Advertisement

ಗಮನ ಸೆಳೆಯುತ್ತಿದೆ ಕರಮುಡಿ ಪ್ರಾಥಮಿಕ ಶಾಲೆ

10:38 AM Jul 07, 2019 | Suhan S |

ಯಲಬುರ್ಗಾ: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಎಂದರೆ ಸಾರ್ವಜನಿಕರು ಮೂಗು ಮುರಿಯುವವರೇ ಹೆಚ್ಚು. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವುದಿಲ್ಲ, ಚೆನ್ನಾಗಿ ಅಭ್ಯಾಸ ಆಗುವುದಿಲ್ಲ ಎನ್ನುವ ನೆಪದಿಂದ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ಮಕ್ಕಳನ್ನು ಆಕರ್ಷಿಸಲು ತಾಲೂಕಿನ ಕರಮುಡಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೆ ರೈಲ್ವೆಯಂತೆ ಬಣ್ಣ ಬಳಿಯಲಾಗಿದೆ.

Advertisement

ಹೈದ್ರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಎಚ್ಕೆಆರ್‌ಡಿಬಿ ಮೈಕ್ರೋ ಯೋಜನೆಯಡಿ ಅಂದಾಜು 42.66 ಲಕ್ಷದಲ್ಲಿ ಆರು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಈ ನೂತನ ಕೊಠಡಿಗಳಿಗೆ ರೈಲ್ವೆ ಮಾದರಿಯ ಬಣ್ಣ ಲೇಪಿಸಲಾಗಿದೆ. ಈ ಶಾಲೆಯು 1ರಿಂದ 8ನೇ ತರಗತಿವರೆಗೆ ಇದೆ. 380 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, 9 ಶಿಕ್ಷಕರಿದ್ದಾರೆ. ಶಾಲೆಯ ಫಲಿತಾಂಶ ನೂರಕ್ಕೆ ನೂರರಷ್ಟು ಇದೆ.

ದಾಖಲಾತಿ ಹೆಚ್ಚಳಕ್ಕೆ ಪ್ರಯತ್ನ: ಮಕ್ಕಳಿಗೆ ಕೇವಲ ವಿದ್ಯಾಭ್ಯಾಸ ಕಲಿಸಿದರೆ ಸಾಲದು. ವಿಭಿನ್ನ ರೀತಿಯಲ್ಲಿ ಇಂತಹ ಕಾರ್ಯ ಮಾಡುವುದರಿಂದ ಮಕ್ಕಳಲ್ಲಿ ಕಲಿಕಾ ಆಸಕ್ತಿ, ಕ್ರಿಯಾಶೀಲತೆ ಹೆಚ್ಚುತ್ತದೆ. ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಶಾಲೆಯತ್ತ ಬರುತ್ತಾರೆ. ಇದರಿಂದ ದಾಖಲಾತಿ ಸಂಖ್ಯೆ ಹೆಚ್ಚಳವಾಗಿ ಬದಲಾವಣೆಗೆ ಕಾರಣವಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ಇಂತಹ ಕ್ರಮಕ್ಕೂ ಮುಂದಾಗಿದೆ. ಈ ಮೂಲಕ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳತ್ತ ಆಕರ್ಷಿಸಲು ಹೊಸ ಪ್ರಯತ್ನ ನಡೆದಿದೆ.

ನೂತನವಾಗಿ ನಿರ್ಮಾಣಗೊಂಡಿರುವ ಆರು ಕಟ್ಟಡಗಳಿಗೆ ಭಾರತೀಯ ರೈಲ್ವೆ ಮಾದರಿ ಕೆಂಪು, ಹಳದಿ ಹಾಗೂ ನೀಲಿ ಬಣ್ಣ ಲೇಪಿಸಿ ಎಂಜಿನ್‌ ಹಾಗೂ ಬೋಗಿಯ ಮಾದರಿ ಬಣ್ಣ ಬಳಿಯಲಾಗಿದೆ. ಕಿಟಕಿ ಸರಳುಗಳ ಚಿತ್ರಣ ಬಿಡಿಸಿ ರಂಗುಗೊಳಿಸಲಾಗಿದೆ. ಮಕ್ಕಳ ಆಸಕ್ತಿದಾಯಕ ಕಲಿಕೆಗೆ ಮುಂದಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವ ಇತ್ತೀಚಿನ ದಿನಗಳಲ್ಲಿ ಇಂತಹ ನೂತನ ಪ್ರಯೋಗ ಮಾಡುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

Advertisement

 

ಗ್ರಾಮಾಂತರ ಶಾಲೆಗಳು ಮುಚ್ಚುವ ಹಂತ ತಲುಪುತ್ತಿರುವ ಈ ದಿನಗಳಲ್ಲಿ ಇಂತಹ ಪ್ರಯೋಗ ಮಕ್ಕಳಲ್ಲಿ ಉತ್ಸಾಹ ತುಂಬಿ ಕಲಿಕೆಯಲ್ಲಿ ಆಸಕ್ತಿ ಹೆಚ್ಚುವಂತೆ ಮಾಡುತ್ತದೆ. ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುತ್ತದೆ. ಶಾಲಾ ವಾತಾವರಣ ಬದಲಿಸಲು ಇಂತಹ ಪ್ರಯತ್ನ ಅಗತ್ಯ•ವೀರಪ್ಪ ನಿಂಗೋಜಿ, ಗ್ರಾಮಸ್ಥ

ಮಕ್ಕಳ ಪಠ್ಯೇತರ ಚಟುವಟಿಕೆಗೂ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ದಿನನಿತ್ಯ ಶಾಲೆಗೆ ತಪ್ಪದೇ ಬರಲು ಇದೊಂದು ನಿದರ್ಶನವಾಗಲಿದೆ. ರೈಲ್ವೆ ಫ್ಲಾಟ್ಪಾರ್ಮ್ನಲ್ಲಿ ನಿಂತು ಆಟ ಆಡುವ ರೀತಿ ಮಕ್ಕಳಿಗೆ ಭಾಸವಾಗುತ್ತದೆ. ಇದರಿಂದ ಶಾಲೆಯತ್ತ ಮಕ್ಕಳ ಆಕರ್ಷಣೆಯಾಗಿ ದಾಖಲಾತಿ ಹೆಚ್ಚಳವಾಗುತ್ತದೆ.•ಸಾವಿತ್ರಿ ನಿಡಗುಂದಿ, ಮುಖ್ಯಶಿಕ್ಷಕಿ

 

•ಮಲ್ಲಪ್ಪ ಮಾಟರಂಗಿ

Advertisement

Udayavani is now on Telegram. Click here to join our channel and stay updated with the latest news.

Next