Advertisement

ಉಡುಪಿಯಲ್ಲೊಬ್ಬ ಹವ್ಯಾಸಿ ರೇಖಾಚಿತ್ರ ಕಲಾವಿದ

10:19 PM Aug 12, 2019 | Team Udayavani |

ವಿಶೇಷ ವರದಿ-ಉಡುಪಿ: ಕಲೆಯು ಕಲಾವಿದನ ಕಲಾ ಸಂಘಟನೆ, ಕಲಾರಾಧಕರ ಮನದಾಳದ ವೇದನೆಯನ್ನು ದೂರೀಕರಿಸಿ ಮನಸ್ಸನ್ನು ಪ್ರಫ‌ುಲ್ಲಗೊಳಿಸಬಲ್ಲ ಅದ್ಭುತ ಶಕ್ತಿ ಹೊಂದಿದೆ. ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಅದಕ್ಕಾಗಿ ಆಸಕ್ತಿ, ಶ್ರದ್ಧೆಯನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕೊಡವೂರು ಮೂಡುಬೆಟ್ಟಿನ ಬಾಲಕೃಷ್ಣ ಶೆಟ್ಟಿ ಅವರು ತನ್ನ ಲೇಖನಿಯಿಂದ ಇದುವರೆಗೆ ಸುಮಾರು 8 ಸಾವಿರಕ್ಕೂ ಅಧಿಕ ರೇಖಾಚಿತ್ರಗಳನ್ನು ಬಿಡಿಸಿ ಬದುಕಿನಲ್ಲಿ ಸಂತಸ ಕಾಣುತ್ತಿದ್ದಾರೆ.

Advertisement

ಬಿಡುವಿಲ್ಲದ ಕೆಲಸದ ನಡುವೆಯೂ ಕಲಾಸಕ್ತಿ
ಕೊಡವೂರಿನ ಗೋಪಾಲ ಶೆಟ್ಟಿ, ಪದ್ಮಾವತಿ ದಂಪತಿ ಪುತ್ರ ಬಾಲಕೃಷ್ಣ ಶೆಟ್ಟಿ ಚಿಕ್ಕಂದಿನಿಂದಲೂ ರೇಖಾಚಿತ್ರ ಬಿಡಿಸುವ ಹವ್ಯಾಸ ರೂಢಿಸಿಕೊಂಡಿದ್ದಾರೆ. ಪಿಯುಸಿ ವಿದ್ಯಾಭ್ಯಾಸ ಮಾಡಿದ ಅವರು ಉಡುಪಿಯ ಜಂಗಮಮಠ ಚಿತ್ರಕಲಾ ಮಂದಿರದಲ್ಲಿ ಕೆ.ಎಲ್‌. ಭಟ್‌ರಿಂದ ಪ್ರಾಥಮಿಕ ಚಿತ್ರಕಲೆ ಅಭ್ಯಸಿಸಿದರು. ಶೆಟ್ಟಿಯವರು ಯಾವುದೇ ಕಾರ್ಯಕ್ರಮಕ್ಕೆ ತೆರಳಿದರೂ ಅವರ ಕೈಯಲ್ಲಿ ಡ್ರಾಯಿಂಗ್‌ ಶೀಟ್‌, ಕಪ್ಪು ಬಣ್ಣದ ಸ್ಕೆಚ್‌ ಪೆನ್‌ ಸದಾ ಸಿದ್ಧªವಿರುತ್ತದೆ. ವೇದಿಕೆಯಲ್ಲಿ ಕುಳಿತಿರುವ ಗಣ್ಯಾತಿಗಣ್ಯರ ಚಿತ್ರಗಳನ್ನು ಸಭಿಕರ ಸಾಲಿನಲ್ಲಿ ಕುಳಿತು ಯಾ ನಿಂತು ವೇದಿಕೆಯತ್ತ ದೃಷ್ಟಿ ಹಾಯಿಸುತ್ತಾ ತನ್ನ ಎಡಗೈಯಿಂದ ರೇಖಾಚಿತ್ರ ರಚಿಸುತ್ತಾರೆ.

ಶ್ರೀಕೃಷ್ಣಮಠ, ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ 2 ವರ್ಷಗಳ ಪರ್ಯಂತ ಹರಿದಾಸ ಸಂಕೀರ್ತನೆಗಳ ಅಖಂಡ ಭಜನೆ ಕಾರ್ಯಕ್ರಮದಲ್ಲಿ ಪ್ರತಿದಿನ ಸಂಜೆ ಹಾಜರಿರುವ ಶೆಟ್ಟರು ಭಜನ ತಂಡಗಳ ಲೈವ್‌ ರೇಖಾಚಿತ್ರ ಬರೆಯುತ್ತಾರೆ.
ಎಲ್ಲ ಬಗೆಯ ರೇಖಾಚಿತ್ರ ಬಿಡಿಸುವುದಕ್ಕೂ ಸೈಯಾವುದೇ ಸನ್ನಿವೇಶವನ್ನು ಶೆಟ್ಟರು ತದ್ರೂಪವಾಗಿ ಕೇವಲ ಹತ್ತಿಪ್ಪತ್ತು ನಿಮಿಷಗಳಲ್ಲಿ ರೇಖಾಚಿತ್ರದ ಮೂಲಕ ಸೆರೆ ಹಿಡಿಯುತ್ತಾರೆ. ದ.ಕ., ಉಡುಪಿ, ಧಾರವಾಡದಲ್ಲಿ ನಡೆದ ಸಾಹಿತ್ಯ ಸಮ್ಮೇಳನಗಳು, ಆಳ್ವಾಸ್‌ ನುಡಿಸಿರಿ, ಬಡಗು-ತೆಂಕು ತಿಟ್ಟುಗಳ ಯಕ್ಷಗಾನ, ನಾಗಮಂಡಲ, ಕೃಷಿ ಮೇಳ, ನಾಟಕಗಳು, ಕರಾವಳಿ ಉತ್ಸವದಂತಹ ಕಾರ್ಯಕ್ರಮಗಳಲ್ಲಿ ಶೆಟ್ಟರು ಹಾಜರಿರುತ್ತಾರೆ.

8 ಸಾವಿರಕ್ಕೂ ಅಧಿಕ ರೇಖಾಚಿತ್ರ
ಶೆಟ್ಟಿಯವರು ಇದುವರೆಗೆ ಸುಮಾರು 8 ಸಾವಿರಕ್ಕೂ ಅಧಿಕ ರೇಖಾಚಿತ್ರಗಳಾದ ಭರತನಾಟ್ಯ, ಯಕ್ಷಗಾನ ಕಲಾವಿದರು, ಗಣ್ಯ ವ್ಯಕ್ತಿಗಳು, ಪ್ರಾಕೃತಿಕ ಸೌಂದರ್ಯದ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿ, ಅದನ್ನು ನೆನಪಿಗಾಗಿ ಪ್ರದರ್ಶನ ಕೊಟ್ಟ ಕಲಾವಿದರಿಗೆ ನೀಡುತ್ತಾರೆ. ಬಾಲಕೃಷ್ಣರ ಕಲಾ ಚಾತುರ್ಯ ನೋಡಿ ಬೆರಗಾದ ಅದೆಷ್ಟೋ ಗಣ್ಯರು ಪ್ರಶಂಸಿಸಿದ್ದಾರೆ. ಕೆನಡಾದ ಪ್ರಸಿದ್ಧ ಜಾದುಗಾರ ಡೀನ್‌ ಗುನ್ನರ್ಸನ್‌, ಖ್ಯಾತ ಗಾಯಕರಾದ ಎಸ್‌.ಪಿ. ಬಾಲಸುಬ್ರಹ್ಮಣ್ಯ, ಶಶಿಧರ ಕೋಟೆ, ವಿದ್ಯಾಭೂಷಣ ಸ್ವಾಮೀಜಿ ಹೀಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರನೇಕರ ರೇಖಾಚಿತ್ರಗಳನ್ನು ಅವರು ಕಾರ್ಯಕ್ರಮ ನೀಡುತ್ತಿರುವಾಗಲೇ ಬಿಡಿಸಿ ಕೊಟ್ಟಿದ್ದಾರೆ. ಡಾ| ವಿ.ಎಸ್‌. ಆಚಾರ್ಯ, ಡಾ| ಜಯಮಾಲಾ, ಉಮಾಶ್ರೀ ಮುಂತಾದ ರಾಜಕಾರಣಿಗಳ, ಪೊಲೀಸ್‌ ಇಲಾಖೆಯ ವರಿಷ್ಠಾಧಿಕಾರಿಗಳ ರೇಖಾಚಿತ್ರಗಳಲ್ಲದೆ, ಜನಸಾಮಾನ್ಯರ ಚಿತ್ರಗಳನ್ನೂ ಬಿಡಿಸಿಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next