ಬಂಟ್ವಾಳ : ತುಳು ಭಾಷಾ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಈ ಭಾಗದ ಜನರಲ್ಲಿ ಇರುವಂತಹ ಕಾಳಜಿ ಅಭಿಮಾನ ಮನತುಂಬುವುದು. ಇಂದು ನಾನು ತುಳುವಿನಲ್ಲಿ ಒಂದು ಶಬ್ದವನ್ನಷ್ಟೆ ಆಡಲು ಸಾಧ್ಯವಾಗಿದೆ. ಮುಂದಿನ ಮೂರು ವರ್ಷಗಳ ಅವಕಾಶ ನನಗಿದ್ದು ನಾನು ಇಲ್ಲಿಂದ ವರ್ಗಾವಣೆ ಆಗುವ ಸಂದರ್ಭ ಖಂಡಿತ ತುಳುವಿನಲ್ಲಿ ಭಾಷಣ ಮಾಡುವಷ್ಟು ತುಳು ಕಲಿಯುತ್ತೇನೆ ಎಂದು ಬಂಟ್ವಾಳದ ಸಿವಿಲ್ ನ್ಯಾಯಾಲಯದ ಸೀನಿಯರ್ ಡಿವಿಜನ್ ನ್ಯಾಯಾಧೀಶರಾದ ಮಹಮ್ಮದ್ ಇಮ್ತಿಯಾಜ್ ಅಹಮ್ಮದ್ ಹೇಳಿದರು.
ಅವರು ಆ. 4ರಂದು ವಕೀಲರ ಸಂಘ ಬಂಟ್ವಾಳ ಆಶ್ರಯದಲ್ಲಿ ನಡೆದ ‘ಆಟಿಡ್ ಒಂಜಿ ದಿನ ತಮ್ಮನದ ಲೇಸ್’ ಕಾರ್ಯಕ್ರಮವನ್ನು ತುಳುನಾಡಿನ ಸಾಂಸ್ಕೃತಿಕ ಪರಂಪರೆಯ ಕಟ್ಟುಕಟ್ಟಳೆಯಂತೆ ಆಟಿ ಕಳೆಂಜನ ಜೋಳಿಗೆಗೆ ಭತ್ತದ ಪಡಿ, ಎಲೆಅಡಿಕೆ ನೀಡಿ, ದೀಪ ಬೆಳಗಿಸಿ, ತೆಂಗಿನ ಸಿರಿಯನ್ನು ಅರಳಿಸಿ ಉದ್ಘಾಟಿಸಿ ಮಾತನಾಡಿದರು.
ತುಳುನಾಡಿನ ಸಂಸ್ಕೃತಿಯನ್ನು ಇಲ್ಲಿನ ಜನತೆ ಇಂದಿಗೂ ಉಳಿಸಿಕೊಂಡಿದ್ದಾರೆ. ಹೊಸ ತಲೆಮಾರು ಬಂದರೂ ಹಿಂದಿನ ಪರಂಪರೆಯನ್ನು ಉಳಿಸಿಕೊಂಡಿರುವುದು ಸ್ವಾಗತಾರ್ಹ. ಪಾರಂಪರಿಕ ಸಂಸ್ಕೃತಿಯನ್ನು ಆಚರಿಸಿಕೊಂಡು ಬಂದರೆ ಮಾತ್ರ ಅದು ಉಳಿಯುವುದು. ಮಾನವ ಬದುಕಿನಲ್ಲಿ ಸಂಘರ್ಷಗಳು ಹುಟ್ಟುವುದು ಸಂಸ್ಕೃತಿಯ ಕೊರತೆಯೇ ಕಾರಣ. ತುಳುವರು ಇದಕ್ಕೆ ಹೊರತಾಗಿ ಬೆಳೆದಿದ್ದಾರೆ ಎಂದು ಅವರು ಅಭಿನಂದಿಸಿದರು.
ಜೂನಿಯರ್ ಡಿವಿಜನ್ ನ್ಯಾಯಾಧೀಶೆ ಪ್ರತಿಭಾ ಡಿ.ಎಸ್. ಮಾತನಾಡಿ, ‘ನಾನು ,ಕೊಡಗಿನವಳಾದರೂ ನನ್ನ ಹೆತ್ತವರು ತುಳುನಾಡಿನವರು. ತುಳು ಸಂಸ್ಕೃತಿ ಶ್ರೀಮಂತ. ಮನೆಯಲ್ಲಿ ನಾವು ಈಗಲೂ ತುಳು ಮಾತನಾಡುತ್ತೇವೆ. ಕೋರ್ಟ್ ಆವರಣ ಇಂದು ಮದುವೆಯ ಹಾಲ್‌ನಂತೆ ಶೃಂಗಾರವಾಗಿದೆ. ಎಲ್ಲ ನ್ಯಾಯವಾದಿಗಳು ಮದುಮಗ ಮದುಮಗಳಂತೆ ಸಾಂಸ್ಕೃತಿಕ ಶಿಸ್ತಿನ ಬಟ್ಟೆ ತೊಟ್ಟಿರುವುದು ಆಕರ್ಷಣೀಯವಾಗಿದೆ. ಸುಳ್ಯದಿಂದ ಕೆಳಗೆ ಬಂದಂತೆ ಬಸ್ ನಿರ್ವಾಹಕ ಕೂಡ ತುಳುವಿನಲ್ಲಿ ಮಾತನಾಡುತ್ತಾನೆ’ ಎಂದು ಅಭಿನಂದಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಮದ್ಯಸ್ಥ ಮನ್ಮಥ ಶೆಟ್ಟಿ ಕೊಡಿಪ್ಪಾಡಿ ಮಾತನಾಡಿ, ತುಳುನಾಡು ಘಟ್ಟದ ಬದಿಯಿಂದ ಸಮುದ್ರದ ಬದಿಯ ತನಕ ವಿಶಾಲವಾದ ನಾಡು. ಇಂದು ಆಟಿದ ಕೂಟ ಫ್ಯಾಶನ್ ಎಂಬ ಮಟ್ಟಕ್ಕೆ ಬೆಳೆದಿದೆ. ಅದರ ಮೂಲ ಆಶಯ ತಿಳಿದು ಆಚರಿಸಬೇಕು ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಮಕ್ಕಳಿಗೆ ತುಳುವ ಸಂಸ್ಕೃತಿಯ ವೈಶಿಷ್ಟ್ಯ ತಿಳಿಸಬೇಕು. ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ನೀಡಿದರು.
ನ್ಯಾಯವಾದಿ ಚಂದ್ರಶೇಖರ ಪುಂಚಮೆ ಪ್ರಸ್ತಾವನೆ ನೀಡಿದರು. ನ್ಯಾಯವಾದಿ ರವೀಂದ್ರ ಕುಕ್ಕಾಜೆ ಸ್ವಾಗತಿಸಿ, ಶೈಲಜಾ ರಾಜೇಶ್ ವಂದಿಸಿದರು. ಕಾರ್ಯಕ್ರಮದ ಬಳಿಕ ತುಳುನಾಡಿನ ವಿವಿಧ ಖಾದ್ಯಗಳನ್ನು ಉಣಬಡಿಸಲಾಯಿತು.
ವಿಶೇಷ
ತುಳುನಾಡಿನ ಜಾನಪದ ವಸ್ತುಗಳ ಸಂಗ್ರಹ ಪ್ರದರ್ಶನ ವಿಶೇಷವಾಗಿತ್ತು. ಕಂಬಳದ ಕೋಣ, ಕೋಳಿ ಅಂಕಗಳ ಪ್ರದರ್ಶನ ಆಕರ್ಷಣೀಯವಾಗಿತ್ತು. ಅತಿಥಿಗಳಿಗೆ ಕಾಲಿಗೆ ನೀರು ಹಾಕಿ ಸ್ವಾಗತಿಸಿ ಬೆಲ್ಲ-ನೀರು, ಎಲೆ ಅಡಿಕೆ ನೀಡಿ ಗೌರವಿಸಿರುವುದು, ವಕೀಲರೆಲ್ಲ ತುಳುನಾಡಿನ ಸಾಂಪ್ರದಾಯಿಕ ಉಡುಗೆ ತೊಡುಗೆಗಳಲ್ಲಿ ಕಂಗೊಳಿಸಿದ್ದು, ಕೋರ್ಟಿನ ಆವರಣಕ್ಕೆ ತಳಿರು ತೋರಣ ಅಲಂಕಾರ, ತುಳುನಾಡಿನ ತಿಂಡಿ ವೈಶಿವೈಶಿಷ್ಟ್ಯಗಳ ರುಚಿಯನ್ನು ಉಣ ಬಡಿಸಿರುವ ಹೊಸತನ ಮೆಚ್ಚುಗೆಯಾಯಿತು.
–
ಮಹಮ್ಮದ್ ಇಮ್ತಿಯಾಜ್
ಅಹಮ್ಮದ್, ಸಿವಿಲ್ ಸೀನಿಯರ್
ಡಿವಿಜನ್ ನ್ಯಾಯಾಧೀಶರು