ಸಿಂಧನೂರು: ಯುವ ವಕೀಲರು ವೃತ್ತಿಯಲ್ಲಿ ಕ್ರಿಯಾಶೀಲತೆ ಮೈಗೂಡಿಸಿಕೊಂಡು ಕಾರ್ಯೋನ್ಮುಖರಾಗಬೇಕು. ತಮ್ಮನ್ನು
ನಂಬಿ ಬಂದಂತಹ ಕಕ್ಷಿದಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸತ್ರನ್ಯಾಯಾಧೀಶರಾದ ಬೈಲೂರು ಶಂಕರರಾಮ್ ಕರೆ ನೀಡಿದರು.
ತಾಲೂಕು ನ್ಯಾಯವಾದಿಗಳ ಸಂಘದಿಂದ ನಗರದ ನ್ಯಾಯಾಲಯ ಆವರಣದಲ್ಲಿ ಏರ್ಪಡಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಯುವ ವಕೀಲರು ವೃತ್ತಿ ನೈಪುಣ್ಯತೆ ಗಳಿಸಿಕೊಳ್ಳುವ ಅವಶ್ಯಕತೆ ಇದೆ. ನ್ಯಾಯಕ್ಕಾಗಿ ವಕೀಲರ ಹತ್ತಿರ ನಂಬಿ ಬರುವ ಕಕ್ಷಿದಾರರ ವಿಶ್ವಾಸವನ್ನು ಗಳಿಸಿಕೊಳ್ಳಬೇಕು. ಪ್ರೌಢಿಮೆ ಜೊತೆಗೆ ಜನರ ಕ್ಷಮತೆಯನ್ನು ಗಳಿಸಿಕೊಳ್ಳುವ ಕೆಲಸ ಮಾಡಬೇಕಾಗಿದೆ ಎಂದರು.
ಡಾ| ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನವನ್ನು ವಕೀಲರ ದಿನವನ್ನಾಗಿ ಆಚರಿಸುತ್ತಿದ್ದೇವೆ. ವಕೀಲರು ಕೇವಲ ಶೋಕಿಗಾಗಿ ಕೋಟು ಹಾಕಿಕೊಂಡು ಕಾಟಾಚಾರಕ್ಕೆ ವಕೀಲಿ ವೃತ್ತಿ ಮಾಡುವುದಲ್ಲ. ನಿಜವಾದ ಅಸ್ತಿತ್ವವನ್ನು ತಮ್ಮದಾಗಿಸಿಕೊಂಡು ಕಕ್ಷಿದಾರರ ಪ್ರತಿಯೊಂದು ತಕರಾರುಗಳ ಸೂಕ್ಷ್ಮತೆ ಅರ್ಥೈಸಿಕೊಂಡು ನ್ಯಾಯಾಲಯದ ಮುಂದೆ ಪ್ರಚುರಪಡಿಸಬೇಕು. ಅಂತಹ ದಾರಿಯಲ್ಲಿ ವಕೀಲರು ಸಾಗಬೇಕು. ಸಾಧಿಸುವ ಗುರಿ ಜೊತೆಗೆ ಗುರುವಿನ ಗುಲಾಮನಾಗಿ ಪ್ರಬುದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಧಾರವಾಡ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎಚ್. ಮಿಟ್ಟಿಲಕೋಡ್ ಮಾತನಾಡಿ, ವಕೀಲರೆಂದರೆ ನೊಂದವರ ಧ್ವನಿಯಾಗಿ ನ್ಯಾಯಾಲಯದಲ್ಲಿ ಕೆಲಸ ಮಾಡಿ ಅವರಿಗೆ ನಿಜವಾದ ನ್ಯಾಯ ದೊರಕಿಸಿಕೊಡುವ ಶಕ್ತಿಯಾಗಬೇಕು. ವೃತ್ತಿಯ ಬಗ್ಗೆ ಕಾಳಜಿಯುಳ್ಳ ವಕೀಲರಾಗಿ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವು ಜೊತೆಗೆ ಸಾಮಾಜಿಕ ಕಳಕಳಿ ಮೆರೆಯಬೇಕು. ಅಂದಾಗ ಮಾತ್ರ ವಕೀಲಿ ವೃತ್ತಿಗೆ ನಿಜವಾದ ಅರ್ಥ ಬರುತ್ತದೆ ಎಂದರು.
ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಜೆ.ರಾಯಪ್ಪ ವಕೀಲ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಸಿಂಧನೂರು ನ್ಯಾಯಾಧೀಶರಾದ ಸಿ.ವಿ.ಸನತ್, ಮಹಾಂತೇಶ ಭೂಸಗೋಳ, ರವಿಕುಮಾರ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯರಾದ ಕಾಶಿನಾಥ ಮೊಟಕಪಲ್ಲಿ, ಆಸೀಫ್ ಅಲಿ, ಕೆ.ಕೋಟೇಶ್ವರರಾವ್, ಹಿರಿಯ ವಕೀಲರಾದ ಎಸ್.ಬಿ.ಹಿರೇಗೌಡ್ರು, ಎಚ್.ರುದ್ರಗೌಡ, ಹನುಮಂತಪ್ಪ ಗುಡಿ, ಎಂ.ಕಾಳಿಂಗಪ್ಪ, ಎಚ್.ರಾಮನಗೌಡ, ವಿರುಪಾಕ್ಷಪ್ಪ ಗದ್ರಟಗಿ, ಆರ್.ಮಲ್ಲಯ್ಯ, ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ವಿರುಪಣ್ಣ ಧುಮತಿ ಇತರರು ಇದ್ದರು.