ಈಗಷ್ಟೇ ಕನ್ನಡ ಚಿತ್ರರಂಗದಲ್ಲಿ ನೆಲೆಕಂಡುಕೊಳ್ಳುತ್ತಿರುವ ನವನಟಿ ಶಿಲ್ಪಾ ಮಂಜುನಾಥ್, ಸದ್ಯ “ಸ್ಟ್ರೈಕರ್’ ಚಿತ್ರದ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಈ ಚಿತ್ರ ಇದೇ ಶುಕ್ರವಾರ ತೆರೆಕಾಣುತ್ತಿದೆ. ಶಿಲ್ಪಾ ಈ ಚಿತ್ರಕ್ಕೆ ಆಯ್ಕೆಯಾಗಲು ಕಾರಣ ನಾಯಕ ಪ್ರವೀಣ್ ತೇಜ್ ಅಂತೆ. ಚಿತ್ರತಂಡಕ್ಕೆ ತಮ್ಮ ಸೇರ್ಪಡೆಯ ಬಗ್ಗೆ ಮಾತನಾಡುವ ಶಿಲ್ಪಾ, “ಪ್ರವೀಣ್ ತೇಜ್ ಮೊದಲು ನಿರ್ಮಾಪಕರು, ನಿರ್ದೇಶಕರಿಗೆ ನನ್ನನ್ನು ಪರಿಚಯಿಸಿದ್ದರು.
ಅದೇ ವೇಳೆ ನಾನು ತಮಿಳಿನಲ್ಲಿ “ಕಾಳಿ’ ಅನ್ನೋ ಸಿನಿಮಾದ ಶೂಟಿಂಗ್‌ನಲ್ಲಿದ್ದೆ. ಹಾಗಾಗಿ ಆ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ಬಂದು “ಸ್ಟ್ರೈಕರ್’ ಸಿನಿಮಾದ ಕಥೆ ಕೇಳಿದೆ. ಕಥೆ ತುಂಬಾ ಹೊಸಥರದಲ್ಲಿತ್ತು. ನಾನು ಇಲ್ಲಿಯವರೆಗೆ ಮಾಡಿದ ಪಾತ್ರಗಳಿಗಿಂತ ಹೊಸಥರದ ಪಾತ್ರ ಈ ಸಿನಿಮಾದಲ್ಲಿತ್ತು. ಹಾಗಾಗಿ ಈ ಸಿನಿಮಾವನ್ನು ಒಪ್ಪಿಕೊಂಡೆ’ ಎನ್ನುತ್ತಾರೆ. ಇನ್ನು “ಸ್ಟ್ರೈಕರ್’ ಚಿತ್ರದ ಆರಂಭದಲ್ಲೇ ನಿರ್ಮಾಪಕರು, ನಿರ್ದೇಶಕರ ಜೊತೆ ಶಿಲ್ಪಾ ಜಗಳ ಮಾಡಿಕೊಂಡಿದ್ದರಂತೆ.
ಈ ಬಗ್ಗೆ ಮಾತನಾಡುವ ಶಿಲ್ಪಾ, “ಕೆಲವೊಂದು ವಿಷಯದಲ್ಲಿ ನಿರ್ಮಾಪಕರು ಮತ್ತು ನಿರ್ದೇಶಕರ ಜೊತೆ ನನಗೆ ಭಿನ್ನಾಭಿಪ್ರಾಯಗಳಿದ್ದವು. ಅವರು ಕೂಡ ನನ್ನನ್ನು ಸಿನಿಮಾದಲ್ಲಿ ಸೇರಿಸಿಕೊಂಡರೆ, ಸರಿಯಾಗಿ ಕೆಲಸ ಮಾಡುತ್ತಾಳಾ? ಅಥವಾ ಮಧ್ಯದಲ್ಲೇ ಏನಾದ್ರೂ ಗಲಾಟೆ ಮಾಡಿಕೊಂಡು ಹೋಗುತ್ತಾಳಾ? ಎಂಬ ಭಯದಲ್ಲೇ ಇದ್ದರು. ಆದ್ರೆ ಅದೆಲ್ಲವೂ ಕೆಲವೇ ದಿನಗಳ ಮಟ್ಟಿಗಿತ್ತು.
ಆ ನಂತರ ಎಲ್ಲವೂ ಸುಸೂತ್ರವಾಗಿ ನಡೆಯಿತು. ಇಡೀ ಸಿನಿಮಾದಲ್ಲಿ ಅಭಿನಯಿಸದ್ದು, ಒಳ್ಳೆಯ ಅನುಭವ ಕೊಟ್ಟಿತ್ತು. ಖುಷಿ ಕೊಟ್ಟಿತು’ ಎನ್ನುತ್ತಾರೆ. “ಸ್ಟ್ರೈಕರ್’ ಚಿತ್ರದಲ್ಲಿ ಶಿಲ್ಪಾ ಮಂಜುನಾಥ್, ಮಧ್ಯಮ ವರ್ಗದ ಹುಡುಗಿಯಾಗಿ ನಟ ಪ್ರವೀಣ್‌ಗೆ ನಾಯಕಿಯಾಗಿದ್ದಾರೆ. “ಒಬ್ಬ ಮಧ್ಯಮ ವರ್ಗದ ಹುಡುಗಿ ಹೇಗೆ ಇರುತ್ತಾಳ್ಳೋ ಹಾಗೇ ಈ ಸಿನಿಮಾದಲ್ಲಿ ನಾನು ಕಾಣುತ್ತೇನೆ.
ಅಪ್ಪ-ಅಮ್ಮನಿಲ್ಲದ ಹುಡುಗಿಯನ್ನು ಅವಳ ಫ್ರೆಂಡ್ಸ್ ಎಲ್ಲ ಸೇರಿಕೊಂಡು ಮದುವೆ ಮಾಡುವ ಪ್ಲಾನ್ ಮಾಡುತ್ತಾರೆ. ಅಂಥ ಹುಡುಗಿ ಕನಸು ಮತ್ತು ರಿಯಾಲಿಟಿ ನಡುವೆ ವ್ಯತ್ಯಾಸ ಗೊತ್ತಿರದ ಹುಡುಗನ ಜೊತೆ ಹೇಗಿರುತ್ತಾಳೆ ಅನ್ನೋದೆ ನನ್ನ ಪಾತ್ರ’ ಎಂದು ತಮ್ಮ ಪಾತ್ರದ ಪರಿಚಯ ಮಾಡಿಕೊಡುತ್ತಾರೆ. ಇನ್ನು ಶಿಲ್ಪಾ ಅವರನ್ನು ದೂರದಿಂದ ನೋಡಿದ ಕೆಲವರು, “ಈ ಹುಡುಗಿಗೆ ಸ್ವಲ್ಪ ಅಟಿಟ್ಯೂಡ್ ಇದೆ’ ಅಂದುಕೊಂಡಿದ್ದು ಇದೆಯಂತೆ. ಆದರೆ, ಇದ್ಯಾವುದಕ್ಕೂ ಡೋಂಟ್ ಕೇರ್ ಎನ್ನುತ್ತಾರೆ ಶಿಲ್ಪಾ.