ಯಾದಗಿರಿ: ಅಕ್ಷರ ದಾಸೋಹ ಬಿಸಿಯೂಟ ತಯಾರಕರ ವೇತನದಲ್ಲಿ ಕಳೆದ 7 ವರ್ಷಗಳಿಂದ ಬಿಡಿಗಾಸು ಹೆಚ್ಚಳ ಮಾಡಿಲ್ಲ. ಇದೇ ಸ್ಕೀಂನಲ್ಲಿ ಬರುವ ಅಂಗನವಾಡಿ, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂದು ರಾಜ್ಯ ಅಧ್ಯಕ್ಷ ಹೊನ್ನಪ್ಪ ಮರೆಮ್ಮನವರ್ ಆರೋಪಿಸಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಬಿಸಿಯೂಟ ತಯಾರಕರ ಫೆಡರೇಶನ್ ರಾಜ್ಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇವಲ 2600 ರೂ. ಗಳಲ್ಲಿ ಕನಿಷ್ಠ ವೇತನದಲ್ಲಿ ಬಿಸಿಯೂಟ ನೌಕರರು ದುಡಿಯುತ್ತಿದ್ದಾರೆ. ದೇಶದ ಭವಿಷ್ಯದ ಪ್ರಜೆಗಳಿಗೆ ಅನ್ನದಾಸೋಹದ ಪ್ರಮುಖ ಕಾರ್ಯದ ಹೊಣೆ ಹೊತ್ತು ನಿಭಾಯಿಸುತ್ತಿದ್ದಾರೆ, ಆದರೆ ಸರ್ಕಾರಗಳು ಮಾತ್ರ ಬಿಸಿಯೂಟ ನೌಕರರ ಗೋಳು ಕೇಳಿಸಿಕೊಳ್ಳಲು ಮುಂದಾಗುತ್ತಿಲ್ಲ ಎಂದು ಹೇಳಿದರು.
ಕೂಡಲೇ ತಾರತಮ್ಯ ನೀತಿ ಬಿಡಬೇಕು. ನಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಬೇಕು. ಗ್ರ್ಯಾಚುಟಿ, ತುಟ್ಟಿಭತ್ಯೆ, ವೈದ್ಯಕೀಯ ಸವಲತ್ತು, ಇಎಸ್‌ಐ ಹಾಗೂ ಉದ್ಯೋಗ ಭದ್ರತೆ ನೀಡಬೇಕು. ಕನಿಷ್ಠ ವೇತನವನ್ನಾಗಿ 18 ಸಾವಿರ ರೂ. ನೀಡಬೇಕು ಎಂದು ಅವರು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ, ಸರ್ಕಾರಗಳ ಗಮನ ಸೆಳೆಯಲು ನ. 9ರಂದು ದೆಹಲಿ, ಡಿಸೆಂಬರ್ 2ರಂದು ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ರಾಜ್ಯ ಕಾರ್ಯಾಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ, ರಾಜ್ಯ ಸಲಹೆಗಾರ ಎನ್. ಶಿವಣ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರು ಅವರಗೆರೆ, ಫೆಡರೇಶನ್ ಜಿಲ್ಲಾ ಅಧ್ಯಕ್ಷೆ ಕಲ್ಪನಾ ಗುರುಸುಣಿಗಿ, ದೇವೇಂದ್ರಪ್ಪ ಪತ್ತಾರ, ಬಿ.ಎ. ರೆಡ್ಡಿ, ರುದ್ರಮ್ಮ ದಲಾಲಗೆರೆ ಮಾತನಾಡಿದರು.
ಶೈಲಜಾ ತೀರ್ಥಹಳ್ಳಿ, ಸರೋಜಾ, ಗಿರೀಶ, ಅಮರಾವತಿ ಚನ್ನಮ್ಮ, ತುಮಕೂರು ವನಜಾಕ್ಷಿ, ಹಾವೇರಿ ಸರೋಜಾದೇವಿ, ಷಹಜಾಬಿಬೇಗಂ, ಮಲ್ಲಮ್ಮ, ಅನುಸೂಯ, ಯಶೋಧ ಇದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀದೇವಿ ಕೂಡ್ಲಿಗಿ ಸ್ವಾಗತಿಸಿದರು. ಮಲ್ಲಯ್ಯ ವಗ್ಗಾ ವಂದಿಸಿದರು.