ಚಾಮರಾಜನಗರ: ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ಕುರಿತು ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಮಿಂಚಿನ ನೋಂದಣಿ ಜಾಗೃತಿಗಾಗಿ ನಗರದಲ್ಲಿ ವಿದ್ಯಾರ್ಥಿಗಳು ನಡೆಸಿದ ಜಾಗೃತಿ ಜಾಥಾ ಗಮನ ಸಳೆಯಿತು. ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಿಂಚಿನ ನೋಂದಣಿ ಅರಿವು ಜಾಥಾಕ್ಕೆ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಹಸಿರು ನಿಶಾನೆ ತೋರುವ ಮೂಲಕ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಚಾಲನೆ ನೀಡಿದರು.
ಮೂರು ದಿನಗಳ ಕಾಲ ಜಾಥಾ: ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಮತದಾನದ ಹಕ್ಕು ಎಷ್ಟು ಮಹತ್ವ ಎಂದು ಪ್ರತಿ ಬಿಂಬಿಸುವ ನಿಟ್ಟಿನಲ್ಲಿ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ. 2020 ಜ.1ಕ್ಕೆ ಅನ್ವಯವಾಗುವಂತೆ 18 ವರ್ಷ ಪೂರೈಸಿದ ಪ್ರತಿಯೊಬ್ಬರು ಸಹ ಹೆಸರನ್ನು ನೋಂದವಣೆ ಮಾಡಿಕೊಳ್ಳುವಲ್ಲಿ ಜಾಗೃತಿ ಮೂಡಿಸುವ ಮೂರು ದಿನದ ಜಾಥಾ ಇದಾಗಿದೆ ಎಂದು ತಿಳಿಸಿದರು. 18 ವರ್ಷ ತುಂಬಿದ ಕೆಲವರು ಮತದಾರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳದೆ ಇರಬಹುದು. ಅವರಿಗೆ ಮತ್ತು ಮತದಾರ ಪಟ್ಟಿಯಲ್ಲಿ ಹೆಸರು ಬಿಟ್ಟಿರುವವರಿಗೂ ಸಹ ಹೆಸರು ಸೇರಿಸುವುದಕ್ಕೆ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಜಾಥಾ ನಡೆಸಲಾಗುತ್ತಿದೆ ಎಂದರು.
ಹೆಸರು ನೋಂದಾಣಿಗೆ ಜ.15 ಕಡೆ ದಿನ: ಯಾವುದೇ ಅಭ್ಯರ್ಥಿಯನ್ನು ಚುನಾವಣೆ ಮೂಲಕ ಯಾವುದೇ ನಿಷ್ಪಕ್ಷಪಾತವಿಲ್ಲದೆ ಆಯ್ಕೆ ಮಾಡುವಂತಹ ಜವಾಬ್ದಾರಿಯುತ ಕೆಲಸ ಮತದಾರದಾಗಿದೆ. ನಮೂನೆ 6 ಭರ್ತಿಮಾಡಿ ಕೊಟ್ಟಲ್ಲಿ ಮತದಾರಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳ ಬಹುದಾಗಿದೆ. ಹೆಸರು ನೋಂದಾಯಿಸಿಕೊಳ್ಳಲು ಜನವರಿ 15 ಕಡೆಯ ದಿನವಾಗಿದೆ ಎಂದು ತಿಳಿಸಿದರು. ಮತದಾನವು ಸಮಾನತೆಯ ಪ್ರತೀಕವಾಗಿದ್ದು, ಯಾವುದೇ ಜಾತಿ-ಧರ್ಮ,ಭೇದ-ಭಾವಗಳಿಲ್ಲದೆ ಕೂಡಿದೆ. ಸಂವಿಧಾನಕ್ಕೆ ಚ್ಯುತಿಯಾಗದ ಹಾಗೇ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಯವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಜಾಗೃತಿ ಮೂಡಿಸಲು ವಿದ್ಯಾರ್ಥಿಗಳು ಸಹಕರಿಸಿ: ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಎಚ್. ನಾರಾಯಣ್‌ರಾವ್ ಮಾತನಾಡಿ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನವು ಬಹಳ ಜವಾಬ್ದಾರಿಯುತ ಕಾರ್ಯವಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಹಕರಿಸಬೇಕು ಎಂದು ಹೆಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಭಾರತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಹಾಗೂ ಸಿಬ್ಬಂದಿ ಹಾಜರಿದ್ದರು.