ಗಂಗಾವತಿ: ಇತಿಹಾಸ ಪ್ರಸಿದ್ಧ ತಾಲೂಕಿನ ಆನೆಗೊಂದಿಯ ನವವೃಂದಾವನದಲ್ಲಿರುವ 9 ಯತಿಗಳ ವೃಂದಾವನ ದರ್ಶನ ಮಾಡುವುದು ಇನ್ಮುಂದೆ ಸರಳವಾಗುವುದು. ನವವೃಂದಾವನ ಗಡ್ಡಿಗೆ ಹೋಗಲು ವ್ಯಾಸರಾಯ(ರಾಜ) ಮಠದ ವತಿಯಿಂದ ತಾತ್ಕಲಿಕವಾಗಿ 200 ಮೀಟರ್ ಉದ್ದದ ಪ್ಲಾಸ್ಟಿಕ್ ಸೇತುವೆ ನಿರ್ಮಿಸಿದ್ದು ಗಮನ ಸೆಳೆಯುತ್ತಿದ್ದೆ. ಹೊಸಪೇಟೆ ತಾಲೂಕಿನ ವೆಂಕಟಾಪೂರ ಸೀಮೆಯ ದಂಡೆ ಮತ್ತು ನವವೃಂದಾವನ ಗಡ್ಡಿ ಮಧ್ಯೆ ತೇಲುವ ತಾತ್ಕಲಿಕ ಪ್ಲಾಸ್ಟಿಕ್ ಸೇತುವೆ ನಿರ್ಮಿಸಲಾಗಿದೆ.
ಗುರುವಾರದಿಂದ ಆರಂಭವಾಗಿರುವ ವ್ಯಾಸರಾಯ(ರಾಜ)ರ ಆರಾಧನಾ ಕಾರ್ಯಕ್ರಮದಲ್ಲಿ ವ್ಯಾಸರಾಯರ ಮಠದ ಪೂಜ್ಯರು ಪಾಲ್ಗೊಂಡು ಪೂಜೆ ಧಾರ್ಮಿಕ ಕಾರ್ಯಕ್ರಮ ನಡೆಸಲು ಅನಕೂಲವಾಗುವಂತೆ ಮಠದ ವತಿಯಿಂದ ತೇಲುವ ತಾತ್ಕಲಿಕ ಸೇತುವೆಯನ್ನು ಮಹಾರಾಷ್ಟ್ರದ ಪುಣೆಯ ಖಾಸಗಿ ಕಂಪನಿಯವರು ನಿರ್ಮಿಸಿದ್ದಾರೆ. ಸಾಮಾನ್ಯವಾಗಿ ಪ್ಲಾಸ್ಟಿಕ್ ನೀರಿನಲ್ಲಿ ತೇಲುತ್ತದೆ. ನವವೃಂದಾವನ ಗಡ್ಡಿ ಮತ್ತು ವೆಂಕಟಾಪೂರ ಸೀಮೆಯ ದಂಡೆಯಿಂದ ಸುಮಾರು 200 ಮೀಟರ್ ಅಂತರವಿದ್ದು, ಇಲ್ಲಿ ತುಂಗಭದ್ರಾ ನದಿ ನೀರು ಒಂದು ಮಡುವಿನಲ್ಲಿ ನಿಲ್ಲುತ್ತದೆ. ನಿಂತ ನೀರಿನಲ್ಲಿ ತೇಲುವ ಪ್ಲಾಸ್ಟಿಕ್ ಡಬ್ಬಿಗಳ ಮೂಲಕ ಸೇತುವೆ ನಿರ್ಮಾಣಗೊಂಡಿದೆ.
2+2 ಅಳತೆಯ 10 ಕೆಜಿ ಭಾರದ ಪ್ಲಾಸ್ಟಿಕ್ ಡಬ್ಬಿಗಳನ್ನು ಸರಿಯಾದ ರೀತಿಯಲ್ಲಿ ಜೋಡಿಸಿ ಲಾಕ್ ಮಾಡಲಾಗುತ್ತದೆ. ಎರಡು ದಂಡೆಯಿಂದ ಹಗ್ಗವನ್ನು ಬಿಗಿಯಾಗಿ ಕಟ್ಟಿ ಸೇತುವೆ ನಿರ್ಮಿಸಲಾಗುತ್ತದೆ. ಈ ಸೇತುವೆಯನ್ನು ನಿಂತ ನೀರಿನಲ್ಲಿ ಮಾತ್ರ ಜನರು ಸಂಚರಿಸಲು ಬಳಕೆ ಮಾಡಬಹುದು. ಭಾರವಾದ ವಸ್ತುಗಳನ್ನು ತೆಗೆದುಕೊಂಡ ಹೋದರೆ ಮುಳುಗುವ ಅವಕಾಶಗಳಿರುತ್ತವೆ. ಆರಾಧನಾ ಸಂದರ್ಭದಲ್ಲಿ ಮಾತ್ರ ತೇಲುವ ಪ್ಲಾಸ್ಟಿಕ್ ಸೇತುವೆ ನಿರ್ಮಿಸಿ ನಂತರ ತೆಗೆಯಲಾಗುತ್ತದೆ. ತಾತ್ಕಲಿಕ ಸೇತುವೆ ನಿರ್ಮಾಣದಿಂದ ಆರಾಧನೆಗೆ ಆಗಮಿಸುವ ಭಕ್ತರಿಗೆ ಮತ್ತು ಪೂಜ್ಯರಿಗೆ ಅನುಕೂಲವಾಗಿದೆ.
ವೆಂಕಟಾಪೂರ ಕಡೆಯಿಂದ ನವವೃಂದಾವನ ಗಡ್ಡಿಗೆ ಆಗಮಿಸಲು ತುಂಗಭದ್ರಾ ನದಿಯ ನಿಂತ ನೀರಿನಲ್ಲಿ ಎಲ್ಲ ಸುರಕ್ಷತಾ ಕ್ರಮಗಳಿಗೆ ಅನುಗುಣವಾಗಿ ಮಹಾರಾಷ್ಟ್ರದ ಪುಣೆಯ ಖಾಸಗಿ ಕಂಪನಿ ತೇಲುವ ತಾತ್ಕಲಿಕ ಸೇತುವೆ ನಿರ್ಮಿಸಿದೆ. ತಜ್ಞರ ತಾಂತ್ರಿಕತೆಗೆ ಅನುಗುಣವಾಗಿ ತೆಲುವ ಸೇತುವೆ ತುಂಗಭದ್ರಾ ನದಿಯಲ್ಲಿ ನಿರ್ಮಿಸಲಾಗಿದೆ. ನವವೃಂದಾವನದಲ್ಲಿರುವ 9 ಯತಿಗಳ ವೃಂದಾವನ ದರ್ಶನ ಮಾಡುವವರಿಗೆ ಇದರಿಂದ ಅನುಕೂಲವಾಗಿದೆ. ಆನೆಗೊಂದಿ ಭಾಗದಲ್ಲಿ ಇಂತಹ ತೇಲುವ ಸೇತುವೆ ನಿರ್ಮಾಣ ಅಸಾಧ್ಯವಾಗಿದೆ. ಆನೆಗೊಂದಿ ಕಡೆ ತುಂಗಭದ್ರಾ ನದಿಯಲ್ಲಿ ಕಲ್ಲು ಬಂಡೆ ಹಾಗೂ ನೀರಿನ ಹರಿವು ರಭಸವಾಗಿರುವುದರಿಂದ ಸೇತುವೆ ನಿರ್ಮಾಣ ಅಸಾಧ್ಯವಾಗಿದೆ.
-ಸುಮಂತ ಕುಲಕರ್ಣಿ, ವ್ಯವಸ್ಥಾಪಕರು ಶ್ರೀರಾಘವೇಂದ್ರಸ್ವಾಮಿ ಮಠ ಆನೆಗೊಂದಿ
-ಕೆ.ನಿಂಗಜ್ಜ