ ಇನ್ನು ಕೆಲವರಿಗೆ ಹಿಮ ಬೆಟ್ಟ ಹತ್ತುವ ಆಸೆ. ಹಿಮ ಬೆಟ್ಟದ ಮುಂದೆ ಆಯಾಸವೆಲ್ಲ ಕರಗಿ ಹೋಗಿತ್ತು. ಎಲ್ಲರೂ ಹೊರಡಿ ಎಂದು ಉಪನ್ಯಾಸಕರ ಮಾತಿಗೆ ಮನಾಲಿ ತಂಪೋ.. ತಂಪೋ ಎನ್ನುತ್ತಾ ಹೊರಟು ಬಿಟ್ಟೆವು. ಅಲ್ಲಿನ ನೀರು ಮುಟ್ಟಲು ಸಾಧ್ಯವಾಗುತ್ತಿರಲಿಲ್ಲ. ಹಿಮವನ್ನು ಮುಟ್ಟಿದಾಗ ಅಯ್ಯೋ ಎಂದು ಎಲ್ಲರೂ ಬೊಬ್ಬೆ
ಹೊಡೆಯುತ್ತಿದ್ದೆವು.

ಮನಾಲಿಯ ಮಡಿಲು ತಲುಪುವಾಗ ಮೈ ರೋಮಾಂಚನವಾಗುತ್ತಿತ್ತು. ಮೇಲೆ ಹತ್ತುವ, ಕೆಳಗೆ ಜಾರುವ ಆಟದ ನಡುವೆ ಎಲ್ಲರೂ ಬೆಟ್ಟ ಹತ್ತಿದಾಗ ಸಿಯಾಚಿನ್‌ ಸೈನ್ಯದ ನೆನಪಾಯಿತು. ಅವರ ಕಷ್ಟ ಯಾರಿಗೂ ಬೇಡ ಎಂದುಕೊಂಡೆವು. ಆ ಚಳಿಯಲ್ಲಿ ನಾವೆಲ್ಲ ಸೋತುಹೋದೆವು. ಚಳಿಯನ್ನು ತಡೆಯಲಾರದೆ ಎಲ್ಲರೂ ಕೂಡಲೇ ಹೊರಡಲು ಸಿದ್ಧರಾದರು. ದಟ್ಟಣೆ ದಾರಿಯನ್ನು ಸೀಳಿ ಬಂದು ಭೀಮಾ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದೆವು. ಅಲ್ಲಿ ಬಿಸಿಬಿಸಿ ಚಹಾ ಸವಿದು, ಸುತ್ತಮುತ್ತಲಿನಲ್ಲಿರುವ ಅನೇಕ ಪ್ರದೇಶಗಳಿಗೆ ಭೇಟಿ ನೀಡಿ ರಾತ್ರಿ ಊರಿಗೆ ಪ್ರಯಾಣ ಮಾಡುವಾಗ ಛೇ, ಇನ್ನೊಂದೆರಡು ದಿನ ಇಲ್ಲಿ ಕಳೆಯಬಾರದಿತ್ತೆ ಎಂದೆನಿಸುತ್ತಿತ್ತು. 

ರೂಟ್‌ ಮ್ಯಾಪ್‌
· ಮಂಗಳೂರಿನಿಂದ ಹೊಸ ದಿಲ್ಲಿ ಮೂಲಕ ಮನಾಲಿಗೆ ರೈಲು, ವಿಮಾನ, ಬಸ್‌ ಸೌಲಭ್ಯಗಳಿವೆ.
· ಸ್ಥಳೀಯವಾಗಿ ಸುತ್ತಾಡಲು ಖಾಸಗಿ ವಾಹನಗಳು ಸಿಗುತ್ತವೆ.
· ವರ್ಷವಿಡೀ ಚಳಿಯ ವಾತಾವರಣ ಇರುವುದರಿಂದ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು.
· ಊಟ, ವಸತಿ ವ್ಯವಸ್ಥೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮೊದಲೇ ಪಡೆಯುವುದು ಮತ್ತು ಬುಕ್ಕಿಂಗ್‌ ಮಾಡುವುದು ಉತ್ತಮ.

ಅಕ್ಷಯ್‌ ಕುಮಾರ್‌ ಪಲ್ಲಮಜಲು,
ಪುತ್ತೂರು 

Advertisement

Udayavani is now on Telegram. Click here to join our channel and stay updated with the latest news.

Next