Advertisement

ವಿದ್ಯೆ ಜತೆ ವಿನಯಶೀಲತೆ ರಂಗ ಪೈ ವೈಶಿಷ್ಟ್ಯ:  ಡಾ|ಸಂಧ್ಯಾ  ಪೈ

01:01 AM Mar 21, 2022 | Team Udayavani |

ಉಡುಪಿ: ಹಿರಿಯ ಕಲಾ ಸಂಘಟಕ ಟಿ. ರಂಗ ಪೈ ಅವರಲ್ಲಿ ವಿದ್ಯೆಗೆ ತಕ್ಕುದಾದ ವಿನಯಶೀಲತೆ ಇದೆ ಎಂದು “ತರಂಗ’ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಹೇಳಿದರು.

Advertisement

ಉಡುಪಿ ಸಂಗೀತ ಸಭಾ ಅಧ್ಯಕ್ಷ, ಹಿರಿಯ ಕಲಾವಿದ ಮತ್ತು ಕಲಾ ಸಂಘಟಕ ಟಿ. ರಂಗ ಪೈ ಅವರಿಗೆ ಕಲಾಶ್ರೀ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಲಾ ಸಂಘಟನೆ ಕಲಾ ಕೋಸ್ಟ್‌ ರವಿವಾರ ಎಂಜಿಎಂ ಕಾಲೇಜಿನಲ್ಲಿ ಏರ್ಪಡಿಸಿದ ಅಭಿನಂದನ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಧಿಕಾರ, ವಿದ್ಯೆ ಇದ್ದಾಗ ಅಹಂಕಾರ ಸಹಜವಾಗಿ ಬರುತ್ತದೆ. ಆದರೆ ಇದಕ್ಕೆ ಅಪವಾದವಾಗಿ ಟಿ. ರಂಗ ಪೈ ಕಂಡುಬರುತ್ತಾರೆ. ಇದುವೇ ಅವರ ವೈಶಿಷ್ಟ್ಯ ಎಂದು ಸಂಧ್ಯಾ ಪೈ ಹೇಳಿದರು.

ಬಾಲ್ಯದಲ್ಲಿ ತಂದೆಯವರು ಸಂಗೀತಕ್ಕಾಗಿ ಕೊಟ್ಟ ಆದ್ಯತೆಯನ್ನು ಡಾ| ಟಿಎಂಎ ಪೈ ಪ್ರತಿಷ್ಠಾನದ ಕಾರ್ಯದರ್ಶಿ/ ಕೋಶಾಧಿಕಾರಿ ಅಶೋಕ್‌ ಪೈ ಬೆಟ್ಟುಮಾಡಿದರು. ಭಾರತದ ಸುಪ್ರಸಿದ್ಧ ಕಲಾವಿದರನ್ನು ಉಡುಪಿ, ಮಣಿಪಾಲಕ್ಕೆ ಕರೆತರುವಲ್ಲಿ ವಿಜಯನಾಥ ಶೆಣೈಯವರ ಜತೆ ರಂಗ ಪೈಯವರು ವಹಿಸಿದ ಪಾತ್ರ ಮಹತ್ವಪೂರ್ಣವಾದುದು ಎಂದು ಅಶೋಕ್‌ ಪೈ ಹೇಳಿದರು.

1971ರಲ್ಲಿ ಉಡುಪಿಯಲ್ಲಿ ಕಿಶೋರ್‌ ಕುಮಾರ್‌ ನೈಟ್‌ ಏರ್ಪಡಿಸಿದಾಗ ನಾನೂ ಪಾಲ್ಗೊಂಡಿದ್ದೆ. ಈ ಘಟನೆಯನ್ನು ಮರೆಯುವಂತಿಲ್ಲ. ಇದರಲ್ಲಿ ರಂಗ ಪೈಯವರ ಪಾತ್ರವಿತ್ತು ಎನ್ನುವುದು ಮತ್ತೆ ತಿಳಿಯಿತು ಎಂದು ಮಾಹೆ ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಸ್ಮರಿಸಿಕೊಂಡರು.

Advertisement

ಸಂಗೀತ ಕಲೆ ಶಿಕ್ಷಣಕ್ಕೆ ಪೂರಕ
ಶಿಕ್ಷಣದ ಜತೆ ಸಂಗೀತ ಕಲೆಗಳು ಸೇರಿಕೊಂಡರೆ ನವಿರಾಗುತ್ತದೆ ಎಂದು ಡಾ| ಟಿಎಂಎ ಪೈಯವರು ಕಂಡುಕೊಂಡಿದ್ದರು. ಇದಕ್ಕಾಗಿ ಮನೆಯಲ್ಲಿಯೇ ಸಂಗೀತದ ಕಲಿಕೆಯನ್ನು ಆರಂಭಿಸಿದರು. ಇದರಿಂದ ನಾನು ಪ್ರಭಾವಿತನಾಗಿ ಸಾಮಾನ್ಯ ಶಿಕ್ಷಣ ಮತ್ತು ಸಂಗೀತಕಲೆಗಳ ಸಮತೋಲನವನ್ನು ಕಾಯ್ದುಕೊಂಡೆ ಎಂದು ಅಭಿನಂದನೆಗೆ ಉತ್ತರವಾಗಿ ರಂಗ ಪೈ ನುಡಿದರು.

ಮಾಹೆ ವಿ.ವಿ. ಟ್ರಸ್ಟ್‌ ಟ್ರಸ್ಟಿ ಟಿ. ವಸಂತಿ ಆರ್‌. ಪೈ, ಹೆಸರಾಂತ ಕಲಾವಿದ ಪಂ| ಓಂಕಾರನಾಥ ಗುಲ್ವಾಡಿ, ಕಾರ್ಯಕ್ರಮದ ಸಂಯೋಜಕ ಕಲಾ ಕೋಸ್ಟ್‌ ಅಧ್ಯಕ್ಷ ಸುಧೀರ್‌ ನಾಯಕ್‌, ರಂಗ ಪೈಯವರ ಹಿರಿಯ ಸಹೋದರ ಗೋಕುಲದಾಸ ಪೈ, ಪತ್ನಿ ಸಂಗೀತಾ ರಂಗ ಪೈ ಉಪಸ್ಥಿತರಿದ್ದರು.

ಉದ್ಯಮಿ, ಕಲಾರಾಧಕ, ಕಾರ್ಯಕ್ರಮದ ರೂವಾರಿ ಮನೋಹರ ನಾಯಕ್‌ ಸ್ವಾಗತಿಸಿ, ಮಣಿಪಾಲ್‌ ಡಾಟ್‌ನೆಟ್‌ ಮುಖ್ಯ ತಾಂತ್ರಿಕ ಅಧಿಕಾರಿ ಡಾ| ಪ್ರಶಾಂತ ಭಟ್‌ ಕಾರ್ಯಕ್ರಮ ನಿರ್ವಹಿಸಿದರು.

ಹೆಸರಾಂತ ಕಲಾವಿದರಾದ ಯಶವಂತ ವೈಷ್ಣವ್‌ ಅವರ ತಬ್ಲಾ ಸೋಲೋ, ಮಿಳಿಂದ್‌ ರಾಯ್ಕರ್‌ ಅವರಿಂದ ವಯೋಲಿನ್‌ ವಾದನ, ಪಂ| ಓಂಕಾರನಾಥ್‌ ಗುಲ್ವಾಡಿ ತಬ್ಲಾ, ಶೌನಕ್‌ ಅಭಿಷೇಕಿ ಗಾಯನ ಕಾರ್ಯಕ್ರಮ ನಡೆಯಿತು.

 

Advertisement

Udayavani is now on Telegram. Click here to join our channel and stay updated with the latest news.

Next